ಹಾಸನ: ವಕೀಲಿ ವೃತ್ತಿ ಮಾಡುತ್ತಿದ್ದ ಆತ ಕೆಲ ಸ್ನೇಹಿತರಿಗೆ ಒಂದಷ್ಟು ಹಣ ಕೊಟ್ಟು ಬಡ್ಡಿ ವ್ಯವಹಾರ ಕೂಡ ಮಾಡಿಕೊಂಡಿದ್ದ.. ತನ್ನ ವೃತ್ತಿ ಮುಗಿಸಿ ನೆನ್ನೆ ರಾತ್ರಿ ಮನೆಗೆ ಹೋರಟಿದ್ದ ಆ ವಕೀಲನ ಮೇಲೆ ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ದಾರೆ.. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರೋ ವಕೀಲ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ ಎಂದು ತಿಳಿದು ಬಂದಿದೆ.
ಹಾಸನ ಜಿಲ್ಲೆ, ಆಲೂರು ತಾಲ್ಲೂಕಿನ, ರಂಗೇನಹಳ್ಳಿ ಗ್ರಾಮದ ದುಶ್ಯಂತ್ ಎಂಬಾತ ವಕೀಲಿ ವೃತ್ತಿಯೊಂದಿಗೆ, ಪರಿಚಯಸ್ತರಿಗೆ ಒಂದಿಷ್ಟು ಹಣವನ್ನ ಬಡ್ಡಿಗೆ ಕೊಟ್ಟಿದ್ದರಂತೆ. ನೆನ್ನೆ ಸಂಜೆ ಯಾರನ್ನೋ ಭೇಟಿಯಾಗಬೇಕು ಎಂದು ತನ್ನ ಗ್ರಾಮದಿಂದ ಸಕಲೇಶಪುರ ತಾ. ಬಾಳ್ಳುಪೇಟೆಗೆ ಹೋಗಿ ಬರೋದಾಗಿ ಮನೆಯಲ್ಲಿ ಹೇಳಿ ತನ್ನ ಬೈಕ್ ನಲ್ಲಿ ಹೊರಟಿದ್ದಾನೆ.
ಕೆಲಸ ಮುಗಿಸಿ ತನ್ನ ಗ್ರಾಮಕ್ಕೆ ಬರುವ ವೇಳೆ ದುಷ್ಯಂತ್ ನನ್ನ ಆಲೂರು ತಾಲ್ಲೂಕಿನ ಈಶ್ವರಹಳ್ಳಿ ಕೂಡಿ ಬಳಿ ಯಾರೋ ದುಷ್ಕರ್ಮಿಗಳು ಏಕಾಏಕಿ ಅಟ್ಯಾಕ್ ಮಾಡಿ ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಕೊಲೆ ಮಾಡಲು ಯತ್ನಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದನ್ನು ಕಂಡು ದುಷ್ಕರ್ಮಿಗಳು ಸಾವನ್ನಪ್ಪಿದ್ದಾನೆ ಎಂದು ಬಿಟ್ಟು ಸ್ಥಳದಿಂದ ಪಾರಾರಿಯಾಗಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ವಕೀಲ ದುಷ್ಯಂತ್ ಮತ್ತು ಆತನ KA-46-L-4087 ನಂಬರ್‌ನ ಬೈಕ್ ರಸ್ತೆ ಬದಿ ಬಿದ್ದಿದ್ದನ್ನು ಕಂಡು ಸ್ಥಳೀಯರು ಈ ಪ್ರದೇಶದಲ್ಲಿ ಕಾಡಾನೆಗಳು ಹೆಚ್ಚಾಗಿದ್ದು ಯಾವುದೋ ಕಾಡಾನೆ ದಾಳಿಯಿಂದ ಘಟನೆ ನಡೆದಿದೆ ಎಂದು ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದ್ದಾರೆ. ಮಾರಕಾಸ್ತ್ರಗಳಿಂದ ಹಲ್ಲೆಗೊಳಗಾಗಿದ್ದನ್ನು ದೃಢಪಡಿಸಿಕೊಂಡ ಕೆಲವರು ಪೊಲೀಸರಿಗೆ ವಿಷಯ ಮುಟ್ಟಿಸಿ ಹಾಸನದ ಖಾಸಗಿ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ರವಾನೆ ಮಾಡಿದ್ದಾರೆ.
ಇನ್ನು ಗಂಭೀರ ಗಾಯದಿಂದ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ದುಷ್ಯಂತಗೆ ಚಿಕಿತ್ಸೆ ಮುಂದುವರೆದಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಘಟನೆ ಬಗ್ಗೆ ವಕಿಲರ ಸ್ನೇಹಿತರು ಮತ್ತು ಸಂಬಂಧಿಕರು ವಕೀಲಿ ವೃತ್ತಿ ಮಾಡುತ್ತಿದ್ದ ದುಷ್ಯಂತ್ ಕೇಸ್ ವಿಚಾರವಾಗಿ ಈ ಘಟನೆ ನಡೆದಿರಬಹುದು ಅಥವಾ ಯಾರೋ ಹಣಕಾಸು ವಿಚಾರಕ್ಕೂ ಈ ರೀತಿ ಮಾಡಿರಬಹುದು ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದು ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ.
ಸಣ್ಣ ಪುಟ್ಟ ಜಗಳಗಳಲ್ಲೂ ಮಾರಕಾಸ್ತ್ರವನ್ನ ಭಯವಿಲ್ಲದೆ ಬಳಸುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮ ವಹಿಸಬೇಕು. ಈ ಘಟನೆಗೆ ಸಂಬಂಧಿಸಿದವರನ್ನ ಶೀಘ್ರ ಬಂಧಿಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ಘಟನೆ ಸಂಬಂಧ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಟ್ಟಲ್ಲಿ ವಕೀಲ ದುಷ್ಯಂತ್ ಮೇಲೆ ನಡೆದಿರೋ ಗಂಭೀರ ಹಲ್ಲೆ ಸುತ್ತಾ ಅನೇಕ ಅನುಮಾನ ಕೇಳಿಬರುತ್ತಿದ್ದು ಘಟನೆಯಲ್ಲಿ ಭಾಗಿಯಾಗಿರೋ ದುಷ್ಕರ್ಮಿಗಳಿಗಾಗಿ ಹಾಸನ ಪೊಲೀಸರು ಬಲೆ ಬೀಸಿದ್ದು. ಆರೋಪಿಗಳ ಬಂಧನದ ನಂತರವಷ್ಟೇ ಘಟನೆಗೆ ಕಾರಣ ತಿಳಿಯಬೇಕಿದೆ.