ಕೀವ್ : ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದ ರಷ್ಯಾಗೆ ಡ್ರೋಣ್ ದಾಳಿ ಮೂಲಕ ಉಕ್ರೇನ್ ತಿರುಗೇಟು ನೀಡಿದ್ದು, ಉಕ್ರೇನ್ ದಿಢೀರ್ ಕ್ರಮಕ್ಕೆ ರಷ್ಯಾದ ಕಜಾನ್ ಜನತೆ ಬೆಚ್ಚಿ ಬಿದ್ದಿದ್ದಾರೆ. ಉಕ್ರೇನ್‌ನ 8 ಸ್ಫೋಟಕ ಡ್ರೋನ್ ವಿಮಾನಗಳು ರಷ್ಯಾದ ಕಜಾನ್ ನಗರದ ಮೇಲೆ ದಾಳಿ ನಡೆಸಿವೆ ಎಂದು ಹೇಳಲಾಗುತ್ತಿದೆ. ಇದೇ ನಗರದಲ್ಲಿ ಇತ್ತೀಚೆಗೆ ಬ್ರಿಕ್ಸ್ ರಾಷ್ಟ್ರಗಳ ಶೃಂಗಸಭೆ ನಡೆದಿದ್ದು, ಭಾರತದ ಪ್ರಧಾನಿ ಮೋದಿ ಸೇರಿದಂತೆ ಹಲವು ವಿಶ್ವ ನಾಯಕರು ಆಗಮಿಸಿದ್ದರು.
ಡ್ರೋನ್ ದಾಳಿಯಲ್ಲಿ 3 ಕಟ್ಟಡಗಳು ಹಾನಿಗೊಳಗಾಗಿದ್ದು, ಜನರನ್ನು ಅಲ್ಲಿಂದ ಸ್ಥಳಾಂತರಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಸ್ಥಳೀಯ ಆಡಳಿತವು ಜನರಿಗೆ ಊಟ, ಬಟ್ಟೆಗಳನ್ನು ಒದಗಿಸಿದೆ ಎಂದು ತಿಳಿದುಬಂದಿದೆ.
ದಾಳಿಯ ನಂತರ ಕಜನ್ ವಿಮಾನ ನಿಲ್ದಾಣವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಮತ್ತು ಇಝೆವ್ಸ್ಕ್ ವಿಮಾನ ನಿಲ್ದಾಣದಲ್ಲಿ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ ಎಂದು ರಷ್ಯಾದ ವಾಯುಯಾನ ವಾಚ್‌ಡಾಗ್ ರೊಸಾವಿಯಾಟ್ಸಿಯಾ ಹೇಳಿದ್ದಾರೆ.
ಅಮೇರಿಕಾ WT ಮೇಲಿನ ದಾಳಿಯನ್ನು ನೆನಪಿಸಿದಂತಿದೆ ರಷ್ಯಾ ಮೇಲಿನ ದಾಳಿ !
ಈ ನಡುವೆ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗುತ್ತಿವೆ. ವೈರಲ್ ಆಗಿರುವ ವಿಡಿಯೋ ಸೆಪ್ಟೆಂಬರ್ 11, 2001ರಂದು ನ್ಯೂಯಾರ್ಕ್‌ನ ವರ್ಲ್ಡ್ ಟ್ರೇಡ್ ಸೆಂಟರ್ ಅವಳಿ ಗೋಪುರಕ್ಕೆ ವಿಮಾನದ ಮೂಲಕ ದಾಳಿ ನಡೆಸಿದ ಘಟನೆಯನ್ನು ಸ್ಮರಿಸುವಂತಿದೆ. ಸೆಪ್ಟೆಂಬರ್ 11, 2001ರಂದು ಅಮೆರಿಕಗೆ ಅಲ್‌ಕೈದಾ ಉಗ್ರ ಸಂಘಟನೆ ಶಾಕ್ ಕೊಟ್ಟಿದ್ದರು. ಈ ಭೀಕರ ಉಗ್ರ ದಾಳಿಯಲ್ಲಿ 2977 ಅಮಾಯಕರು ಮೃತರಾಗಿದ್ದರು.
ಅಲ್‌ಖೈದಾ ಎಂಬ ಇಸ್ಲಾಮಿಕ್ ಉಗ್ರ ಸಂಘಟನೆ ಅಧಿನಾಯಕ ಒಸಾಮಾ ಬಿನ್ ಲಾಡೆನ್ ನೇತೃತ್ವದಲ್ಲಿ ಅಮೆರಿಕದ ಮೇಲೆ ಉಗ್ರ ದಾಳಿ ನಡೆಸಿತ್ತು. ನ್ಯೂಯಾರ್ಕ್‌ನ ವರ್ಲ್ಡ್ ಟ್ರೇಡ್ ಸೆಂಟರ್ ಅವಳಿ ಗೋಪುರದ ಮೇಲೆ ವಿಮಾನ ದಾಳಿ ನಡೆದಿತ್ತು. ಸೆಪ್ಟೆಂಬರ್ 11, 2001 ಈ ಘಟನೆ ನಡೆದಿದ್ದು ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿತ್ತು.