Saturday, August 30, 2025
HomeUncategorizedಬ್ರಿಮ್ಸ್​ ಆಸ್ಪತ್ರೆ ಮಹಾ ಎಡವಟ್ಟು : ನವಜಾತ ಶಿಶುವಿನ ಮೂಳೆ ಮುರಿದ ವೈದ್ಯರು !

ಬ್ರಿಮ್ಸ್​ ಆಸ್ಪತ್ರೆ ಮಹಾ ಎಡವಟ್ಟು : ನವಜಾತ ಶಿಶುವಿನ ಮೂಳೆ ಮುರಿದ ವೈದ್ಯರು !

ಬೀದರ್​ : ಹೆರಿಗೆ ವೇಳೆ ಬ್ರಿಮ್ಸ್ ವೈದ್ಯರು ಮಾಡಿದ ಮಹಾ ಎಡವಟ್ಟಿನಿಂದ ನವಜಾತ ಶಿಶುವಿನ ಬಲಗಾಲ ಮೂಳೆಯೇ ಮುರಿದಿದೆ. ಹೆರಿಗೆ ಬಳಿಕ ಸ್ಕ್ಯಾನಿಂಗ್ ಮಾಡಿಸಿದಾಗ ಬಲಗಾಲಿನ ತೊಡೆಯ‌ ಮೂಳೆ ಮುರಿದಿರುವುದು ಬೆಳಕಿಗೆ ಬಂದಿದೆ. ಮೂಳೆ ಮುರಿತದಿಂದಾಗಿ ಒಂದು ತಿಂಗಳ ಹಸುಗೂಸು ನೋವು ತಾಳಲಾರದೇ ನರಳಾಡುತ್ತಿದೆ. ಹಸುಗೂಸಿನ ಚಿಕಿತ್ಸೆಗಾಗಿ ಬಡ ಕುಟುಂಬ ಪರದಾಡುತ್ತಿದ್ದು, ಶಾಶ್ವತ ಅಂಗವೈಕಲ್ಯದ ಭೀತಿ ಶುರುವಾಗಿದೆ.

ಹೌದು.. ಇಂತಹದ್ದೊಂದು ಮಹಾ ಎಡವಟ್ಟು ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯಲ್ಲಿ‌ ನಡೆದಿದೆ. ಡಿ.14ರಂದು ಬೀದರ್‌ನ ಮಂಗಲ್‌ಪೆಟ್ ನಿವಾಸಿ ರೂಪಾರಾಣಿ‌ ಮಡಿವಾಳ ಎಂಬ ಮಹಿಳೆ ಹೆರಿಗೆಗಾಗಿ ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ದಾಖಲಾಗಿ ಒಂದೂವರೆ ಗಂಟೆಯಲ್ಲೇ ಗಂಡು‌ ಮಗುವಿಗೆ ಜನ್ಮ ನೀಡಿದ್ದರು. ಮಗುವೇನೂ ಆರೋಗ್ಯವಾಗಿದೆ. ಆದ್ರೆ, ಬ್ರಿಮ್ಸ್ ಸಿಬ್ಬಂದಿ ಮಗುವಿನ ಮೂಳೆಯನ್ನೇ ಮುರಿದು ಹಾಕಿದ್ದಾರೆ. ಹೆರಿಗೆಗೂ ಮುನ್ನ ತಾಯಿಯ ಗರ್ಭದಲ್ಲಿ ಮಗು ಉಲ್ಟಾ ಇರುವುದನ್ನ ಕುಟುಂಬಸ್ಥರು ವೈದ್ಯರ ಗಮನಕ್ಕೆ ತಂದಿದ್ದಾರೆ.

ಸಾಮಾನ್ಯ ಹೆರಿಗೆ ಬೇಡ ಸಿಜರಿಯನ್ ಮಾಡಿ ಅಂತಾನೂ ಮನವಿ ಮಾಡಿದ್ದಾರೆ. ಇದಕ್ಕೆಲ್ಲಾ ತಲೆಯಾಡಿಸಿದ ವೈದ್ಯರು, ನರ್ಸ್‌ಗಳು ಸಾಮಾನ್ಯ ಹೆರಿಗೆ‌ ಮಾಡಿಸಿಕೊಂಡಿದ್ದಾರೆ. ಈ ವೇಳೆ ನವಜಾತ ಶಿಶುವಿನ ಬಲಗಾಲ ತೊಡೆಯ ಮೂಳೆ ಮುರಿದಿದೆ. ಹೆರಿಗೆಯ ನಂತರ ಸ್ಕ್ಯಾನಿಂಗ್ ಮಾಡಿಸಿದ್ದು ನವಜಾತ ಶಿಶುವಿನ ಬಲಗಾಲ ಮೂಳೆ ಮುರಿದಿರುವುದು ಗೊತ್ತಾಗಿದೆ. ಸದ್ಯ ಎಳೆಯ ಮಗುವಿನ ಮೂಳೆ ಮುರಿದಿದ್ದು, ಮಗುವಿನ ಚಿಕಿತ್ಸೆಗೆ ಬಡ ಕುಟುಂಬ ಪರದಾಡುತ್ತಿದೆ.

ಇದನ್ನೂ ಓದಿ: ಆನ್​ಲೈನ್​ ಗೇಮ್​ ಗೀಳು : ಡೆತ್​ನೋಟ್​ ಬರೆದು ಆತ್ಮಹ*ತ್ಯೆಗೆ ಶರಣಾದ ಯುವಕ !

ಇನ್ನು ವೈದ್ಯರ ನಿರ್ಲಕ್ಷ್ಯದಿಂದ ನವಜಾತ ಶಿಶುವಿನ ಮೂಳೆ ಮುರಿತಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಕಮಲಾಕರ್‌ ಹೆಗಡೆ ಅವರೊಂದಿಗೆ ಬ್ರಿಮ್ಸ್ ನಿರ್ದೇಶಕ ಶಿವಕುಮಾರ್ ಶೆಟಗಾರ್‌ಗೆ ತಪ್ಪಿತಸ್ಥ ವೈದ್ಯ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿ ತಿಂಗಳು ಕಳೆದ್ದಿದ್ದರು ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು‌ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

ಬ್ರಿಮ್ಸ್​ ಆಸ್ಪತ್ರೆ ವೈದ್ಯರ ಉಡಾಫೆ ಉತ್ತರ !

ಇನ್ನು ಈ ಬಗ್ಗೆ ಬ್ರಿಮ್ಸ್ ವೈದ್ಯರನ್ನ ಕೇಳಿದ್ರೆ ಉಡಾಫೆಯಾಗಿ ಮಾತನಾಡುತ್ತಿದ್ದಾರೆ. ಈ ಕುರಿತು ಬ್ರಿಮ್ಸ್ ಡೈರೆಕ್ಟರ್ ಶಿವಕುಮಾರ್ ಶೆಟಕಾರದ ಅವರನ್ನ ಕೇಳಿದ್ರೆ, ಸಿಜರಿಯನ್ ಹೆರಿಗೆ ಮಾಡ್ಬೇಕೆಂಬ ಸಂದರ್ಭದಲ್ಲಿ ಮಗುವಿನ ಕಾಲು ತಾಯಿ ಗರ್ಭದಿಂದ ಹೊರಗೆ ಬಂದಿತ್ತು. ಹೆರಿಗೆ ಸಮಯದಲ್ಲಿ ಇದೆಲ್ಲಾ ಸಾಮಾನ್ಯವಾಗಿರುತ್ತೆ, ಇದರಲ್ಲಿ ಆಸ್ಪತ್ರೆಯ ನಿರ್ಲಕ್ಷ್ಯವಿಲ್ಲ. ಮೂಳೆ ಮುರಿದಿದೆ ಅಂತಾ ಕುಟುಂಬಸ್ಥರು ಆರೋಪ ಮಾಡ್ತಿದ್ದಾರೆ. ಆದ್ರೆ ಮೂಳೆ ಮುರಿದಿಲ್ಲ. ಮಗುವನ್ನ NIsuಗೆ ದಾಖಲು ಮಾಡಲಾಗಿತ್ತು, ಅರ್ಥೋಪೆಡಿಕ್ ಕರೆಸಿ ನೋಡಿದಾಗ ಕೂದಲೆಳೆಯಷ್ಟು ಕ್ರ್ಯಾಕ್ ಕಾಣಿಸುತ್ತಿತ್ತು. ಕ್ಯೂರ್ ಆಗೋಕೆ ಮೂರು‌ ತಿಂಗಳು ಸಮಯ ಬೇಕಾಗುತ್ತೆ. ನೂರು ಕೇಸ್‌ನಲ್ಲಿ ಒಂದೆರಡು ಕೇಸ್ ಈ ರೀತಿ ಆಗೋದು ಕಾಮನ್. ಹೀಗಾಗಿ ಇದರಲ್ಲಿ ಆಸ್ಪತ್ರೆ ಆಗಲಿ, ವೈದ್ಯರದ್ದಾಗಲಿ ನಿರ್ಲಕ್ಷ್ಯವಿಲ್ಲ ಎಂದು ಉಡಾಫೆ ಉತ್ತರ ನೀಡಿದ್ರು.

ಒಟ್ಟಿನಲ್ಲಿ ಬ್ರಿಮ್ಸ್ ಸಿಬ್ಬಂದಿಗಳು ಮಾಡಿದ ಮಹಾ ಎಡವಟ್ಟಿನಿಂದ ನವಜಾತ ಶಿಶುವಿನ ಕಾಲಿನ ಮೂಳೆ ಮುರಿದಿದ್ದು, ಯಾರೋ‌ ಮಾಡಿದ ತಪ್ಪಿಗೆ ಇನ್ನ್ಯಾರಿಗೋ ಶಿಕ್ಷೆ ಎಂಬಂತೆ‌ ಮಗು ಹಾಗೂ ಮಗುವಿನ ಕುಟುಂಬಸ್ಥರು ಕಣ್ಣೀರಲ್ಲಿ‌ ಕೈ ತೊಳೆಯುವಂತಾಗಿದೆ. ಈ ಬಗ್ಗೆ ಬ್ರಿಮ್ಸ್ ನಿರ್ದೇಶಕರು ಉಡಾಫೆ ಉತ್ತರ ನೀಡುತ್ತಿದ್ದು, ಜಿಲ್ಲಾಡಳಿತ ಈ ಬಗ್ಗೆ ತಪ್ಪಿತಸ್ಥರ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳುತ್ತೆ ಎನ್ನುವುದನ್ನ ಕಾದು ನೋಡೋಣ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments