ಅಮೃತಸರ : ಅಮೇರಿಕಾದಲ್ಲಿ ಅಕ್ರಮವಾಗಿ ನೆಲೆಸಿರುವ ಆರೋಪದಡಿ ಅಮೆರಿಕದಿಂದ ಗಡೀಪಾರಾಗಿರುವ ಭಾರತೀಯರ ಕೈಗೆ ಕೋಳ ತೊಡಿಸಿ ಕಳಹಿಸುವ ಮೂಲಕ ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ’ ಎಂದು ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ.
ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಡೊನಾಲ್ಡ್ ಟ್ರಂಪ್ ಅವರು ಅಕ್ರಮವಾಗಿ ಅಮೆರಿಕದಲ್ಲಿ ನೆಲೆಸಿರುವವರನ್ನು ಗಡಿಪಾರು ಮಾಡುವ ಆದೇಶಕ್ಕೆ ಸಹಿ ಹಾಕಿದ್ದರು. ಅದರ ಭಾಗವಾಗಿ ಭಾರತೀಯರನ್ನು ಹೊತ್ತ ಸೇನಾ ವಿಮಾನ ಸಿ-17 ಗ್ಲೋಬ್‌ಸ್ಟರ್ ಟೆಕ್ಸಾಸ್‌ನಿಂದ ಹೊರಟು ಪಂಜಾಬ್‌ಗೆ ಬಂದಿದೆ. ಈ ಕುರಿತು ಮಾಹಿತಿ ನೀಡಿರುವ ನವದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಯು, ‘ವಲಸೆ ನೀತಿಯನ್ನು ಅಮೆರಿಕ ಬಿಗಿಗೊಳಿಸಿದೆ. ಅಕ್ರಮವಾಗಿ ನೆಲೆಸಿರುವವರನು ದೇಶದಿಂದ ಹೊರಹಾಕಲಾಗುತ್ತಿದೆ’ ಎಂದಷ್ಟೇ ಹೇಳಿದೆ.
ಇದನ್ನೂ ಓದಿ :ಪುರಾತನ ದೇಗುಲವನ್ನು ಬಾರ್ ಆ್ಯಂಡ್ ರೆಸ್ಟೂರೆಂಟ್ ಮಾಡಿಕೊಂಡ ಕುಡುಕರು
2013ರಲ್ಲಿ ಭಾರತದ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಗಡೆ ಅವರನ್ನು ನಡೆಸಿಕೊಂಡ ರೀತಿಗೆ ಅಂದಿನ ಯುಪಿಎ ಸರ್ಕಾರ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದಕ್ಕೆ ಅಮೆರಿಕ ಕ್ಷಮೆ ಯಾಚಿಸಿತ್ತು ಎಂದು ಕಾಂಗ್ರೆಸ್‌ನ ಮಾಧ್ಯಮ ವಿಭಾಗ ಮುಖ್ಯಸ್ಥ ಪವನ್ ಖೇರಾ ನೆನಪಿಸಿಕೊಂಡಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ವಿಷಯ ಹಂಚಿಕೊಂಡಿರುವ ಅವರು, ‘ಅಮೆರಿಕದಿಂದ ಕಳುಹಿಸುತ್ತಿರುವ ಭಾರತೀಯರ ಕೈಗೆ ಕೋಳ ತೊಡಿಸಿರುವ ಚಿತ್ರವನ್ನು ಕಂಡು ಭಾರತೀಯನಾದ ನನ್ನಲ್ಲಿ ತೀವ್ರ ಬೇಸರವನ್ನುಂಟು ಮಾಡಿದೆ. 2013ರಲ್ಲಿ ದೇವಯಾನಿ ಅವರ ಕೈಗೂ ಕೋಳ ತೊಡಿಸಿ ಅಮೆರಿಕದಿಂದ ಕಳುಹಿಸಲಾಗಿತ್ತು. ಇದರ ವಿರುದ್ಧ ಅಮೆರಿಕದ ರಾಯಭಾರಿ ನ್ಯಾನ್ಸಿ ಪೊವೆಲ್ ಅವರ ಬಳಿ ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್ ಅವರು ತೀವ್ರ ಖಂಡನೆ ವ್ಯಕ್ತಪಡಿಸಿದ್ದರು’ ಎಂದಿದ್ದಾರೆ.
ಇದಕ್ಕೆ ಅಂದಿನ ಯುಪಿಎ ಸರ್ಕಾರ ಖಡಕ್ ಸಂದೇಶವನ್ನು ಅಮೆರಿಕಕ್ಕೆ ರವಾನಿಸಿತ್ತು. ಇದಕ್ಕೆ ಪ್ರತಿಯಾಗಿ ಅಮೆರಿಕ ಕಳುಹಿಸಿದ ನಿಯೋಗದಲ್ಲಿದ್ದ ಜಾರ್ಜ್ ಹೋಲ್ಡಿಂಗ್, ಪೀಟ್ ಒಲ್ಸನ್, ಡೇವಿಡ್ ಕ್ವೆಕರ್ಟ್, ರಾಬ್ ವುಡ್‌ಲ್ಯಾಂಡ್, ಮೆಡೆಲಿನ್ ಬೊರ್ಡಾಲೋ ಅವರನ್ನು ಪಕ್ಷದ ಮುಖಂಡರಾದ ಮೀರಾ ಕುಮಾರ್, ಸುಶಿಲ್ ಕುಮಾರ್ ಶಿಂದೆ, ರಾಹುಲ್ ಗಾಂಧಿ ಭೇಟಿ ಮಾಡಿ ಪ್ರತಿಭಟನೆ ದಾಖಲಿಸಿದ್ದರು’ ಎಂದು ನೆನಪಿಸಿಕೊಂಡಿದ್ದಾರೆ.