Saturday, February 22, 2025

ಬೇಸಿಗೆ ಆರಂಭ: ಕಾಡ್ಗಿಚ್ಚಿನಿಂದ ಬಂಡೀಪುರ ಅರಣ್ಯ ರಕ್ಷಿಸಲು ಮುನ್ನೆಚ್ಚರಿಕೆ ಕೈಗೊಂಡ ಅರಣ್ಯ ಇಲಾಖೆ

ಚಾಮರಾಜನಗರ : ಬೇಸಿಗೆ ಆರಂಭವಾದರೆ ಸಾಕು, ಕಾಡ್ಗಿಚ್ಚಿನ ಭಯ ಅರಣ್ಯಾಧಿಕಾರಿಗಳಲ್ಲಿ ಮನೆ ಮಾಡುತ್ತದೆ. ಎಷ್ಟೇ ಮುನ್ನೆಚ್ಚರಿಕೆ ವಹಿಸಿದರು. ಕೆಲವೊಮ್ಮೆ ಕಾಡ್ಗಿಚ್ಚಿನಿಂದ ಇಡೀ ಅರಣ್ಯವೇ ಸುಟ್ಟು ಬೂದಿಯಾಗಿತ್ತದೆ. ಇನ್ನು ಕೆಲವು ಭಾರಿ ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ. ಇವೆಲ್ಲದರಿಂದ ಅರಣ್ಯ ಕಾಪಾಡಿಕೊಳ್ಳಲು ಬಂಡೀಪುರ ಹುಲಿ ಸಂರಕ್ಷಿನ ಪ್ರದೇಶದಲ್ಲಿ ಅರಣ್ಯಧಿಕಾಗಳು ಕ್ರಮ ಕೈಗೊಂಡಿದ್ದು. ಏನೇನೂ ಕ್ರಮ ಕೈಗೊಂಡಿದ್ದಾರೆ ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ.

ಹೌದು..ಈಗಷ್ಟೇ ಬೇಸಿಗೆ ಆರಂಭವಾಗಿದ್ದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು ಒಣಗತೊಡಗಿದೆ. ಹಾಗಾಗಿ ಬೆಂಕಿಯಿಂದ ಅರಣ್ಯ ಸಂಪತ್ತು ರಕ್ಷಿಸಲು ಅರಣ್ಯ ಇಲಾಖೆ ಹಲವು ಮುಂಜಾಗ್ರತಾ ಕ್ರಮವನ್ನು ಪ್ರತಿ ಬಾರಿಯೂ ಮಾಡುತ್ತಲೇ ಬಂದಿದೆ. ಇನ್ನು ಈ ಬಾರಿಯೂ ಈಗಾಗಲೇ ಕಾರ್ಯಪ್ರವೃತ್ತರಾಗಿರುವ ಅರಣ್ಯಾಧಿಕಾರಿಗಳು, ಪ್ರಮುಖವಾಗಿ ಬೆಂಕಿ ರೇಖೆ ( ಫೈರ್ ಲೈನ್) ನಿರ್ಮಾಣ ಮಾಡಲಾಗುತ್ತಿದೆ.

ಕಾಡಿನಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಬೆಂಕಿ ಹಬ್ಬದಂತೆ ಬಂಡಿಪುರದ ಮದ್ಯೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಹಾಗು ಸುತ್ತಮುತ್ತಲ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗಗಗಳಲ್ಲಿ ಬೆಂಕಿ ರೇಖೆ ನಿರ್ಮಿಸಲಾಗುತ್ತಿದೆ. ರಸ್ತೆ ಬದಿ ಬೆಳೆದು ನಿಂತಿರುವ ಕಳೆ ಗಿಡಗಳನ್ನು ಕತ್ತರಿಸಿ ಒಣಗಿದ ಎಲೆಗಳು ಹಾಗು ಒಣ ಹುಲ್ಲಿಗೆ ಬೆಂಕಿ ಹಚ್ಚಿ ಸುಡಲಾಗುತ್ತಿದೆ.. ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ 13 ವಲಯಗಳಲ್ಲೂ ತಲಾ 250 ಕಿಲೋಮೀಟರ್ ನಂತೆ ಸುಮಾರು 3000 ಕಿಲೋಮೀಟರ್ ಬೆಂಕಿ ರೇಖೆ ನಿರ್ಮಾಣ ಮಾಡಲಾಗುತ್ತಿದೆ.

