Wednesday, January 22, 2025

Power tv 6th Anniversary : ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಕರುನಾಡ ಕಣ್ಮಣಿ ಪ್ರಶಸ್ತಿ

ಧರಣಿಯೊಳಗೆ ಧರ್ಮವೇ ದೊಡ್ಡದು.. ಆ ಧರ್ಮದ ಮೂಲವೇ ದಯೆ, ಕರುಣೆ, ನ್ಯಾಯ, ಸತ್ಯ, ದಾನ. ಅದಕ್ಕಾಗೇ ದಯವೇ ಧರ್ಮದ ಮೂಲವಯ್ಯ ಎಂದು ಸಾರಿ ಸಾರಿ ಹೇಳಿದ ನಾಡು ಕರುನಾಡು. ಕಾಲಕಾಲಕ್ಕೆ ಸತ್ಪುರಷರು ಜನ್ಮ ತಾಳಿದ ಈ ನಾಡಿನಲ್ಲಿ ಧರ್ಮದ ಎಲ್ಲಾ ಅನ್ವರ್ಥಗಳಿಗೆ ಸಾಕ್ಷಿಯಾದ ಪರಮ ಪುಣ್ಯ ಕ್ಷೇತ್ರವೇ ಧರ್ಮಸ್ಥಳ.

ಈ ಪವಿತ್ರ ಕ್ಷೇತ್ರದಲ್ಲಿ ನೆಲೆನಿಂತು ಹಸಿದು ಬಂದವರಿಗೆ ಅನ್ನದಾನ, ಬೇಡಿ ಬಂದವರಿಗೆ ನ್ಯಾಯದಾನ, ಬಯಸಿ ಬಂದವರಿಗೆ ವಿದ್ಯಾ ದಾನ, ಅಗತ್ಯ ಇರುವವರಿಗೆ ಆರೋಗ್ಯ ದಾನ…ಹೀಗೆ ಬಂದವರಲ್ಲಿ ಬಡವ ಬಲ್ಲಿದರೆನ್ನದೇ ಸಮಾನತೆಯ ಮೂಲಕ, ನೊಂದವರು ಮಾತ್ರವಲ್ಲದೇ ಪ್ರಶ್ನೆ ಮಾಡುವವರಿಗೂ ದಯೆ ತೋರಿ ಸರ್ವಜನರಿಗೂ ಸತ್ಯ ದರ್ಶನ ಮಾಡಿಸಿದ್ದಾರೆ. ಅವರೇ ಧರ್ಮಸ್ಥಳದಲ್ಲಿ ದಾರಿ ದೀಪ ಆಗಿರುವ ಕರುಣಾಮಯಿ. ಕೋಟಿ ಕೋಟಿ ಜನರ ಪಾಲಿಗೆ ಸ್ಫೂರ್ತಿದಾಯಕರಾಗಿರುವ ಅವರೇ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು.

ರಾಜ್ಯದ ಜನತೆಗೆ ಮಾತ್ರವಲ್ಲ, ದೇಶ ವಿದೇಶಗಳ ಕೋಟಿ ಕೋಟಿ ಜನರಿಗೆ ತಮ್ಮ ಸೇವಾ ಕಾರ್ಯಗಳ ಮೂಲಕವೇ ಶ್ರೀವೀರೇಂದ್ರ ಹೆಗ್ಗಡೆಯವರು ಚಿರಪರಿಚಿತರು. ರತ್ನವರ್ಮ ಹೆಗ್ಗಡೆ ಮತ್ತು ರತ್ನಮ್ಮ ದಂಪತಿಯ ಹಿರಿಯ ಸುಪುತ್ರರಾಗಿ 1948ರ ನವೆಂಬರ್ 25ರಂದು ಇವರು ಜನಿಸಿದರು. ಕುಟುಂಬದ ಘನತೆಗೆ ತಕ್ಕಂತೆ ಬಾಲ್ಯದಿಂದಲೇ ಉತ್ತಮ ಶಿಕ್ಷಣದ ಜೊತೆಗೆ ಅತ್ಯುನ್ನತ ಸಂಸ್ಕಾರವನ್ನೂ ಬೆಳೆಸಿಕೊಂಡವರು. ತಮ್ಮ 19ನೇ ವಯಸ್ಸಿನಲ್ಲಿ, ಅಂದರೆ 1968ರ ಅಕ್ಟೋಬರ್ 24ರಂದು ಧರ್ಮಾಧಿಕಾರಿಯಾಗಿ ಪಟ್ಟಾಭಿಷಿಕ್ತರಾದರು. ಅಂದಿನಿಂದ ಈವರೆಗೆ 56 ವರ್ಷಗಳಿಂದ ಕ್ಷೇತ್ರದ ಪರಂಪರೆ ಜಗದಗಲ ವಿಸ್ತರಿಸಿದ್ದು ಮಾತ್ರವಲ್ಲದೇ, ನಾಡಿನ ಜನರಲ್ಲೂ ಗೌರವ ಮತ್ತು ಹೆಮ್ಮೆ ಮೂಡುವಂತೆ ಧರ್ಮ ಪಥ ತೋರಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವ ಇವರು ಪ್ರಾಥಮಿಕ, ಪ್ರೌಢ, ಕಾಲೇಜು ಸೇರಿ ಉನ್ನತ ಶಿಕ್ಷಣದವರೆಗೆ ಸಂಸ್ಥೆಗಳನ್ನ ಕಟ್ಟಿ ಬೆಳೆಸಿದ್ದಾರೆ. ಬೆಂಗಳೂರು, ಮಂಗಳೂರು, ಧಾರವಾಡ, ಹುಬ್ಬಳ್ಳಿ, ಬೆಳಗಾವಿ, ಮೈಸೂರು ಸೇರಿದಂತೆ ನಾಡಿನ ಮೂಲೆ ಮೂಲೆಯಲ್ಲೂ ಶಿಕ್ಷಣ ಕೇಂದ್ರಗಳು ವಿದ್ಯಾದಾನ ಮಾಡುತ್ತಿವೆ. ಆಯುರ್ವೇದ, ಯೋಗ, ಪ್ರಕೃತಿ ಚಿಕಿತ್ಸೆಯಿಂದ ಹಿಡಿದು ಗುರುಕುಲ ಪದ್ಧತಿಯ ಮೂಲಕವೂ ವಿದ್ಯಾದಾನ ನಡೆಯುತ್ತಿದೆ. ಕರಾವಳಿಯ ಯಕ್ಷಗಾನಕ್ಕೆ ಪ್ರೋತ್ಸಾಹ, ಪುರಾತನ ತಾಳೆಗರಿಗಳ ಸಂಸ್ಕರಣೆ, ವಿಂಟೇಜ್​ ಕಾರ್​ಗಳ ಕಲೆಕ್ಷನ್​, ಫೋಟೋಗ್ರಫಿ..ಇವೆಲ್ಲವೂ ವಿವಿಧ ಕ್ಷೇತ್ರಗಳಲ್ಲಿನ ಇವರ ಆಸಕ್ತಿಗೆ ಕನ್ನಡಿಯಾಗಿವೆ.

