Tuesday, August 26, 2025
Google search engine
HomeUncategorizedಈದ್ಗಾ ಮೈದಾನಕ್ಕೆ ಬೇಲಿ, ರಂಜಾನ್​ ಮುಗಿಯುತ್ತಿದ್ದಂತೆ ಶಿವಮೊಗ್ಗ ಉದ್ವಿಗ್ನ..!

ಈದ್ಗಾ ಮೈದಾನಕ್ಕೆ ಬೇಲಿ, ರಂಜಾನ್​ ಮುಗಿಯುತ್ತಿದ್ದಂತೆ ಶಿವಮೊಗ್ಗ ಉದ್ವಿಗ್ನ..!

ಶಿವಮೊಗ್ಗ : ಜಿಲ್ಲೆಯ ಡಿಸಿ ಕಚೇರಿ ಮುಂಭಾಗದಲ್ಲಿರುವ ಈದ್ಗಾ ಮೈದಾನದ ವಿವಾದ ಮತ್ತಷ್ಟು ಉಲ್ಬಣಗೊಳ್ಳುವ ಎಲ್ಲಾ ಲಕ್ಷಣ ಕಾಣಿಸಿಕೊಳ್ಳತೊಡಗಿದೆ. ರಂಜಾನ್ ಹಬ್ಬದ ಬಳಿಕ ಮೈದಾನಕ್ಕೆ ಬೇಲಿ ಹಾಕಿದ್ದ ಮುಸ್ಲಿಂರು, ಈ ಜಾಗ ನಮ್ಮದೇ ಎನ್ನುತ್ತಿದ್ದಾರೆ. ಈ ಜಾಗದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಹಾಗಾಗಿ ನಾವು ಯಾರಿಗೂ ಈ ಮೈದಾನದಲ್ಲಿ ಎಂಟ್ರಿ ಕೊಡಲ್ಲ ಎನ್ನುತ್ತಿದ್ದು, ಇಂದು ಡಿಸಿ ಜೊತೆ ಸಭೆ ಕೂಡ ನಡೆಸಿದ್ದಾರೆ.

ಹೌದು, ತಣ್ಣಗಿದ್ದ ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ಈಗ ಏಕಾಏಕೀ, ಈದ್ಗಾ ಮೈದಾನ ಜಾಗದ ವಿವಾದದ ಮೂಲಕ ಹೊಗೆಯಾಡುವಂತಾಗಿದೆ. ಕಳೆದೆರೆಡು ದಿನಗಳ ಹಿಂದೆ ರಂಜಾನ್ ಹಬ್ಬ ಆಚರಣೆ ಮಾಡಿದ್ದ ಮುಸಲ್ಮಾನರು,  ಈದ್ಗಾ ಮೈದಾನದಲ್ಲಿ ಇದ್ದಕ್ಕಿದ್ದಂತೆ ಬೇಲಿ ಹಾಕಿದ್ದಾರೆ. ಇದಕ್ಕೆ ಆಕ್ರೋಶಗೊಂಡಿದ್ದ ಹಿಂದೂ ಪರ ಸಂಘಟನೆ ಕಾರ್ಯಕರ್ತರು, ಈ ತೀರ್ಮಾನದ ವಿರುದ್ಧ ಪ್ರತಿಭಟಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಜಿಲ್ಲಾ ಎಸ್.ಪಿ. ಮಿಥುನ್ ಕುಮಾರ್ ಬೇಲಿ ತೆಗೆಸಿ, ಪೊಲೀಸ್ ಇಲಾಖೆಯ ಯಾರಿಗೂ ಒಳಪ್ರವೇಶಿಸದಂತೆ, ಬ್ಯಾರಿಕೇಡ್ ಅಳವಡಿಸಿದ್ದು,  ಈದ್ಗಾ ಮೈದಾನ ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ. ಅದರಂತೆ, ಮುಸ್ಲಿಂ ಸಂಘಟನೆಗಳು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ್ದು. ನಾವು ಶಾಂತಿ ಪ್ರಿಯರು, ಈ ಜಾಗ ನಮ್ಮದು. ಈ ಜಾಗ ವಕ್ಫ್ ಗೆ ಸೇರಿದ್ದು, ಪಾಲಿಕೆಗೆ ಟ್ಯಾಕ್ಸ್ ಕಟ್ತಾ ಇದಿವಿ. ಈ ಜಾಗ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಅಂತಾ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ :ಆಡು ಮುಟ್ಟದ ಸೊಪ್ಪಿಲ್ಲ, ಸಿದ್ದರಾಮಯ್ಯ ಸರ್ಕಾರ ಹಾಕದ ತೆರಿಗೆಯೇ ಇಲ್ಲ; ಸಿ.ಟಿ ರವಿ

