Tuesday, November 26, 2024

26/11ರ ಮುಂಬೈ ರಕ್ಕಸ ದಾಳಿಗೆ 16 ವರ್ಷ: ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಮುಂಬೈ : ಭಾರತದಲ್ಲಿ ಕರಾಳ ಅಧ್ಯಾಯ ಬರೆದ 26/11- 2008ರ ಮುಂಬೈ ಭಯೋತ್ಪಾದಕ ದಾಳಿಗೆ 16 ವರ್ಷಗಳು ಕಳೆದಿದ್ದು, ಅಮಾಯಕ ಜನರು, ಹುತಾತ್ಮ ಯೋಧರನ್ನು ಕಳೆದುಕೊಂಡ ಕರಾಳ ದಿನವನ್ನು ದೇಶದ ಜನತೆ ಸ್ಮರಿಸಿದೆ.ದಾಳಿಯ ವೇಳೆ ಉಗ್ರರ ವಿರುದ್ಧ ಹೋರಾಡಿ ತ್ಯಾಗ ಮಾಡಿದ ಹುತಾತ್ಮರಿಗೆ ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಮತ್ತು ಮುಖ್ಯಮಂತ್ರಿ ಏಕನಾಥ್ ಶಿಂಧೆ ಮಂಗಳವಾರ ಪುಷ್ಪನಮನ ಸಲ್ಲಿಸಿದ್ದಾರೆ.ಮುಂಬೈನ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿರುವ ಹುತಾತ್ಮ ಸ್ಮಾರಕದಲ್ಲಿ ಯೋಧರು ಮತ್ತು ಪೊಲೀಸರಿಗೆ ಪುಷ್ಪನಮನ ಸಲ್ಲಿಸಿದರು. ಈ ವೇಳೆ ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್‌, ಅಜಿತ್‌ ಪವಾರ್‌ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೂ ಕೂಡ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, “ನವೆಂಬರ್ 26, 2008 ರಂದು ಮುಂಬೈನಲ್ಲಿ ನಡೆದ ಹೇಡಿತನದ ಭಯೋತ್ಪಾದನಾ ದಾಳಿಯ ವಾರ್ಷಿಕೋತ್ಸವದಂದು ಇಡೀ ರಾಷ್ಟ್ರದೊಂದಿಗೆ ಸೇರಿ ಪ್ರಾಣ ಕಳೆದುಕೊಂಡ ವೀರ ಹೃದಯಿಗಳಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ, ಕುಟುಂಬಗಳೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸುತ್ತೇನೆಂದು ಹೇಳಿದ್ದಾರೆ. ಜನರ ಜೀವ ರಕ್ಷಿಸವ ಸಂದರ್ಭದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಗೌರವ ಸಲ್ಲಿಸುತ್ತೇನೆ.

ಭಯೋತ್ಪಾದನೆಯನ್ನು ಎಲ್ಲಾ ರೂಪಗಳಲ್ಲಿ ಸೋಲಿಸಲು ಭಾರತ ಬದ್ಧವಾಗಿದೆ ಎಂದು ತಿಳಿಸಿದ್ದಾರೆ. ಇದರಂತೆ ವೀರ ಯೋಧರಿಗೆ ಕೇಂದ್ರ ಸಚಿವ ಅಮಿತ್ ಶಾ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೂ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

26/11 ರಂದು ಮುಂಬೈನಲ್ಲಿ ಏನಾಯಿತು !

ಪಾಕಿಸ್ತಾನದ ಕರಾಚಿಯಿಂದ ಸಮುದ್ರ ಮಾರ್ಗದ ಮೂಲಕ ಬಂದಿದ್ದ 10 ಮಂದಿ ಲಷ್ಕರ್-ಇ-ತೊಯ್ಬಾ ಉಗ್ರರು 2008ರ ನ.26ರಂದು ಮುಂಬೈನ ತಾಜ್ ಹೋಟೆಲ್, ಶಿವಾಜಿ ಟರ್ಮಿನಲ್ ಸೇರಿದಂತೆ 12 ಸ್ಥಳಗಳ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ವಿದೇಶಿಗರೂ ಸೇರಿದಂತೆ 174 ಮಂದಿ ನಾಗರೀಕರು ಸಾವನ್ನಪ್ಪಿದ್ದರು.

ಸಮುದ್ರ ಮಾರ್ಗದಿಂದ ಬಂದ ಈ ದುಷ್ಕರ್ಮಿಗಳು ತಾಜ್‌ ಮಹಲ್‌ ಹೊಟೇಲ್, ಒಬೇರಾಯ್‌ ಹೊಟೇಲ್‌, ಲಿಯೋಪೋಲ್ಡ್‌ ಕೆಫೆ, ನಾರಿಮನ್‌ ಹೌಸ್‌, ಛತ್ರಪತಿ ಶಿವಾಜಿ ರೈಲ್ವೆ ಟರ್ಮಿನಸ್‌ ಮೊದಲಾದ ಕಡೆ ಮನಬಂದಂತೆ ಬಂದೂಕು ಮತ್ತು ಬಾಂಬಿನ ಮೂಲಕ ದಾಳಿ ನಡೆಸಿದರು. ಒಟ್ಟು ನಾಲ್ಕು ದಿನಗಳ ಕಾಲ ದಾಳಿ ನಡೆಸಿದ್ದರು.
ಈ ದುರ್ಘಟನೆಯಲ್ಲಿ ಆರು ಮಂದಿ ಅಮೆರಿಕಾದ ನಾಗರಿಕರು, ಹಲವು ವಿದೇಶೀಯರೂ ಸೇರಿದಂತೆ 166 ಜನರು ಸಾವಿಗೀಡಾಗಿದ್ದರು. 300ಕ್ಕೂ ಅಧಿಕ ಜನರು ಗಾಯಾಳುಗಳಾಗಿದ್ದರು. ಭಾರತದ ಇತಿಹಾಸದಲ್ಲಿ ಕರಾಳ ಅಧ್ಯಾಯ ಆಗಿತ್ತು. ಇಂದಿಗೆ ಆ ಘಟನೆ ನಡೆದು 16 ವರ್ಷಗಳು ಕಳೆದಿವೆ. ಗಾಯ ಮಾಸಿದರೂ, ಗಾಯದ ಗುರುತುಗಳು ಹಾಗೇ ಇವೆ. ಇಂದಿಗೂ ಉಗ್ರರು ತಮ್ಮ ಕ್ರೌರ್ಯ ಮೆರೆಯುತ್ತಿದ್ದಾರೆ.

ದಾಳಿ ವಿಚಾರ ತಿಳಿಯುತ್ತಲೇ ಜನರ ರಕ್ಷಣೆಗೆ ಆಗಮಿಸಿದ ಪೋಲಿಸ್‌ ಅಧಿಕಾರಿಗಳಾದ ಹೇಮಂತ್‌ ಕರ್ಕರೆ, ವಿಜಯ್‌ ಸಾಲಸ್ಕರ್‌, ಅಶೋಕ್‌ ಕಾಮ್ಟೆಮತ್ತು ತುಕಾರಾಮ್‌ ಓಂಬ್ಳೆ ಮತ್ತು ಯೋಧ ಸಂದೀಪ್‌ ಉನ್ನಿಕೃಷ್ಣನ್‌ ಉಗ್ರರಿಂದ ಹತರಾದರು. ಈ ಉಗ್ರಗಾಮಿ ಕೃತ್ಯವನ್ನು ಇಡೀ ವಿಶ್ವವೇ ಖಂಡಿಸಿತ್ತು.ಉಗ್ರರು ಹಾರಿಸಿದ ಗುಂಡುಗಳು ಎದೆಯನ್ನು ಸೀಳಿದರೂ ಅಪ್ರತಿಮ ಶೌರ್ಯತೋರಿದ ತುಕಾರಾಮ್‌ ಕೊನೆಯುಸಿರೆಳೆಯುವ ಹಂತದಲ್ಲಿದ್ದರೂ ಕಸಬ್‌ನ ಮೇಲೆ ಗುಂಡು ಹಾರಿಸಿ, ಆತನನ್ನು ಸೆರೆಹಿಡಿಯುವಂತೆ ಮಾಡಿದರು.ಈ ಕಾರಣಕ್ಕಾಗಿ ಭಾರತ ಸರ್ಕಾರವು 2009ರಲ್ಲಿ ಓಂಬ್ಳೆಗೆ ಅಶೋಕ ಚಕ್ರ ಗೌರವ ನೀಡಿತು. ತಾಜ್‌ ಹೋಟೆಲ್‌, ರೈಲು ನಿಲ್ದಾಣಗಳು ಮತ್ತು ಪ್ರವಾಸಿ ತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿ 58 ಜನರನ್ನು ಬಲಿ ಪಡೆದಿದ್ದ ಅಜ್ಮಲ್‌ ಕಸಬ್‌ನನ್ನು 2012 ನವೆಂಬರ್‌ 21ರಂದು ಪುಣೆಯ ಯೆರವಾಡ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.

RELATED ARTICLES

Related Articles

TRENDING ARTICLES