ಮೈಸೂರು: ರಾಜ್ಯದ ಮುಖ್ಯಮಂತ್ರಿ ತವರು ಕ್ಷೇತ್ರದಲ್ಲೇ ಬಹಿಷ್ಕಾರದಂತ ಸಾಮಾಜಿಕ ಪಿಡುಗು ಜೀವಂತವಾಗಿದ್ದು. ಗ್ರಾಮದ ಯಜಮಾನರ ಮಾತು ಕೇಳದಕ್ಕೆ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಶ್ರೀನಿವಾಸ ಪುರ ಗ್ರಾಮದಲ್ಲಿ ನಡೆದಿದೆ. 4 ವರ್ಷಗಳ ಕಾಲ ಬಹಿಷ್ಕಾರ ಹಾಕಲಾಗಿದೆ ಎಂದು ಮಾಹಿತಿ ದೊರೆತಿದೆ.
ಏನಿದು ಘಟನೆ ?
ಸಿದ್ದರಾಮಯ್ಯರ ತವರೂರು ಸಿದ್ದರಾಮನಹುಂಡಿ ಪಕ್ಕದ ಗ್ರಾಮವಾದ ಶ್ರೀ ನಿವಾಸ್ಪುರ ಗ್ರಾಮದಲ್ಲಿ ಘಟನೆ ನಡೆದಿದ್ದು. ಕಳೆದ ನಾಲ್ಕು ವರ್ಷಗಳ ಹಿಂದೆ ರಂಗನಾಥಪುರ ಗ್ರಾಮದ ಪ್ರಮೋದ್ ಹಾಗೂ ಸುರೇಶ್ ನಡುವೆ ಗಲಾಟೆ ನಡೆದಿತ್ತು. ಈ ಗಲಾಟೆ ವೇಳೆ ಪ್ರಮೋದ್ ಕಡೆಯವರು ಸುರೇಶ್ ಮನೆಗೆ ನುಗ್ಗಿ ಮನೆಯಲ್ಲಿದ್ದ ವಸ್ತುಗಳನ್ನು ಹಾಳು ಮಾಡಿದ್ದರು.
ಇದರ ಬಗ್ಗೆ ನ್ಯಾಯ ಪಂಚಾಯಿತಿ ಮಾಡಿದ್ದ ಗ್ರಾಮದ ಮುಖ್ಯಸ್ಥರು ‘ಪ್ರಮೋದ್‌ಗೆ 25 ಸಾವಿರ ಹಾಗೂ ಸುರೇಶ್‌ಗೆ 15 ಸಾವಿರ ದಂಡ ಹಾಕಿದ್ದರು. ಆದರೆ ಪಂಚಾಯತಿಯಲ್ಲಿ ಅನ್ಯಾಯಾವಾಗಿದೆ ಎಂದು ಸುರೇಶ್ ದಂಡವನ್ನು ಕಟ್ಟಲು ನಿರಾಕರಿಸಿದ್ದನು. ಈ ಕಾರಣದಿಂದ ಕೋಪಗೊಂಡ ಗ್ರಾಮದ ಯಜಮಾನರುಗಳಾದ ಚಿಕ್ಕಂಡಯ್ಯ, ಬಸವಯ್ಯ, ಮಹದೇವು, ಮೋಟಮಹದೇವಯ್ಯ ಮತ್ತು ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಮಹದೇವು ಹಾಗೂ ಬೊಮ್ಮಾಯಿ ಪ್ರಮೋದ್ ಮತ್ತು ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ.
ಇದನ್ನೂ ಓದಿ :
ತನ್ನ ಮಾತನ್ನೆ ನಿರಾಕರಿಸಿದ್ದಾನೆ ಎಂಬ ಕಾರಣಕ್ಕೆ ಗ್ರಾಮದ ಯಜಮಾನ ಬಹಿಷ್ಕಾರ ಹಾಕಿದ್ದು. ತಪ್ಪು ಕಾಣಿಕೆ ಕಟ್ಟುವವರೆಗೂ ನಮ್ಮ ಕುಲಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಬಹಿಷ್ಕರಿಸಲಾಗಿದೆ. ಸುರೇಶ್ ಮತ್ತು ಮಹದೇವಮ್ಮರನ್ನು ಗ್ರಾಮದಿಂದ ಹೊರಗೆ ಇಟ್ಟಿದ್ದಾರೆ. ಒಂದು ವೇಳೆ ಗ್ರಾಮಸ್ಥರು ಇವರ ಜೊತೆ ಮಾತನಾಡಿದರೆ 5 ಸಾವಿರ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.
ಇದರ ಕುರಿತು ಮೈಸೂರು ಜಿಲ್ಲಾಧಿಕಾರಿಗಳು, ತಹಶೀಲ್ದಾರ್, ಪೊಲೀಸರಿಗೆ ದೂರನ್ನು ಸಹ ನೀಡಲಾಗಿದೆ. ಆದರೆ ಇನ್ನು ನ್ಯಾಯ ದೊರೆತಿಲ್ಲ ಎಂದು ಸಂತ್ರಸ್ತರು ನೋವು ತೋಡಿಕೊಂಡಿದ್ದಾರೆ.