Thursday, April 24, 2025

ಕಿವಿಯೋಲೆ ಅಡವಿಟ್ಟು ಲೋನ್‌ ಕೇಳಿದ ಅಜ್ಜಿ: ಹಳೆ ಸಾಲಕ್ಕೆ ಮನ್ನಾ ಎಂದ ಬ್ಯಾಂಕ್‌

ಶಿವಮೊಗ್ಗ : ಭಾರತ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಜೈಲು ಅನುಭವಿಸಿದ ಮಹಾನ್ ದೇಶ ಪ್ರೇಮಿಗಳಿಗೆ ಸರ್ಕಾರ ಪಿಂಚಣಿ ನೀಡುವ ಮೂಲಕ ಅವರ ಕುಟುಂಬದ ಮನೋಸ್ಥೈರ್ಯ ಹೆಚ್ಚಿಸಿ ಅವರನ್ನು ದೇಶದ ಆಸ್ತಿಯೆಂದು ಪರಿಗಣಿಸುತ್ತಿದೆ. ಅಂತಹ ಫ್ರೀಡಂ ಫೈಟರ್ ಪತ್ನಿಗೆ ಲೋನ್ ಕಟ್ಟಿಲ್ಲವೆಂದು ಕಿವಿಯಲ್ಲಿದ್ದ ಓಲೆಯನ್ನು ಬ್ಯಾಂಕ್ ನವರು ಮಂಗಮಾಯ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರಿನಲ್ಲಿ ನಡೆದಿರುವ ಬಗ್ಗೆ ದೂರು ದಾಖಲಾಗಿದೆ.

ಹೌದು, ಹೊಸನಗರ ತಾಲೂಕಿನ ಬಿಲ್ಲೇಶ್ವರ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಎಸ್ ಚನ್ನವೀರಪ್ಪ ನವರ ಪತ್ನಿ ಹಾಲಮ್ಮನವರಿಗೆ ಕಳೆದ ನಾಲ್ಕೈದು ತಿಂಗಳುಗಳಿಂದ ಪಿಂಚಣಿ ಹಣ ಬರುತ್ತಿಲ್ಲ. ಇದರ ನಡುವೆ ಈ ಹಿಂದೆ ಮನೆ ದುರಸ್ಥಿಗೆಂದು ಪಿಂಚಣಿ ಹಣದ ಆಧಾರದ ಮೇಲೆ ಮಾಡಿದ್ದ ಲೋನ್​ನ ಒಂದು ಕಂತು ಕಟ್ಟಿಲ್ಲವೆಂದು ಕಿವಿಯಲ್ಲಿದ್ದ ಓಲೆಯನ್ನು ಪಡೆದು 86ರ ವಯೋವೃದ್ದೆಗೆ ನಿಂದಿಸಿ ಹೊರದಬ್ಬಿರುವ ಬಗ್ಗೆ ಕೋಣಂದೂರು ಉಪಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ : ಅಳಿಯ ಎಂಬುದನ್ನು ನೋಡದೆ ಕಾರದ ಪುಡಿ ಎರಚಿ ಥಳಿಸಿದ ಅತ್ತೆ: ಸಾಥ್​ ನೀಡಿದ ಹೆಂಡತಿ

