ಬೆಂಗಳೂರು: ‘ಐಕಾನ್ ಸ್ಟಾರ್ ಅಲ್ಲು ಅರ್ಜನ್ ಮಾಡಿದ ತಪ್ಪಿನಿಂದಾಗಿ ಇಂದು ಟಾಲಿವುಡ್, ಸಿಎಂ ರೇವಂತ್ ರೆಡ್ಡಿ ಮುಂದೆ ಕೈಮುಗಿದು ನಿಲ್ಲುವಂತಾಗಿದೆ’ ಎಂದು ತೆಲುಗು ನಿರ್ಮಾಪಕ, ನಿರ್ದೇಶಕ ತಮ್ಮಾರೆಡ್ಡಿ ಭಾರದ್ವಾಜ್ ಹೇಳಿದ್ದಾರೆ
ಪುಷ್ಪ-2 ಶೋ ವೇಳೆ ಹೈದರಾಬಾದ್ ಸಂದ್ಯಾ ಚಿತ್ರಮಂದಿರದಲ್ಲಿ ಸಂಭವಿಸಿದ್ದ ಕಾಲ್ತುಳಿತ ಪ್ರಕರಣದ ಬಗ್ಗೆ ಹಾಗೂ ಅಲ್ಲು ಅರ್ಜುನ್ ಅವರ ಮೇಲೆ ಕೇಸ್ ಹಾಕಿರುವ ಬಗ್ಗೆ ಖಾಸಗಿ ಸುದ್ದಿವಾಹಿನಿಗಳ ಜೊತೆ ಮಾತನಾಡಿರುವ ತಮ್ಮಾರೆಡ್ಡಿ, ‘ಒಬ್ಬ ನಟ, ಸ್ಟಾರ್ ಆದವನು ಸಾರ್ವಜನಿಕವಾಗಿ ಹೇಗೆ ಇರಬೇಕೊ ಹಾಗೆ ಅಲ್ಲು ಇರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ :ಪೊಲೀಸ್ ಮೇಲೆಯೆ ಹಲ್ಲೆ ಮಾಡಿದ ಭೂಪ ; ವಿಡಿಯೋ ವೈರಲ್
“ಸಿಂಗಲ್ ಸ್ಟ್ರೀನ್ ಥಿಯೇಟರ್‌ಗಳಲ್ಲಿ ಸಿನಿಮಾ ಬಿಡುಗಡೆಯಾದ ದಿನ ತಾನೂ ಸಿನಿಮಾ ನೋಡಲು ಹೋದರೆ ಜನಸಾಮಾನ್ಯರು ಜಮಾಯಿಸಿ ಎಡವಟ್ಟಾಗುತ್ತವೆ ಎಂದು ಗೊತ್ತಿದ್ದರೂ ಅಲ್ಲು ಅರ್ಜನ್ ಅಲ್ಲಿ ಹೋಗಿ ತಪ್ಪು ಮಾಡಿದರು. ಅವರಿಂದಾಗಿಯೇ ಇಂದು ಟಾಲಿವುಡ್ ಸಿಎಂ ರೇವಂತ್ ರೆಡ್ಡಿ ಮುಂದೆ ಕೈ ಮುಗಿದು ನಿಲ್ಲುವಂತಾಗಿದೆ. ಇದು ಸರಿಯಲ್ಲ’ ಎಂದು ಬೇಸರಿಸಿದ್ದಾರೆ.
‘ಚಿರಂಜೀವಿ, ನಾಗಾರ್ಜುನ್ ಸೇರಿದಂತೆ ಅನೇಕ ಹಿರಿಯ ಸ್ಟಾರ್ ನಟರು ಸಾರ್ವಜನಿಕವಾಗಿ ತಾವು ಹೇಗೆ ಇರಬೇಕು ಎಂಬುದು ಅವರಿಗೆ ಗೊತ್ತಿದೆ. ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆಯಾದಾಗ ಮಲ್ಟಿಪ್ಲೆಕ್ಸ್ ಗಳಿಗೆ ಹೋಗಿ, ಔಪಚಾರಿಕವಾಗಿ ಅಭಿಮಾನಿಗಳನ್ನು ಭೇಟಿಯಾಗಿ ಬರುತ್ತಾರೆ. ಅಲ್ಲು ಕೂಡ ಹಾಗೇ ಮಾಡಬಹುದಿತ್ತು’ ಎಂದು ಹೇಳಿದ್ದಾರೆ.
‘ಆ ಘಟನೆ ನಡೆಯಬಾರದಿತ್ತು. ಅದು ದುರಾದೃಷ್ಟವಶಾತ್ ನಡೆದಿರುವುದು. ಆದರೆ, ಅದು ಏಕೆ ನಡೆಯಿತು ಎಂಬುದನ್ನು ನಾವು ಚರ್ಚೆ ಮಾಡಬೇಕಿದೆ’ ಎಂದಿದ್ದಾರೆ. ಈ ಕುರಿತು Free Press Journal ವೆಬ್‌ಸೈಟ್ ವರದಿ ಮಾಡಿದೆ. ತಮ್ಮಾರೆಡ್ಡಿ ಭಾರದ್ವಾಜ್ ಅವರು 20 ತೆಲುಗು ಸಿನಿಮಾಗಳನ್ನು ನಿರ್ದೇಶಿಸಿ, 15 ಕ್ಕೂ ಹೆಚ್ಚು ತೆಲುಗು ಚಿತ್ರಗಳನ್ನು ನಿರ್ಮಿಸಿದ್ದಾರೆ. ಅವರು ತೆಲಗು ಚಲನಚಿತ್ರ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷರೂ ಹೌದು. ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟು, ಅವರ ಮಗ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಅಲ್ಲು ಅರ್ಜುನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಹೈದರಾಬಾದ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ.