ಎಸ್‌ಎನ್ ಸುಬ್ರಹ್ಮಣ್ಯನ್ ವೇತನದ ಕುರಿತು ಚರ್ಚೆ
ಭಾನುವಾರವು ಸೇರಿದಂತೆ ವಾರಕ್ಕೆ 90 ಗಂಟೆ ಕೆಲಸ ಮಾಡಬೇಕೆಂದು ಹೇಳಿರುವ ಎಲ್ ಆ್ಯಂಡ್ ಟಿ ಕಂಪನಿಯ ಚೇರ್ಮನ್ ಎಸ್.ಎನ್. ಸುಬ್ರಹ್ಮಣ್ಯನ್ ಪಡೆಯುವ ವೇತನದ ಕುರಿತು ನೆಟ್ಟಿಗರು ಚರ್ಚಿಸುತ್ತಿದ್ದಾರೆ. ನನ್ನಂತೆಯೇ ಉದ್ಯೋಗಿಗಳು ಕೂಡ ಭಾನುವಾರವೂ ಕೆಲಸಕ್ಕೆ ಬರಬೇಕು, ಎಷ್ಟು ಸಮಯ ನೀವು ನಿಮ್ಮ ಹೆಂಡತಿ ಮುಖ ನೋಡುತ್ತು ಕೂರುತ್ತೀರಿ ಎಂದು ಉದ್ಯೋಗಿಗಳ ಜತೆಗಿನ ಸಂವಾದದಲ್ಲಿ ಸುಬ್ರಹ್ಮಣ್ಯನ್ ಹೇಳಿದ್ದರು.
ಸುಬ್ರಮಣ್ಯನ್ ಹೇಳಿಕೆಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು. ಸೆಲೆಬ್ರಿಟಿಗಳಾದ ದೀಪಿಕಾ ಪಡುಕೋಣೆ, ಹರ್ಷ ಗೋಯೆಂಕಾ, ಜ್ವಾಲಾ ಗುಪ್ತಾ ಸೇರಿದಂತೆ ಹಲವು ಸೆಲೆಬ್ರಿಟಿಗಳೂ ಎಸ್‌ಎನ್ ಸುಬ್ರಹ್ಮಣ್ಯನ್ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಾಸಗಿ ಪತ್ರಿಕೆಯು ಎಸ್‌ಎನ್ ಸುಬ್ರಹ್ಮಣ್ಯನ್ ಅವರ ವಾರ್ಷಿಕ ವೇತನದ ಕುರಿತು ಪ್ರಕಟಿಸಿದ ವರದಿಯು ಹೊಸ ಚರ್ಚೆಗೆ ನಾಂದಿ ಹಾಡಿದೆ. 2023-24ರಲ್ಲಿ ಎಸ್‌ಎನ್ ಸುಬ್ರಹ್ಮಣ್ಯನ್ ಅವರು ವಾರ್ಷಿಕ 51 ಕೋಟಿ ರೂಪಾಯಿ ವೇತನ ಪಡೆದಿದ್ದರು. ಇವರ ವೇತನ ವೇತನ ಎಲ್‌ಆಂಡ್‌ಟಿ ಕಂಪನಿಯ ಸಾಮಾನ್ಯ ಉದ್ಯೋಗಿಯ ವೇತನದ 534.57 ಪಟ್ಟು ಇದೆ. ಇಷ್ಟು ಪ್ರಮಾಣದ ವೇತನ ನೀಡಿದರೆ ಅವರು ಕೆಲಸ ಮಾಡುತ್ತಾರೆ ಎಂದು ಸುಬ್ರಮಣ್ಯನ್ ಅವರ ಕಾಲು ಎಳೆದಿದ್ದಾರೆ.
ಯಾರಿದು ಎಸ್‌ಎನ್ ಸುಬ್ರಮಣ್ಯನ್ !
