ಮುಂಬೈ: ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ರೆತ್ಯಖೇಡಾ ಗ್ರಾಮದ 77 ವರ್ಷದ ಮಹಿಳೆಯೊಬ್ಬರು ಮಾಟಮಂತ್ರ ಮಾಡುತ್ತಿದ್ದಾರೆ ಎಂದು ನೆರೆಹೊರೆಯವರು ಆರೋಪಿಸಿ ಡಿಸೆಂಬರ್ 30 ರಂದು ಆಕೆಯ ಮೇಲೆ ಹಲ್ಲೆ ನಡೆಸಿ, ಅವಮಾನಿಸಿ ಮೂತ್ರ ಕುಡಿಸಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಸಂತ್ರಸ್ಥ ಮಹಿಳೆಯ ಮಗ ಮತ್ತು ಸೊಸೆ ಕೆಲಸದ ನಿಮಿತ್ತ ಹೊರಗೆ ಹೋಗಿದಾಗ ಈ ಘಟನೆ ನಡೆದಿದ್ದು. ಜನವರಿ 5ನೇ ತಾರೀಖಿನಂದು ಮನೆಗೆ ಮರಳಿದಾಗ ಘಟನೆ ಬಗ್ಗೆ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಸಾರ್ವಜನಿಕರಿಗೆ ವಿತರಿಸಬೇಕಿದ್ದ 24 ಸಾವಿರ ಕ್ವಿಂಟಲ್ ಜೋಳ ಹುಳುಗಳಿಗೆ ಆಹಾರ !
ದೂರಿನ ಪ್ರಕಾರ ಮಹಿಳೆಯು ಒಬ್ಬಳೆ ಮನೆಯಲ್ಲಿದ್ದ ವೇಳೆ ಅಕ್ಕಪಕ್ಕದ ಮನೆಯವರು ಮಹಿಳೆಯ ಮನೆಗೆ ಬಂದು ಹಲ್ಲೆ ನಡೆಸಿದ್ದಾರೆ. ಮಹಿಳೆಗೆ ಕಟ್ಟಿಗೆಯಿಂದ ಥಳಿಸಿ, ಕಪಾಳ ಮೋಕ್ಷ ಮಾಡಿದ್ದಾರೆ. ಅಲ್ಲದೆ ಕಾದ ಕಬ್ಬಿಣದ ರಾಡ್ನಿಂದ ಮಹಿಳೆಯ ಕೈಕಾಲುಗಳಿಗೆ ಬರೆ ಎಳೆದಿದ್ದಾರೆ. ಜೊತೆಗೆ ಮಹಿಳೆಗೆ ಬಲವಂತವಾಗಿ ಮೂತ್ರ ಕುಡಿಸಿ, ನಾಯಿ ಮಲವನ್ನು ತಿನ್ನಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆ ಬಗ್ಗೆ ಹೇಳಿಕೆ ನೀಡಿರುವ ಪೊಲೀಸ್ ವರಿಷ್ಟಾಧಿಕಾರಿ ವಿಶಾಲ್ ಆನಂದ್, ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ. ಘಟನೆ ನಡೆದಿರುವ ಗ್ರಾಮವೂ ಕಾಡಂಚಿನ ಗ್ರಾಮವಾಗಿದ್ದು. ಪೊಲೀಸರನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿದು ಬಂದಿದೆ.