ಬೆಳಗಾವಿ : ಇಂದಿನಿಂದ ಬೆಳಗಾವಿಯ ಸುವರ್ಣಸೌದದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದ್ದು ಆಡಳಿತಾರೂಡ ಸರ್ಕಾರಕ್ಕೆ ಸಾಲು ಸಾಲು ಪ್ರತಿಭಟನೆಯ ಬಿಸಿ ತಟ್ಟುತ್ತಿದೆ. ಇದರ ನಡುವೆ ನೆರೆಯ ಮಹರಾಷ್ಟ್ರದ ಶಿವಸೇನೆಯ ಮಾಜಿ ಸಿಎಂ ಉದ್ದವ್ ಠಾಕ್ರೆ ಮಗ ಆದಿತ್ಯಾ ಠಾಕ್ರೆ ಬೆಳಗಾವಿಯ ಸಮಸ್ಯೆ ಬಗೆಹರಿಯುವವರೆಗೆ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಬೇಕು ಎಂದು ಆಗ್ರಹಿಸಿದೆ.
ಬೆಳಗಾವಿಯ ಅಧಿವೇಶನದ ನಡುವೆ ಮಹಾರಾಷ್ಟ್ರದಿಂದ ಗಡಿ ವಿಷಯದಲ್ಲಿ ಕ್ಯಾತೆ ಆರಂಭವಾಗಿದ್ದು. ಕರ್ನಾಟಕ ಮತ್ತು ಮಹರಾಷ್ಟ್ರದ ನಡುವಿನ ಗಡಿ ವಿವಾದವನ್ನು ಕೆದಕಿದೆ. ಮಹಾರಾಷ್ಟ್ರ ಚುನಾವಣೆಯಲ್ಲಿ ಸೋತರು ಕೂಡ ಬುದ್ದಿಕಲಿಯದ ಠಾಕ್ರೆ ಬಣದ ಶಿವಸೇನೆಯಿಂದ ಗಡಿವಿಷಯದಲ್ಲಿ ಕ್ಯಾತೆ ಆರಂಭವಾಗಿದೆ.
ಮಹರಾಷ್ಟ್ರದ ಮಾಜಿ ಸಿಎಂ ಉದ್ದವ್ ಠಾಕ್ರೆ ಮಗ ಆದಿತ್ಯ ಠಾಕ್ರೆ ಗಡಿವಿವಾದವನ್ನು ಕೆದಕಿದ್ದು, ಬೆಳಗಾವಿ ವಿವಾದವನ್ನು ಬಗೆಹರಿಸಲು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು ಹಾಗೂ ಗಡಿ ವಿವಾದ ಇತ್ಯರ್ಥವಾಗೋವರೆಗು ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ. ಇದುವರೆಗು ಭಾಷಾ ವಿಷ ಬೀಜ ಬಿತ್ತುತ್ತಿದ್ದ ಆದಿತ್ಯಾ ಠಾಕ್ರೆ ಇದೀಗ ಗಡಿಯಲ್ಲಿ ವಿವಾದ ಸೃಷ್ಟಿಸಲು ಯತ್ನಿಸುತ್ತಿದ್ದಾರೆ.