ಪಿಂಚಣಿ ಹಣದ ಆಧಾರದ ಮೇಲೆ ಮನೆ ದುರಸ್ಥಿಗೆ ಕೋಣಂದೂರು ಕೆನರಾ ಬ್ಯಾಂಕ್​ನಲ್ಲಿ ಸಾಲ ಪಡೆದಿದ್ದ ವೃದ್ದೆ ಕಳೆದ ನಾಲ್ಕು ತಿಂಗಳುಗಳಿಂದ ಪಿಂಚಣಿ ಹಣ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಲೋನ್ ತೀರುವಳಿ ಮಾಡಿರಲಿಲ್ಲ ಹಾಗೇಯೇ ಫೆ. 10 ರಂದು ಮನೆಯಲ್ಲಿ ರೇಷನ್ ಕೊರತೆಯ ಕಾರಣ ಕಿವಿಯಲ್ಲಿದ್ದ ಓಲೆ, ಚೈನ್ ನ್ನು ಅಡವಿಟ್ಟು ಹೊಟ್ಟೆ ಚೀಲ ತುಂಬಿಸಿಕೊಳ್ಳಲು ಬ್ಯಾಂಕ್​ಗೆ ಬಂದರೇ ಕಲ್ಲು ಮನಸ್ಸಿನ ಬ್ಯಾಂಕ್ ಅಧಿಕಾರಿಗಳು ಚೈನ್​ನ್ನು ಪಡೆದು ಹಣ ನೀಡದೇ ಅವಾಚ್ಯವಾಗಿ ಏಕವಚನದಲ್ಲಿ ನಿಂದಿಸಿ ಹೊರದಬ್ಬಿದ್ದಾರಂತೆ.

ಬ್ಯಾಂಕ್ ನಲ್ಲಿ ಈಗ ವಿಚಾರಿಸಿದರೆ ಚಿನ್ನದ ಓಲೆ ಅಡವಿಟ್ಟುಕೊಂಡು ಸಾಲಕ್ಕೆ ಮುರಿದುಕೊಂಡಿದ್ದೇವೆ ಎಂದು ಹೇಳುತಿದ್ದಾರಂತೆ. ಬಿಲ್ಲೇಶ್ವರ ಗ್ರಾಮದ ಎಸ್ ಚನ್ನವೀರಪ್ಪ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಜೈಲುವಾಸ ಅನುಭವಿಸಿ ದೇಶಸೇವೆ ಮಾಡುವ ಮೂಲಕ ಅಪ್ರತಿಮ ಸಾಧನೆಗೈದಿದ್ದಾರೆ ಅವರ ಬಗ್ಗೆ ನನಗೆ ಅತೀವ ಹೆಮ್ಮೆ ಇದೆ ಆದರೆ ನಮ್ಮನ್ನು ಸರ್ಕಾರಗಳು ಹಾಗೂ ವ್ಯವಸ್ಥೆ ಇಷ್ಟು ನಿಕೃಷ್ಟವಾಗಿ ಕಾಣುತ್ತಿರುವುದರ ಬೇಸರದ ಸಂಗತಿ ಎಂದು 87ರ ಹರೆಯದ ವೃದ್ದೆ ಹಾಲಮ್ಮ ತಮ್ಮ ನೋವನ್ನು ತೋಡಿಕೊಳ್ಳುತ್ತಾರೆ.

ಒಟ್ಟಾರೆ, ಮೈಕ್ರೋ ಫೈನಾನ್ಸ್ ಕಿರುಕುಳ ತಪ್ಪಿಸಲು ಸರ್ಕಾರ ನೂತನ ಕಾನೂನಿನ ಸುಗ್ರೀವಾಜ್ಞೆಯನ್ನು ಹೊರಡಿಸಿದೆ. ಆದರೆ, ರಾಷ್ಟ್ರೀಕೃತ ಬ್ಯಾಂಕುಗಳೇ, ಫೈನಾನ್ಸ್ ರೀತಿ ಕಾರ್ಯ ನಿರ್ವಹಿಸಿದರೆ ಬಡವರ ಪಾಡೇನು !? ಏನೆಯಾಗ್ಲೀ, ಅಧಿಕಾರಿಗಳು ಹಾಗೂ ಪೊಲಿಸರು, ಈ ಬಗ್ಗೆ ತನಿಖೆ ನಡೆಸಿ ಸ್ವಾತಂತ್ರ್ಯ ಹೋರಾಟಗಾರರ ಪತ್ನಿಗೆ ನ್ಯಾಯ ದೊರಕಿಸಿಕೊಡುವ ಭರವಸೆ ಇದೆ.

 

RELATED ARTICLES

Related Articles

TRENDING ARTICLES