ಮೈಸೂರು : ಅವರಿಬ್ಬರದ್ದು ಕೈಗೂಡದ ಭಗ್ನ ಪ್ರೇಮ. ಒಂಬತ್ತು ವರ್ಷ ಪ್ರೀತಿ ಮಾಡಿದರೂ ಆಕೆಗೆ ಬೇರೊಬ್ಬನ ಜೊತೆ ಮದುವೆ ಮಾಡಲಾಗಿತ್ತು. ಮದುವೆ ಆದ ನಂತರವೂ ಹಳೆ ಪ್ರೇಮಿಯ ಜೊತೆ ಓಡಿ ಹೋಗಿದ್ದಳು. ಕೊನೆಗೆ ಇಬ್ಬರನ್ನು ಕರೆಸಿ ಬುದ್ದಿವಾದ ಹೇಳಿ ಬೇರೆ ಮಾಡಲಾಗಿತ್ತು. ಇದರಿಂದ ಮನನೊಂದ ಯುವಕ ವೀಡಿಯೋ ರೆಕಾರ್ಡ್ ಮಾಡಿ, ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇಂತಹದೊಂದು ದುರಂತ ಪ್ರೇಮ ಕಥೆ ನಡೆದಿರೋದು ಮೈಸೂರು ಜಿಲ್ಲೆ ಇಲವಾಲ ತಾಲೂಕು ಯಲಚಹಳ್ಳಿ ಗ್ರಾಮದಲ್ಲಿ. ಗ್ರಾಮದ 26 ವರ್ಷದ ವಿನಯ್ ಆತ್ಮಹತ್ಯೆ ಮಾಡಿಕೊಂಡ ಭಗ್ನ ಪ್ರೇಮಿ. ವಿನಯ್ ಎರಡು ದಿನಗಳ ಹಿಂದೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕು ಬಳಗೋಳ ಗ್ರಾಮದ ಕುಸುಮ ಎಂಬ ಗೃಹಿಣಿ ಜತೆ ಎಸ್ಕೇಪ್ ಆಗಿದ್ದ.
ಇದನ್ನೂ ಓದಿ : ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪರಿಗೆ ಗೌರವ ಡಾಕ್ಟರೇಟ್ ಘೋಷಣೆ !
ಈ ಬಗ್ಗೆ ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಕಾರಣ ಇಬ್ಬರನ್ನೂ ಕರೆಸಿ ಬುದ್ದಿವಾದ ಹೇಳಿ ಬೇರೆ ಕಳುಹಿಸಿದ್ದರು. ಪ್ರೇಯಸಿಯನ್ನು ದೂರ ಮಾಡಿದ್ದಕ್ಕಾಗಿ ಮನ ನೊಂದು ವಿನಯ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೂ ಮುನ್ನ ಸೆಲ್ಫಿ ವಿಡಿಯೋ ತನ್ನ ಸಾವಿಗೆ ಹುಡುಗಿಯ ಸಂಬಂಧಿಕರು ಹಾಗೂ ಪೊಲೀಸರು ಕಾರಣ ಎಂದು ಹೇಳಿದ್ದಾನೆ. ಅಲ್ಲದೆ ನಾನು ಸತ್ತ ನಂತರ ನನ್ನ ಮೃತದೇಹವನ್ನು ಕುಸುಮನಿಗೆ ತೋರಿಸಬೇಕು ಎಂದು ಕೇಳಿಕೊಂಡಿದ್ದಾನೆ.
ವಿನಯ್ ಹಾಗೂ ಕುಸುಮಾ 9 ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರಂತೆ. ಆಟೋ ಡ್ರೈವರ್ ಆಗಿದ್ದ ವಿನಯ್ ಕಾಲೇಜು ಓದುತ್ತಿದ್ದ ಕುಸುಮಗಳನ್ನು ಮದುವೆ ಮಾಡಿಕೊಡುವಂತೆ ಕೇಳಿಕೊಂಡಿದ್ದ. ಇಬ್ಬರ ಜಾತಿ ಬೇರೆ ಬೇರೆ ಇದ್ದ ಕಾರಣಕ್ಕೆ ಇಬ್ಬರ ಮನೆಯಲ್ಲೂ ಮದುಗೆ ಒಪ್ಪಿಗೆ ಇರಲಿಲ್ಲ. ನಂತರ ಮೂರು ವರ್ಷಗಳ ಹಿಂದೆ ಕುಸುಮಳನ್ನ ಬೆಳಗೋಳ ಗ್ರಾಮಕ್ಕೆ ಮದುವೆ ಮಾಡಲಾಗಿದ್ದು ಆಕೆಗೆ ಮಗು ಕೂಡ ಇದೆ.
ಆದರೆ ಮದುವೆ ನಂತರವೂ ಇಬ್ಬರ ಲವ್ವಿಡವ್ವಿ ಮುಂದುವರೆದಿದೆ. ಇಬ್ಬರು ಜೊತೆಯಲ್ಲಿ ವೀಡಿಯೋ ಮಾಡುವುದು, ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡುವುದು ನಡೆದಿದೆ. ಎರಡು ದಿನಗಳ ಹಿಂದೆ ಇಬ್ಬರು ಸೇರಿ ಓಡಿ ಹೋದಾಗ ಕುಟುಂಬಸ್ಥರು ಠಾಣೆಗೆ ಕರೆಸಿ ಬುದ್ದಿವಾದ ಹೇಳಿದ್ದಾರೆ. ಹುಡುಗಿಯನ್ನು ಬೆಳಗೋಳಕ್ಕೆ ಕಳುಹಿಸಿದ್ದು, ಹುಡುಗನನ್ನ ಮೈಸೂರು ತಾಲೂಕು ಮೇಗಳಾಪುರ ಗ್ರಾಮದ ನೆಂಟರ ಮನೆಗೆ ಕಳುಹಿಸಿದ್ದಾರೆ. ಇದರಿಂದ ಮನನೊಂದ ವಿನಯ್ ಬೆಳಿಗ್ಗೆ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾನೆ. ಸದ್ಯ ಘಟನೆ ಸಂಬಂಧ ವರುಣಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.