ಬೆಂಗಳೂರು : ಆಕೆ ನೆರೆಯ ಬಾಂಗ್ಲಾದೇಶದವಳು. ತುತ್ತಿನ ಚೀಲ ತುಂಬಿಸಿಕೊಳ್ಳಲು ಬೆಂಗಳೂರಲ್ಲಿ ಮನೆಗೆಲಸ ಮಾಡಿಕೊಂಡಿದ್ದಳು. ಆದರೆ ನಿನ್ನೆ ಕೆಲಸಕ್ಕೆ ಹೋದವಳು ಇಂದು ನಿರ್ಜನ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಕಾಮುಕರು ಆಕೆಯನ್ನು ಹುರಿದು ಮುಕ್ಕಿದ್ದಾರೆ.
ನಜ್ಮಾ ಕೊತ್ತನೂರಿನಲ್ಲಿ ಗಂಡ ಸುಮನ್ ಹಾಗೂ ಮೂವರು ಮಕ್ಕಳ ಜೊತೆ ಸುಖವಾಗಿ ಜೀವನ ನಡೆಸುತ್ತಿದ್ದಳು. ಗಂಡ ಸಮನ್ ಬಿಬಿಎಂಪಿಯಲ್ಲಿ ಕಸದ ಗಾಡಿ ಓಡಿಸುತ್ತಿದ್ದ. ನಜ್ಮಾ ರಾಮಮೂರ್ತಿ ನಗರದ ಡಿಎಸ್ಆರ್ ಅಪಾರ್ಟ್ಮೆಂಟ್ನಲ್ಲಿ ಮನೆಗೆಲಸ ಮಾಡಿಕೊಂಡಿದ್ದಳು. ನಿನ್ನೆ ಕೆಲಸಕ್ಕೆ ಹೋದವಳು ಮಧ್ಯಾಹ್ನ ಕೆಲಸ ಮುಗಿಸಿಕೊಂಡು ಸ್ನೇಹಿತರ ಜೊತೆ ಮನೆಗೆ ವಾಪಸ್ ಆಗುತ್ತಿದ್ದಳು. ಈ ವೇಳೆ ನಜ್ಮಾಗೆ ಒಂದು ಕರೆ ಬರುತ್ತೆ. ಹೀಗಾಗಿ ಸ್ನೇಹಿತೆಯರಿಗೆ ನೀವು ಮನೆಗೆ ಹೋಗಿ ನಾನು ನಂತರ ಬರ್ತಿನಿ ಅಂತಾ ಹೇಳಿ ಕಳುಹಿಸಿದ್ದಾಳೆ. ಆನಂತರ ನಡೆದಿರುವುದೇ ಘನಘೋರ ಘಟನೆ.
ಇದನ್ನೂ ಓದಿ: ಮಾಜಿ ಕ್ರಿಕೆಟರ್ ವಿರೇಂದ್ರ ಸೆಹ್ವಾಗ್ ದಾಂಪತ್ಯ ಜೀವನದಲ್ಲಿ ಬಿರುಕು ?
ಹೌದು ಸ್ನೇಹಿತೆಯರಿಗೆ ಹೇಳಿ ಹೊರಟವಳ ಮೊಬೈಲ್ ಕೆಲವೇ ನಿಮಿಷಗಳಲ್ಲಿ ಸ್ವಿಚ್ ಆಗಿತ್ತು. ಇತ್ತ ಗಂಡ ಸುಮನ್ ಹಲವು ಬಾರಿ ನಜ್ಮಾಗೆ ಕರೆ ಮಾಡಿ ಆತಂಕಗೊಂಡು ನೇರವಾಗಿ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೈಂಟ್ ದಾಖಲಿಸಿದ್ದ. ಆದರೆ ಇವತ್ತು ಬೆಳಗ್ಗೆ ತಾನು ಕೆಲಸ ಮಾಡುತ್ತಿದ್ದ ಡಿಎಸ್ಆರ್ ಅಪಾರ್ಟ್ಮೆಂಟ್ನಿಂದ 500 ಮೀಟರ್ ದೂರದ ನಿರ್ಜನ ಪ್ರದೇಶಲ್ಲಿ ನಜ್ಮಾ ಶವವಾಗಿ ಪತ್ತೆಯಾಗಿದ್ದಾಳೆ. ಶವ ನೋಡಿದ ಸ್ಥಳೀಯರು 112 ಗೆ ಕರೆ ಮಾಡಿ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಪೊಲೀಸರಿಗೆ ನಜ್ಮಾಳ ಮೇಲೆ ಅತ್ಯಾಚಾರವೆಸಗಿ ನಂತರ ಕತ್ತು ಹಿಸುಕಿ, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರೋದು ಕಂಡು ಬಂದಿದೆ.
ಇನ್ನೂ ಸ್ಥಳಕ್ಕೆ ಎಫ್ಎಸ್ಎಲ್ ಟೀಮ್, ಶ್ವಾನ ದಳ ಭೇಟಿ ಕೊಟ್ಟು ಪರಿಶೀಲನೆ ನಡೆಸಿದೆ. ಮರಣೋತ್ತರ ಪರೀಕ್ಷೆಗೆ ಮೃತದೇಹ ಸಾಗಿಸಲಾಗಿದ್ದು, ರಾಮಮೂರ್ತಿ ನಗರ ಪೊಲೀಸರು ಪ್ರಕರಣ ದಾಖಲಿಕೊಂಡು ತನಿಖೆ ಮುಂದುವರೆಸಿದ್ದಾರೆ. ಇನ್ನೂ ನಜ್ಮಾ 6 ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದು, ಅಕ್ರಮವಾಗಿ ಬೆಂಗಳೂರಲ್ಲಿ ನೆಲೆಸಿದ್ದಳು ಎನ್ನಲಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸಲಿದ್ದಾರೆ.