ಇನ್ನು ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿ ಹಾಗೂ ಎಸ್.ಪಿ. ಮುಸ್ಲಿಂ ಸಮುದಾಯದ ಮುಖಂಡರೊಡನೆ ಸಭೆ ಕೂಡ ನಡೆಸಿದ್ದು. ಈ ವೇಳೆ ಸಭೆಯಲ್ಲಿ, ಸುನ್ನಿ ಈದ್ಗಾ ಮೈದಾನ ಮುಸ್ಲಿಂ ಸಮುದಾಯದ ವಕ್ಫ್ ಆಸ್ತಿಯಾಗಿದ್ದು, ಕರ್ನಾಟಕ ರಾಜ್ಯಪತ್ರದ ಅಧಿಸೂಚನೆ 1965ರ 288ರ ಅನ್ವಯ ವಖ್ಫ್ ಆಸ್ತಿ ಎಂದು ಆದೇಶವಾಗಿದೆ. ಮುನ್ಸಿಪಲ್ ಖಾತಾವನ್ನು ಹೊಂದಿರುತ್ತದೆ. ಈ ಮೈದಾನ ಈಗ ಗಾಂಧಿ ಬಜಾರಿನ ಮರ್ಕಜಿ ಸುನ್ನಿ ಜಾಮಿಯಾ ಮಸೀದಿಯವರ ಅಧೀನದಲ್ಲಿದೆ. ಇದರ ನಿರ್ವಹಣೆಯನ್ನು ಜಾಮಿಯಾ ಮಸಿದಿಯೇ ಮಾಡಿಕೊಂಡು ಬಂದಿರುತ್ತದೆ ಎಂದು ಮನವರಿಕೆ ಮಾಡಿದ್ದರು.

ಅಲ್ಲದೇ, ಈ ಮೈದಾನದಲ್ಲಿ ಕೆಲವರು ಅನಧಿಕೃತ ವಾಹನ ನಿಲುಗಡೆ ಮಾಡುತ್ತಿದ್ದಾರೆ. ಮತ್ತೆ ಕೆಲವು ಕಿಡಿಗೇಡಿಗಳು ರಾತ್ರಿ ವೇಳೆ ಹಾಗೂ ರಜಾ ದಿನಗಳಲ್ಲಿ ಅನೈತಿಕ ಚಟುವಟಿಕೆಗಳ ತಾಣವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಅಂತಾ ಆರೋಪಿಸಿದ್ದರು. ಸಭೆ ಬಳಿಕ ಸದ್ಯಕ್ಕೆ ಯಥಾಸ್ಥಿತಿ ಮುಂದುವರೆಸಿಕೊಂಡು ಹೋಗಲು ಸಭೆಯಲ್ಲಿ ನಿರ್ಧರಿಸಲಾಗಿದ್ದು, ಮೈದಾನದೊಳಗೆ ಸದ್ಯಕ್ಕೆ ಯಾರಿಗೂ ಎಂಟ್ರಿ ಇಲ್ಲ ಎಂದು ತೀರ್ಮಾನಿಸಲಾಯಿತು.

ಒಟ್ಟಾರೆ, ಇಂದು ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ಮೈದಾನ ಹಾಗೂ ಡಿಸಿ ಕಚೇರಿ ಸುತ್ತ ಮುತ್ತ ಬಾರೀ ಪೋಲಿಸ್ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಮೈದಾನದೊಳಗೆ ಯಾವ ವಾಹನಗಳೂ ಪ್ರವೇಶಿಸದಂತೆ ನಿರ್ಭಂದ ಹೇರಲಾಗಿತ್ತು. ಸದ್ಯ ವಿವಾದ ತಣ್ಣಗಾದಂತೆ ಕಂಡರೂ, ಈ ವಿವಾದ ಬೂದಿ ಮುಚ್ಚಿದ ಕೆಂಡದಂತೆ ಅನ್ನೋದು ಮಾತ್ರ ಸುಳ್ಳಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments