Thursday, December 5, 2024

ಮಂಡ್ಯದಲ್ಲಿ 4 ಜನರನ್ನ ಬಿಜೆಪಿ ಶಾಸಕರನ್ನಾಗಿ ಮಾಡಿ : ಶಾಸಕ​ ಯತ್ನಾಳ್ ಸವಾಲ್​

ವಿಜಯಪುರ: ಮಾಧ್ಯಮದವರು ಆ ರಕ್ತ ಈ ರಕ್ತ ಎಂದು ಸುದ್ದಿ ಮಾಡಿದ್ರು ಅದು ಯಾವ ರಕ್ತಾ ಇದೆಯೋ ಯಾರಿಗೆ ಗೊತ್ತು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಶುಕ್ರವಾರ ಹೇಳಿದರು.

ಮಂಡ್ಯದಲ್ಲಿ ಯತ್ನಾಳ್ ವಿರುದ್ಧ ರಕ್ತ ಚಳುವಳಿ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರದಲ್ಲಿ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಾಧ್ಯಮದವರು ಆ ರಕ್ತ ಈ ರಕ್ತ ಎಂದು ಸುದ್ದಿ ಮಾಡಿದ್ರು ಅದು ಯಾವ ರಕ್ತಾ ಇದೆಯೋ ಯಾರಿಗೆ ಗೊತ್ತು? ಅದು ಅವರದ್ದೇ ರಕ್ತ ಇದೆಯೋ ಮತ್ಯಾರದ್ದೋ ರಕ್ತ ಇದೆಯೋ ಗೊತ್ತಿಲ್ಲ. ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಒಬ್ಬ ಗ್ರಾಮ ಪಂಚಾಯಿತಿ ಸದಸ್ಯನನ್ನು ಆಯ್ಕೆ ಮಾಡಿಲ್ಲ. ಅವರಿಗೆ ನನ್ನ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದರು.

ಅಲ್ಲದೇ, ನನ್ನ ವಿರುದ್ಧ ರಕ್ತ ಚಳುವಳಿ ಏನು ಮಾಡುತ್ತಾರೆ. ಮೊದಲು ಅಲ್ಲಿ ನಮ್ಮ ಪಕ್ಷದ ನಾಲ್ಕು ಶಾಸಕರನ್ನಾಗಿ ಮಾಡಿ. ಮಂಡ್ಯದಲ್ಲಿರುವ ಬೂಕನಕೆರೆ ವಿಜಯೇಂದ್ರನ ಅಪ್ಪನ ಊರು. ಬೂಕನಕೆರೆಯಲ್ಲಿಯೇ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರೇ ಇಲ್ಲ. ಅವರು ನನಗೆ ರಕ್ತದಲ್ಲಿ ಪತ್ರ ಬರೆಯುತ್ತಾರಂತೆ ಎಂದು ಯತ್ನಾಳ್ ಅವರು ಅಣಕಿಸಿದ್ದಾರೆ.

ಶಿವಮೊಗ್ಗದಲ್ಲಿ, ಶಿಕಾರಿಪುರದಲ್ಲಿ ರಕ್ತದಲ್ಲಿ ಪತ್ರ ಬರೆದಿದ್ದರೆ ಒಂದು ಔಚಿತ್ಯವಿತ್ತು. ಯಾವ ಬಿಜೆಪಿಯ ಜನಪ್ರತಿನಿಧಿಯೂ ಇಲ್ಲದ ಮಂಡ್ಯದಲ್ಲಿ ಕೇವಲ ಆರು ಜನರು ಕೈಗೆ ಚುಚ್ಚಿಕೊಂಡು ರಕ್ತದಲ್ಲಿ ಪತ್ರ ಬರೆಯುತ್ತಿದ್ದಾರೆ. ದುಡ್ಡು ಪಡೆದುಕೊಂಡು ಹೀಗೆ ಮಾಡುತ್ತಿದ್ದಾರೆ. ಯಾರು ಏನು ಬೇಕಾದರೂ ಮಾಡಲಿ ನಾನು ತಲೆಕೆಡಿಸಿಕೊಳ್ಳಲ್ಲ. ಶಿಫಾರಸ್ಸು ಮಾಡಲಿ ಕೋರ್ ಕಮಿಟಿಯಲ್ಲಿ ಏನೇ ತೀರ್ಮಾನ ತೆಗೆದುಕೊಳ್ಳಲಿ. ನಾವು ವಕ್ಪ್ ಹೋರಾಟವನ್ನು ಕೈ ಬಿಡಲ್ಲ. ಪ್ರಧಾನಿ ಅವರು ಹೇಳಿದಂತೆ ವಂಶವಾದ, ಭ್ರಷ್ಟಾಚಾರ, ರಾಜಕಾರಣದ ವಿರುದ್ಧ ಹೋರಾಡುವೆ. ಅದು ನಮ್ಮ ಪಕ್ಷವೇ ಇರಲಿ ಬೇರೆ ಪಕ್ಷವೇ ಇರಲಿ ಎಂದಿದ್ದಾರೆ.

ಸದ್ಯ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿ ಜೊತೆ ಹೊಂದಾಣಿಕೆ ಇಲ್ಲ. ನಾನು ಹೊಂದಾಣಿಕೆ ಇದ್ದಿದ್ದರೆ ನನ್ನ ಸಕ್ಕರೆ ಕಾರ್ಖಾನೆಗೆ ಯಾವುದೇ ತೊಂದರೆ ಆಗುತ್ತಿರಲಿಲ್ಲ. ನನ್ನ ಮೇಲೆ 42 ಕೇಸುಗಳನ್ನ ಸಿಎಂ ಹಾಗೂ ಡಿಸಿಎಂ ಹಾಕುತ್ತಿರಲಿಲ್ಲ. ವಿಜಯೇಂದ್ರನ ಮೇಲೆ ಒಂದೇ ಒಂದು ಕೇಸ್ ಹಾಕಿಲ್ಲ, ಯಡಿಯೂರಪ್ಪ ವಿರುದ್ಧ ಎಷ್ಟೇ ಗಂಭೀರ ಪ್ರಕರಣಗಳಿದ್ದರೂ ಮುಚ್ಚಿಟ್ಟಿದ್ದರು. ಈಗ ಬಿ.ಎಸ್​ ಯಡಿಯೂರಪ್ಪ ಪ್ರಕರಣಗಳನ್ನು ತೆಗೆಯುತ್ತಿದ್ದಾರೆ. ಅವರವರದ್ದು ಹಳಸಿದೆ, ಹಳಸಿದ್ದಕ್ಕೆ ಹಸಿದಿದ್ದಕ್ಕೆ ಒಂದಾಗಿವೆ ಎಂದು ವಿರೋಧಿಗಳನ್ನು ಮಾತಿನ ಮೂಲಕ ತಿವಿದಿದ್ದಾರೆ.

RELATED ARTICLES

Related Articles

TRENDING ARTICLES