ಚಾಮರಾಜನಗರ : ಬಂಡೀಪುರ ಅಂದರೆ ಸಾಕು ವನ್ಯಪ್ರೇಮಿಗಳಿಗೆ ನೆನಪಾಗುವುದು ಪ್ರಿನ್ಸ್ ಹೆಸರಿನ ಹುಲಿ. ಈ ಹುಲಿ ಪ್ರವಾಸಿಗರ ಎದುರಿಗೆ ನಿಂತು ಸಫಾರಿಗೆ ಬರುವ ಜನರಿಗೆ ದರ್ಶನ ನೀಡುತ್ತಿತ್ತು.
ಹುಲಿ ಬಲಿಷ್ಠ ಪ್ರಾಣಿಯಾಗಿದ್ದರೂ ಮನುಷ್ಯರನ್ನು ಕಂಡರೇ ಮರೆಯಾಗುವುದೇ ಹೆಚ್ಚು. ಆದರೆ, ಬಂಡೀಪುರದಲ್ಲಿ ಈ ಹಿಂದೆ ಇದ್ದ ಪ್ರಿನ್ಸ್ ಎಂಬ ಹುಲಿ ಪ್ರವಾಸಿಗರನ್ನು ಕಂಡರೇ ದೂರ ಓಡದೇ ಹತ್ತಿರಕ್ಕೆ ಬರುತ್ತಿದ್ದ. ಗಂಟೆಗಟ್ಟಲೆ ದರ್ಶನ ಕೊಡುತ್ತಿದ್ದ, ಸಫಾರಿ ಜೀಪ್ ಹತ್ತಿರವೇ ಸುಳಿದಾಡುತ್ತಿದ್ದ. ಈಗ ಪ್ರಿನ್ಸ್ ನಂತೆ ಭೀಮ ಎಂಬ ಹುಲಿಯು ಪ್ರವಾಸಿಗರನ್ನು ಸೆಳೆಯುತ್ತಿದೆ.
ಬಂಡೀಪುರದ ಸಫಾರಿಯ ಬೆಟ್ಟದಕಟ್ಟೆಯಿಂದ ಮಂಗಲ ಕೆರೆ ತನಕವೂ ತನ್ನ ಸರಹದ್ದನ್ನು ಇಟ್ಟುಕೊಂಡಿರುವ ಭೀಮ ಪ್ರವಾಸಿಗರಿಗೆ ಆಗಾಗ್ಗೆ ದರ್ಶನ ಕೊಡುತ್ತಿದೆ. ಜೊತೆಗೆ, ಪ್ರವಾಸಿಗರನ್ನು ಕಂಡರೇ ಮರೆಯಾಗದೇ ಗಾಂಭೀರ್ಯದ ಹೆಜ್ಜೆ ಇಡುತ್ತಿದೆ. ಸಫಾರಿ ವಾಹನ ಬಂದರೂ ಹೆದರದೇ ರಸ್ತೆ ದಾಟಿ, ರಗಡ್ ಲುಕ್ ಕೊಡತಿದ್ದ ಭೀಮನ ಕಂಡು ಪ್ರವಾಸಿಗರು ಫಿಧಾ ಆಗುತ್ತಿದ್ದಾರೆ.
ಇದನ್ನೂ ಓದಿ :ವಿವಾದಕ್ಕೆ ಕಾರಣವಾದ ‘ಛಾವ’ ಸಿನಿಮಾ : ಶಿವಾಜಿ ವಂಶಸ್ಥರಿಂದಲೇ ಸಿನಿಮಾಗೆ ಆಕ್ಷೇಪ !
ಭೀಮ ಹುಲಿಯು ಪ್ರಿನ್ಸ್ ನಂತೆ ಸ್ವಭಾವ ಹೊಂದಿದ್ದು ಪ್ರಿನ್ಸ್ ರೀತಿಯೇ ಮುಖಭಾವ ಪ್ರದರ್ಶನ ಮಾಡುತ್ತದೆ. ಅಂದಾಜು 5 ವರ್ಷದ ಗಂಡು ಹುಲಿಯಾಗಿರುವ ಭೀಮ ಅತಿ ದೊಡ್ಡದಾದ ಸರಹದ್ದನೇ ಹೊಂದಿದೆ, ಪ್ರವಾಸಿಗರಿಗೆ ರಾಜ ಗಾಂಭೀರ್ಯದಲ್ಲೇ ಫೋಸ್ ಕೊಡುತ್ತಾನೆ. ಪ್ರಿನ್ಸ್ 2018 ರಲ್ಲಿ ವಯೋಸಹಜವಾಗಿ ಅಸುನೀಗಿತ್ತು ಬಳಿಕ ಈಗ ಭೀಮ ಪ್ರವಾಸಿಗರ ಫೇವರೇಟ್ ಆಗಿದೆ ಎನ್ನುತ್ತಾರೆ ಬಂಡೀಪುರ ಎಸಿಎಫ್ ನವೀನ್ ಕುಮಾರ್.
ಒಟ್ಟಿನಲ್ಲಿ ಬಂಡೀಪುರದಲ್ಲಿ ರಾಜನಂತೆ ಮೆರೆದಿದ್ದ ಪ್ರಿನ್ಸ್ ಬಳಿಕ ಈಗ ಭೀಮನ ದರ್ಬಾರ್ ಶುರುವಾಗಿದೆ, ಪ್ರವಾಸಿಗರ ಫೇವರೇಟ್ ಆಗಿ ಭೀಮ ಎಲ್ಲರ ಗಮನ ಸೆಳೆಯುತ್ತಿದೆ.