ಇದನ್ನೂ ಓದಿ :Viral Video: ಕೋರ್ಟ್​ ಆವರಣದಲ್ಲೆ ಕಚ್ಚಾಡಿದ ಅತ್ತೆ-ಸೊಸೆ, ಸಾಥ್​ ನೀಡಿದ ಕುಟುಂಬಸ್ಥರು

ಹೀಗೆ ರಸ್ತೆಯ ಇಕ್ಕೆಲಗಳಲ್ಲಿ ಮೊದಲೇ ಬೆಂಕಿ ಹಾಕಿ ನಂದಿಸುವುದರಿಂದ ಬೆಂಕಿ ಕಾಡಿಗೆ ಹಬ್ಬುವುದಿಲ್ಲ. ಬೆಂಕಿ ರೇಖೆ ನಿರ್ಮಾಣವಷ್ಟೇ ಅಲ್ಲದೆ ಪ್ರತಿಯೊಂದು ವಲಯಕ್ಕೂ ನೀರಿನ ಟ್ಯಾಂಕರ್, ಫೈರ್ ಮೀಟರ್ಸ್, ಪಿಕಪ್ ವಾಹನ ಸೇರಿದಂತೆ ಅಗ್ನಿಶಾಮಕ ಉಪಕರಣಗಳನ್ನು ಸನ್ನದ್ಧವಾಗಿ ಇಡಲಾಗಿದೆ ಎನ್ನಲಾಗಿದೆ‌.ಇನ್ನು ಬೆಂಕಿ ರೇಖೆ ನಿರ್ಮಾಣಕ್ಕೆ ಹಾಗು ಬೆಂಕಿ‌ನಂದಿಸಲು ಹೊರಗುತ್ತಿಗೆ ಆಧಾರದ ಮೇಲೆ 455 ಫೈರ್ ವಾಚರ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಕಾಡಿನ ಬಗೆ ಹೆಚ್ಚು ಅರಿವಿರುವ ಸ್ಥಳೀಯ ಸೋಲಿಗರಿಗೆ ಆದ್ಯತೆ ನೀಡಲಾಗಿದೆ.

ಇನ್ನು ಅಂದುಕೊಂಡಂತೆ ಹಾಗೂ ಅವರು ಪ್ಲಾನ್ ಮಾಡಿದಂತೆ ಎಲ್ಲ ನಡೆದು ಕಾಡು ರಕ್ಷಣೆಯಾಗಿ ಮತ್ತಷ್ಟು ಅಭಯಾರಣ್ಯವಾಗಬೇಕಾಗಿದೆ. ಒಟ್ಟಾರೆ ಬೆಂಕಿ ಬಿದ್ದಾಗ ಕ್ರಮ ಕೈಗೊಳ್ಳುವ ಬದಲು ಮೊದಲೇ ಸಮರೋಪಾದಿಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಯಾರದ್ದೋ ಮೇಲಿನ ದ್ವೇಷ ಮತ್ತು ಸ್ವಾರ್ಥಕ್ಕಾಗಿ ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಾಕದೇ ಇರಲಿ. ಅಮೂಲ್ಯ ಅರಣ್ಯ ಸಂಪತ್ತು ನಾಶವಾಗದಿರಲಿ ಎಂಬುದು ನಮ್ಮೆಲ್ಲರ ಹಾರೈಕೆಯಾಗಿದೆ.

RELATED ARTICLES

Related Articles

TRENDING ARTICLES