ಮಂಡ್ಯ : ಹುಟ್ಟುವಾಗ ಅಣ್ಣ ತಮ್ಮ ಬೆಳೆಯುತ್ತ ದಾಯಾದಿಗಳು ಅನ್ನೋ ಮಾತಿದೆ. ಇದಕ್ಕೆ ಸಾಕ್ಷಿ ಎಂಬಂತೆ ತುಂಡು ಭೂಮಿಗಾಗಿ ತಮ್ಮನನ್ನ ಅಣ್ಣನೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾನೆ. ಕೊಲೆ ಮಾಡಿಸಿದ ನಂತರ ಆ ಪಾಪವನ್ನು ತೊಳೆದುಕೊಳ್ಳೋಕೆ ಕುಂಭಮೇಲಕ್ಕೆ ಹೋಗಿದ್ದಾನೆ.
ಹೌದು.., ಇಂತಾದ್ದೊಂದು ಘಟನೆ ನಡೆದಿದ್ದು ಮಂಡ್ಯ ಜಿಲ್ಲೆಯ ಮದ್ದೂರಿನ ಲಕ್ಷ್ಮೇಗೌಡನದೊಡ್ಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೃಷ್ಣೇಗೌಡ ಎಂಬಾತ ಕಳೆದ 4 ದಿನಗಳ ಹಿಂದೆ ಗ್ರಾಮದಲ್ಲಿ ಈತನನ್ನ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ತದನಂತರ ಪ್ರಕರಣ ದಾಖಲಿಸಿಕೊಂಡ ಕೆಎಂ ದೊಡ್ಡಿ ಪೊಲೀಸರು ತನಿಖೆ ನಡೆಸಿ, ಹತ್ಯೆಗೆ ಕಾರಣನಾದ ಕೃಷ್ಣೇಗೌಡನ ಅಣ್ಣ ಶಿವನಂಜೇಗೌಡ ಸೇರಿದಂತೆ ಒಟ್ಟು 8 ಜನ ಆರೋಪಿತರನ್ನ ಬಂಧಿಸಿದ್ದಾರೆ.
ಇದನ್ನೂ ಓದಿ :ರಾಜ್ಯದ ಏಳು ಕೋಟಿ ಕನ್ನಡಿಗರೂ ದೇವೇಗೌಡರ ಜೊತೆ ಇದ್ದೇವೆ: ಸಿದ್ದರಾಮಯ್ಯ
ಹೌದು.. ತಮ್ಮ ಕೃಷ್ಣೇಗೌಡನನ್ನ ಅಣ್ಣ ಶಿವನಂಜೇಗೌಡ 5 ಲಕ್ಷ ಸುಪಾರಿ ನೀಡಿ ಕೊಲೆ ಮಾಡಿಸಿದ್ದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ಜಮೀನು ವಿಚಾರವಾಗಿ ತಮ್ಮನ ಜೊತೆ ಮುನಿಸಿಕೊಂಡಿದ್ದ ಶಿವನಂಜೇಗೌಡ ತಮ್ಮನ ಕಥೆ ಮುಗಿಸಲು ಪ್ಲಾನ್ ಮಾಡಿಕೊಂಡಿದ್ದ ಅದರಂತೆ ನಿಟ್ಟೂರು ಗ್ರಾಮದ ಚಂದ್ರಶೇಖರ್ ಎಂಬಾತನಿಗೆ 5 ಲಕ್ಷಕ್ಕೆ ಡೀಲ್ ಕುದುರಿಸಿದ್ದ. ಇತ್ತ ಡೀಲ್ ಕೊಟ್ಟು ಅತ್ತ ಪಾಪ ಕಳೆದುಕೊಳ್ಳಲು ಶಿವನಂಜೇಗೌಡ ಪ್ರಯೋಗ್ ರಾಜ್ನ ಕುಂಭ ಮೇಳಕ್ಕೆ ಹೋಗಿದ್ದ. ಇತ್ತ ಪ್ಲಾನ್ ಪ್ರಕಾರ ಫೆಬ್ರವರಿ 11 ರ ಬೆಳ್ಳಂ ಬೆಳಗ್ಗೆ ಕೃಷ್ಣೇಗೌಡನನ್ನ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ಇನ್ನು ಕೊಲೆ ಮಾಡಿಸಿ ಏನು ಗೊತ್ತಿಲ್ಲದಂತೆ ಗ್ರಾಮದಲ್ಲಿ ಕಣ್ಣೀರು ಸುರಿಸ್ತಿದ್ದ ಶಿವನಂಜೇಗೌಡನನ್ನ ಕೆಎಂ ದೊಡ್ಡಿ ಪೊಲೀಸರು ವಶಕ್ಕೆ ಪಡೆದುಕೊಂಡು ಜೈಲಿಗಟ್ಟಿದ್ದಾರೆ. ಮತ್ತೊಂದು ಕಡೆ ಪತಿ ಕಳೆದುಕೊಂಡ ಕೃಷ್ಣೇಗೌಡನ ಪತ್ನಿ ಶಿವನಂಜೇಗೌಡನ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು, ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾರೆ. ಸದ್ಯ ಶಿವನಂಜೇಗೌಡ ಸೇರಿದಂತೆ 8 ಜನ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಆದ್ರೆ ಒಂದೆ ತಾಯಿ ಹೊಟ್ಟೆಯಲ್ಲಿ ಹುಟ್ಟಿ ಅತಿ ಆಸೆಗೆ ಬಿದ್ದು ತಮ್ಮನನ್ನ ಕೊಲೆ ಮಾಡಿಸಿದ್ದು ಮಾತ್ರ ದುರಂತವೇ ಸರಿ.