ಮೈಸೂರು: ನಿಮ್ಮ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದೀರಾ. ನಾವೆಲ್ಲರೂ ಪತ್ರಕರ್ತರು, ನಮ್ಮೊಟ್ಟಿಗೆ ಪೊಲೀಸರು ಬಂದಿದ್ದಾರೆ ಎಂದು ಸುಳ್ಳು ಹೇಳಿ ಹೆದರಿಸಿ ಮಹಿಳೆಯೊಬ್ಬರ ಬಳಿ ಚಿನ್ನದ ಓಲೆ ಹಾಗೂ ನಗದು ಪಡೆದುಕೊಂಡು ಪೊಲೀಸರಿಗೆ ಸಿಕ್ಕಿಬಿದಿರುವ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ.
ಹೌದು..ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿದ್ದ ರವಿ ಚಂದ್ರ ಹಂಚ್ಯ. ಈತ ನಗರದ ಸ್ಥಳೀಯ ಪತ್ರಿಕೆಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾನೆ. ಮತ್ತೊಬ್ಬ ಯ್ಯೂಟ್ಯೂಬರ್ ಮಂಜುನಾಥ್. ಇವೆರೆಲ್ಲಾ ಸೇರಿಕೊಂಡು ಒಂದು ತಂಡ ರಚನೆ ಮಾಡಿಕೊಂಡು ನಗರದ ಸ್ಪಾ ಸೇರಿದಂತೆ ಇನ್ನಿತರ ಸ್ಥಳಗಳಿಗೆ ತೆರಳಿ ಹೆದರಿಸಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದರಂತೆ. ಹಣ ಕೊಡದಿದ್ದರೆ ಸುದ್ದಿಯನ್ನ ಪತ್ರಿಕೆ ಹಾಗೂ ಟಿವಿಗಳಲ್ಲಿ ತೋರಿಸುತ್ತೇವೆಂದು ಹೆದರಿಸಿ ಲಕ್ಷಾಂತರ ರೂಪಾಯಿ ಹಣ ಲಪಟಾಯಿಸಿದ್ದಾರೆ. ಕಳೆದ ವಾರ ಪೊಲೀಸರೊಂದಿಗೆ ಬಂದಿರುವುದಾಗಿ ಹೇಳಿಕೊಂಡು ಮಹಿಳೆಯೊಬ್ಬರ ಮನೆಗೆ ಅಕ್ರಮವಾಗಿ ಪ್ರವೇಶಿಸಿ, ವೇಶ್ಯಾವಾಟಿಕೆಯ ಆರೋಪ ಮಾಡಿ, ಬೆದರಿಸಿ ಚಿನ್ನದ ಓಲೆ ಪಡೆದು ಹೋಗಿದ್ದಾರೆ.
ಇದನ್ನೂ ಓದಿ:ನಕ್ಸಲರ ಶರಣಾಗತಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅಣ್ಣಾಮಲೈ !
ಇನ್ನೂ ಇದರಿಂದ ಎಚ್ಚೆತ್ತ ಮಹಿಳೆ ಡಿ.28ರಂದು ನಗರದ ಹೆಬ್ಬಾಳು ಠಾಣೆಗೆ ದೂರು ನೀಡಿದ್ದಾರೆ. ನಾನು ವೇಶ್ಯಾವಾಟಿಕೆ ನಡೆಸುತ್ತಿಲ್ಲ ಎಂದರೂ ಒಪ್ಪದ ಅವರು, ಈ ವಿಷಯವನ್ನು ಯಾರಿಗೂ ಹೇಳಬಾರದೆಂದರೆ ₹1 ಲಕ್ಷ ಕೊಡಬೇಕು ಎಂದು ಬೆದರಿಸಿದರು. ಅಷ್ಟು ಹಣವಿಲ್ಲವೆಂದಾಗ ಚಿನ್ನದ ಕಿವಿಯೋಲೆಯನ್ನು ಬಿಚ್ಚಿಸಿ ಬೇಗ ಹಣ ನೀಡುವಂತೆ ತಿಳಿಸಿ ತೆರಳಿದ್ದರು ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ರವಿಚಂದ್ರ ಹಂಚ್ಯಾ, ಯ್ಯೂಟ್ಯೂಬರ್ ಮಂಜುನಾಥ್, ಪೊಲೀಸ್ ಎಂದು ಹೇಳಿಕೊಂಡಿದ್ದರೆನ್ನಲಾದ ಕೆ.ಎಚ್.ಹನುಮಂತರಾಜ್ ಬಂಧಿಸಿ ವಿಚಾರಣೆ ನಡೆಸಿ ಜೈಲಿಗೆ ಸಹ ಕಳುಹಿಸಿದ್ದಾರೆ. ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಯ್ಯೂಟ್ಯೂಬರ್ ಸೂರ್ಯವರ್ಧನ್, ಯೋಗೇಶ್ ಹಾಗೂ ದೊರೆಸ್ವಾಮಿಗೆ ಹುಟುಕಾಟ ನಡೆಸುತ್ತಿದ್ದಾರೆ.
ಒಟ್ಟಾರೆ ಇಂತಹ ಪತ್ರಕರ್ತರ ವಿರುದ್ಧ ಜಿಲ್ಲಾಡಳಿತ ಹಾಗೂ ಜಿಲ್ಲಾ ಪತ್ರಕರ್ತರ ಸಂಘ ಯಾವ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಕಾದು ನೋಡಬೇಕಿದೆ.