ಪಂಜಾಬ್: ಮದುವೆ ಸಂಭ್ರಮವೊಂದು ದುರಂತದಲ್ಲಿ ಅಂತ್ಯವಾದ ಘಟನೆ ಪಂಜಾಬಿನಲ್ಲಿ ನಡೆದಿದ್ದು, ಸಂಭ್ರಮಾಚರಣೆ ವೇಳೆ ಸಂಬಂಧಿಕರು ಸಿಡಿಸಿದ ಬಂದೂಕಿನ ಗುಂಡು ನೇರವಾಗಿ ವಧುವಿನ ಹಣಗೆ ಹೊಕ್ಕಿದೆ. ಪಂಜಾಬ್ ನ ಫಿರೋಜ್‌ಪುರದ ಖೈ ಫೆಮೆ ಕಿ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ಅರಮನೆಯಲ್ಲಿ ಮದುವೆ ಸಂಭ್ರಮಾಚರಣೆ ವೇಳೆ ವಧು ತಲೆಗೆ ಗುಂಡು ತಗುಲಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಮದುವೆ ಸಮಾರಂಭದಲ್ಲಿ ಸಂಬಂಧಿಕರು ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾಗ ಈ ಘಟನೆ ನಡೆದಿದೆ ಹಶಮ್ ಟೂಟ್ ಗ್ರಾಮದ ಬಾಜ್ ಸಿಂಗ್ ಅವರ ಪುತ್ರಿ ಬಲ್ಜಿಂದರ್ ಕೌರ್ (23 ವರ್ಷ) ಮತ್ತು ತರ್ನ್ ತರಣ್ ಜಿಲ್ಲೆಯ ಸರ್ಹಾಲಿ ಕಲನ್‌ನ ಗುರುಪ್ರೀತ್ ಸಿಂಗ್ ಅವರ ಮದುವೆ ಖೈ ಫೆಮೆ ಕಿ ಗ್ರಾಮದ ಬಳಿಯ ಅರಮನೆಯಲ್ಲಿ ನೆರವೇರುತ್ತಿತ್ತು.ಈ ವೇಳೆ ಸಂಬಂಧಿಕರು ಗುಂಡು ಹಾರಿಸಿದ್ದು, ಈ ವೇಳೆ ಗುಂಡು ನೇರವಾಗಿ ವಧುವಿನ ತಲೆಗೆ ಹೊಕ್ಕಿದೆ.
ಈ ವೇಳೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ವಧುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ. ಅಂತೆಯೇ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಸುಖ್ವಿಂದರ್ ಸಿಂಗ್ ಹೇಳಿದ್ದಾರೆ.