ಬೆಂಗಳೂರು: ಗ್ಯಾರಂಟಿ ಯೋಜನೆಗಳಿಂದ ನಷ್ಟದಲ್ಲಿ ಸಿಲುಕಿರುವ ಸರ್ಕಾರ ಇದೀಗ ಬಸ್ ಟಿಕೆಟ್ ದರ ಏರಿಕೆ ಮಾಡಿದ್ದು. ಎಲ್ಲಾ ಸಾರಿಗೆ ನಿಗಮಗಳ ಟಿಕೆಟ್ ದರವನ್ನು ಶೇಕಡಾ 15ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಇದರ ಕುರಿತು ಪವರ್ ಟಿವಿ ಜೊತೆಗೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಬಿಜೆಪಿಯವರು ಸಾಲ ಬಿಟ್ಟು ಹೋಗಿರುವುದಕ್ಕೆ ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಪವರ್ ಟಿವಿಗೆ ರಾಮಲಿಂಗ ರೆಡ್ಡಿ ಮಾತು !
ಪವರ್ ಟಿವಿ ಜೊತೆಗೆ ಮಾತನಾಡಿದ ಸಚಿವ ರಾಮಲಿಂಗ ರೆಡ್ಡಿ ‘ 2014ರಲ್ಲಿ ಬಿಎಂಟಿಸಿ ಟಿಕೆಟ್ ದರವನ್ನು ಹೆಚ್ಚಳ ಮಾಡಿದ್ದೆವು. ಅದರ ನಂತರ ಹೆಚ್ಚಳ ಮಾಡುವ ಗೋಜಿಗೆ ಹೋಗಿರಲಿಲ್ಲ. ಆದರೆ ಅಂದಿಗೂ, ಇಂದಿಗೂ ಬಹಳ ವ್ಯತ್ಯಾಸ ಇದೆ. ಇಂದು ಪ್ರತಿ ದಿನ 13 ಕೋಟಿ 21ಲಕ್ಷ ಖರ್ಚಾಗುತ್ತಿದೆ. ಎಲ್ಲಾ ಸಾರಿಗೆ ನಿಗಮಗಳಿಂದ ಕಳೆದ 6 ತಿಂಗಳಿಂದ ದರ ಹೆಚ್ಚಳ ಮಾಡಲು ಪ್ರಸ್ತಾವನೆ ಬಂದಿದೆ. ಈಗ ಇದಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ. 15ರಷ್ಟು ಹೆಚ್ಚಳ ಮಾಡಲಿದ್ದು, ಸುಮಾರು 1000 ಕೋಟಿ ಬರಬಹುದು ಎಂದು ತಿಳಿದು ಬಂದಿದೆ.
ಬಿಜೆಪಿಯವರು ಸುಮಾರು 5900 ಕೋಟಿ ಸಾಲ ಬಿಟ್ಟು ಹೋಗಿದ್ದಾರೆ. ಅಷ್ಟು ಸಾಲದ ಹೊರೆ ನಮ್ಮ ಮೇಲಿದೆ. ಅದರಿಂದ ದರ ಏರಿಕೆ ಮಾಡಬೇಕಾದ ಅನಿವಾರ್ಯತೆ ಇದೆ. ಒಂದು ದಿನಕ್ಕೆ ಸುಮಾರು 18 ಕೋಟಿ ಹಣವನ್ನು ಸಂಬಳ ನೀಡಲು ವ್ಯಯ ಮಾಡುತ್ತಿದ್ದೇವೆ.