ಸುಬ್ರಹ್ಮಣ್ಯನ್ ಅವರು ಚೆನ್ನೈನಲ್ಲಿ ಸ್ಥಿತಿವಂತ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಎಸ್‌ಎಸ್ ನಾರಾಯಣ್ ಭಾರತೀಯ ರೈಲ್ವೆಯಲ್ಲಿ ಪ್ರಧಾನ ವ್ಯವಸ್ಥಾಪಕರಾಗಿದ್ದರು. ಚೆನ್ನೈನ ವಿದ್ಯಾ ಮಂದಿರ್ ಸೀನಿಯರ್ ಸೆಕೆಂಡರಿ ಸ್ಕೂಲ್‌ನಲ್ಲಿ ಆರಂಭಿಕ ಶಿಕ್ಷಣ ಪಡೆದರು. ಕುರುಕ್ಷೇತ್ರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ನಲ್ಲಿ ಪದವಿ ಪಡೆದಿದ್ದಾರೆ. ಪುಣೆಯ ಸಿಂಬೊಸಿಸ್ ಇನ್‌ಸ್ಟಿಟ್ಯೂಟ್‌ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಎಂಬಿಎ ಮತ್ತು ಲಂಡನ್ ಬಿಸ್ನೆಸ್ ಸ್ಕೂಲ್‌ನಲ್ಲಿ ಎಕ್ಸಿಕ್ಯೂಟಿವ್ ಮ್ಯಾನೇಜ್‌ಮೆಂಟ್ ಪ್ರೋಗ್ರಾಂ ಕೋರ್ಸ್ ಮಾಡಿದ್ದಾರೆ. 1984ರಲ್ಲಿ ಎಲ್ ಆ್ಯಂಡ್ ಟಿ ಕಂಪನಿಗೆ ಸೇರಿದ ಇವರು ವಿವಿಧ ಪ್ರಮುಖ ಹುದ್ದೆಗಳನ್ನು ನಿಭಾಯಿಸಿ ಇದೀಗ ಚೇರ್ಮನ್ ಹುದ್ದೆಯಲ್ಲಿದ್ದಾರೆ.
ಎಸ್‌ಎನ್ ಸುಬ್ರಹ್ಮಣ್ಯನ್ ಅವರು ಮೀನಾ ಎಂಬವರನ್ನು ವಿವಾಹವಾಗಿದ್ದಾರೆ. ಅವರಿಗೆ ಸೂರಜ್ ಮತ್ತು ಸಂಜಯ್ ಎಂಬ ಇಬ್ಬರು ಮಕ್ಕಳಿದ್ದಾರೆ. ಮೀನಾ ಸುಬ್ರಹ್ಮಣ್ಯನ್ ಅರ್ಥಶಾಸ್ತ್ರದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಮದುವೆಯಾದ ಬಳಿಕ ಮೀನಾ ಅವರು ಕುಟುಂಬದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸುಬ್ರಹ್ಮಣ್ಯನ್ ಅವರು ಎಲ್ ಆ್ಯಂಡ್ ಟಿ ಕಂಪನಿಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿರುವುದರಿಂದ ಮೀನಾ ಅವರು ತನ್ನ ಮಕ್ಕಳ ಶಿಕ್ಷಣ ಮತ್ತು ಮದುವೆಯ ಉಸ್ತುವಾರಿಯನ್ನೂ ನೋಡಿಕೊಂಡಿದ್ದಾರೆ. ಮೀನಾ ಕುಟುಂಬದ ಜವಾಬ್ದಾರಿಯನ್ನು ಸಂಪೂರ್ಣವಾಗಿ ವಹಿಸಿಕೊಂಡಿರುವ ಕಾರಣ ಮತ್ತು ಸುಬ್ರಹ್ಮಣ್ಯನ್ ಅವರ ಹಣಕಾಸು ಬೆಂಬಲದಿಂದ ಇವರು ಉತ್ತಮ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