ಮುಂಬೈ : ಮಹಾರಾಷ್ಟ್ರದಲ್ಲಿ ಡಿ.05 ರಿಂದ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು, ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಪದಗ್ರಹಣ ಮಾಡಲಿದ್ದಾರೆ. ಸಿಎಂ, ಡಿಸಿಎಂ, ಸಚಿವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಜಾದ್ ಮೈದಾನದಲ್ಲಿ ಸಿದ್ಧತೆಗಳು ಭರದಿಂದ ಸಾಗಿದ್ದು, ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಮುದ್ರಿತವಾಗಿರುವ ದೇವೇಂದ್ರ ಫಡ್ನವಿಸ್ ಹೆಸರು ಎಲ್ಲರ ಗಮನ ಸೆಳೆಯುತ್ತಿದೆ.
ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುತ್ತಿರುವ ದೇವೇಂದ್ರ ಫಡ್ನವಿಸ್ ಅವರ ಹೆಸರನ್ನು ಅಧಿಕೃತ ಆಹ್ವಾನ ಪತ್ರಿಕೆಯಲ್ಲಿ ದೇವೇಂದ್ರ ಸರಿತ ಗಂಗಾಧರ್ ರಾವ್ ಫಡ್ನವಿಸ್ ಎಂದು ಮುದ್ರಿಸಲಾಗಿದೆ. ದೇವೇಂದ್ರ ಫಡ್ನವಿಸ್ ಅವರು ತಮ್ಮ ತಾಯಿ- ತಂದೆಗೆ ಗೌರವ ಸೂಚಿಸುವ ಹಿನ್ನೆಲೆಯಲ್ಲಿ ತಮ್ಮ ಹೆಸರಿನೊಂದಿಗೆ ತಂದೆ ತಾಯಿಯ ಹೆಸರನ್ನೂ ಸೇರಿಸಿದ್ದಾರೆ.
ಸರಿತಾ ದೇವೇಂದ್ರ ಫಡ್ನವಿಸ್ ಅವರ ತಾಯಿಯ ಹೆಸರಾಗಿದ್ದರೆ, ಗಂಗಾಧರ್ ರಾವ್ ಎಂಬುದು ತಂದೆಯ ಹೆಸರಾಗಿದೆ. ಮಹಾರಾಷ್ಟ್ರದಲ್ಲಿ ವ್ಯಕ್ತಿಯ ಹೆಸರಿನೊಂದಿಗೆ ತಮ್ಮ ತಂದೆಯ ಹೆಸರು ಸೇರಿಸಿಕೊಳ್ಳುವುದು ವಾಡಿಕೆಯಾಗಿದೆ. ಆದರೆ ಇದೇ ಮೊದಲ ಬಾರಿಗೆ ಅಧಿಕೃತ ಆಹ್ವಾನ ಪತ್ರಿಕೆಯಲ್ಲಿ ಫಡ್ನವಿಸ್ ತಮ್ಮ ತಾಯಿಯ ಹೆಸರನ್ನೂ ಸೇರಿಸಿಕೊಳ್ಳುವ ಮೂಲಕ ಎಲ್ಲರ ಮನಗೆದ್ದಿದ್ದಾರೆ.