ವಿಕ್ರಾಂತ್ ರೋಣ ಬಳಿಕ ಕಿಚ್ಚ ಸುದೀಪ್ ಮತ್ತೊಂದು ಸಿನಿಮಾ ರಿಲೀಸ್ ಆಗುವುದಕ್ಕೆ ಎರಡೂವರೆ ವರ್ಷ ಬೇಕಾಯ್ತು. ಇಷ್ಟು ದಿನ ಗ್ಯಾಪ್ ಕೊಟ್ಟು ರಿಲೀಸ್ ಮಾಡಿದರೂ ಕನ್ನಡಕ್ಕೊಂದು ಬ್ಲಾಕ್ ಬಸ್ಟರ್ ಸಿನಿಮಾ ಸಿಕ್ಕಿದೆ. ‘ಮ್ಯಾಕ್ಸ್’ 2024ರಲ್ಲಿ ಕನ್ನಡ ಚಿತ್ರರಂಗಕ್ಕೆ ಅತೀ ದೊಡ್ಡ ಹಿಟ್ ಕೊಟ್ಟ ಸಿನಿಮಾ ಆಗಿ ಹೊರಹೊಮ್ಮಿತ್ತು. ಬಾಕ್ಸಾಫೀಸ್‌ನಲ್ಲಿ ಚಿಂದಿ ಕಲೆಕ್ಷನ್ ಮಾಡಿತ್ತು.
ಬಹಳ ದಿನಗಳ ಬಳಿಕ ಕಿಚ್ಚ ಸುದೀಪ್‌ಗೆ ದೊಡ್ಡ ಸಕ್ಸಸ್ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಮತ್ತೆ ‘ಮ್ಯಾಕ್ಸ್’ ನಿರ್ದೇಶಕರ ಜೊತೆ ಸಿನಿಮಾ ಮಾಡುವುದಕ್ಕೆ ನಿರ್ಧರಿಸಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಓಡಾಡುತ್ತಿದೆ. ಈಗಾಗಲೇ ನಿರ್ದೇಶಕ ವಿಜಯ್ ಕಾರ್ತಿಕೇಯ ಜೊತೆ ‘ಮ್ಯಾಕ್ಸ್’ ಸೀಕ್ವೆಲ್ ಮಾಡಬೇಕಾ? ಅಥವಾ ಪ್ರೀಕ್ವೆಲ್ ಮಾಡಬೇಕಾ? ಅನ್ನೋ ಚರ್ಚೆ ಕೂಡ ನಡೆದಿದ್ದು, ತಂಡ ಒಂದು ನಿರ್ಧಾರಕ್ಕೆ ಬಂದಿದೆ ಅಂತ ಗಾಂಧಿನಗರದಲ್ಲಿ ಗುಲ್ಲೆದ್ದಿದೆ.
ಈಗಾಗಲೇ ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ವಿಜಯ್ ಕಾರ್ತಿಕೇಯ ಇಬ್ಬರೂ ಹಲವು ದಿನಗಳ ಚರ್ಚೆ ನಡೆಸಿದ್ದು, ಒಮ್ಮತದ ನಿರ್ಧಾರಕ್ಕೆ ಬಂದಿದ್ದಾರಂತೆ. ‘ಮ್ಯಾಕ್ಸ್ 2’ ಮಾಡುವುದಕ್ಕಿಂತ ಮುನ್ನ ‘ಮ್ಯಾಕ್ಸ್ ಚಾಪ್ಟರ್1’ ಮಾಡುವುದಕ್ಕೆ ಹೆಚ್ಚು ಆಸಕ್ತಿ ತೋರಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ವಿಜಯ್ ಕಾರ್ತಿಕೇಯಾ ಈಗಾಗಲೇ ಪ್ರೀ ಪ್ರೊಡಕ್ಷನ್ ಕೆಲಸವನ್ನೂ ಆರಂಭಿಸಿದ್ದಾರೆ ಎನ್ನಲಾಗಿದೆ.
ಕೆಲವು ದಿನಗಳ ಹಿಂದಷ್ಟೇ ನಿರ್ದೇಶಕ ವಿಜಯ್ ಕಾರ್ತಿಕೇಯಾ ಈ ಬಗ್ಗೆ ಇಂಡಿಯಾ ಗ್ಲಿಟ್ಜ್‌ಗೆ ಪ್ರತಿಕ್ರಿಯೆ ನೀಡಿದ್ದರು. “ಕನ್ನಡದಲ್ಲಿ ಈ ಸಿನಿಮಾ ತುಂಬಾ ದೊಡ್ಡ ಹಿಟ್ ಆಗಿದೆ. ನನ್ನ ಮೇಲೆ ನಂಬಿಕೆ ಇಟ್ಟು ಸಿನಿಮಾವನ್ನು ಮಾಡಿದ್ದಕ್ಕೂ ಸಕ್ಸಸ್ ಸಿಕ್ಕಿದೆ. ಸಿನಿಮಾ ಗೆದ್ದಿದ್ದಕ್ಕೆ ಕಿಚ್ಚ ಸುದೀಪ್ ಮತ್ತೊಮ್ಮೆ ನನ್ನ ಜೊತೆ ಕೆಲಸ ಮಾಡುವುದಕ್ಕೆ ಇಷ್ಟ ಪಟ್ಟಿದ್ದಾರೆ. ಹಾಗೇ ಈಗಾಗಲೇ ಕನ್ನಡ ಹಾಗೂ ತಮಿಳು ಚಿತ್ರರಂಗದ ಹಲವು ನಿರ್ಮಾಣ ಕಂಪನಿಗಳು ಸಿನಿಮಾ ಮಾಡಿಕೊಡುವಂತೆ ಕೇಳಿಕೊಂಡಿವೆ.” ಎಂದು ಪ್ರತಿಕ್ರಿಯಿಸಿದ್ದರು.
ಈ ಬೆಳವಣಿಗೆ ಬೆನ್ನಲ್ಲೇ ಸ್ಯಾಂಡಲ್‌ವುಡ್‌ನಲ್ಲಿ ಕಿಚ್ಚ ಸುದೀಪ್ ‘ಮ್ಯಾಕ್ಸ್’ ಪ್ರೀಕ್ವೆಲ್ ಮಾಡುತ್ತಾರೆ ಅನ್ನೋ ಸುದ್ದಿ ಜೋರಾಗಿ ಓಡಾಡುತ್ತಿದೆ. ಇನ್ನು ಸಿಸಿಎಲ್ ಮುಗಿಯುತ್ತಿದ್ದಂತೆ ಸುದೀಪ್ ‘ಬಿಲ್ಲ ರಂಗ ಭಾಷಾ’ ಸಿನಿಮಾದ ಶೂಟಿಂಗ್ ಶುರು ಮಾಡ್ತಿದ್ದಾರೆ .. ಈ ಸಿನಿಮಾ ಮುಗಿದ ಬಳಿಕ ಅರ್ಜುನ್ ಮಹಾಕ್ಷಯನ್ ಹಿಂದಿನ ವೃತ್ತಾಂತ ಹೇಳೋಕೆ ಅಭಿನಯ ಚಕ್ರವರ್ತಿ ರೆಡಿಯಾಗೋದು ಕನಫರ್ಮ್ ಆಗಿದೆ .