ಧರ್ಮಸ್ಥಳದಲ್ಲಿ ನಿತ್ಯ ಸಹಸ್ರಾರು ಜನರಿಗೆ ಅನ್ನದಾನ ಮಾಡಲಾಗುತ್ತಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ 13 ಲಕ್ಷಕ್ಕೂ ಹೆಚ್ಚು ಜನರಿಗೆ ಕಾಯಕ ನೀಡಲಾಗಿದೆ. 1972ರಿಂದ ಸಾಮೂಹಿಕ ವಿವಾಹ ಆರಂಭಿಸಿ 25 ಸಾವಿರಕ್ಕೂ ಹೆಚ್ಚು ಜೋಡಿಗಳಿಗೆ ಮದುವೆಯ ಭಾಗ್ಯ ಕರುಣಿಸಲಾಗಿದೆ. ಕಳೆದ 92 ವರ್ಷಗಳಿಂದ ದೀಪೋತ್ಸವ ಹಬ್ಬದಲ್ಲಿ ಸರ್ವ ಧರ್ಮ ಸಮ್ಮೇಳನ ನಡೆಸಲಾಗುತ್ತದೆ. ಮದ್ಯ ವ್ಯಸನಿಗಳ ಮುಕ್ತಿಗೆ ರಾಜ್ಯದ ಹಳ್ಳಿ ಹಳ್ಳಿಗಳಲ್ಲೂ ಕಾರ್ಯಾಗಾರ ನಡೆಯುತ್ತದೆ. ಹೀಗೆ ಧರ್ಮಸ್ಥಳ ಕ್ಷೇತ್ರದ ಮೂಲಕ ಇವರು ಕೈಗೊಳ್ಳುವ ನಿರಂತರ ಕಾರ್ಯ ಚಟುವಟಿಕೆ, ಇವರ ಕ್ರಿಯಾಶೀಲತೆಗಳನ್ನ ವಿವರಿಸುತ್ತ ಸಾಗಿದರೆ ಬರಿದಾಗದ ಅಕ್ಷಯ ಪಾತ್ರೆಯಂತಿದೆ ಇವರ ಜೀವನ ಚರಿತ್ರೆ.

ಯಾವುದೇ ಸ್ವಾರ್ಥವಿಲ್ಲದ ಇವರ ಸೇವಾ ಮನೋಭಾವ ಗುರುತಿಸಿ, ಹತ್ತು ಹಲವು ಪ್ರಶಸ್ತಿಗಳು ಇವರನ್ನ ಅರಸಿ ಬಂದಿವೆ. ಕರ್ನಾಟಕ ರತ್ನ, ಪದ್ಮವಿಭೂಷಣ, ಪದ್ಮಭೂಷಣದಂತಹ ಅತ್ಯುನ್ನತ ನಾಗರಿಕ ಪುರಸ್ಕಾರಗಳು ಶ್ರೀಯುತರಿಗೆ ಸಂದಿವೆ. ಹೀಗೆ ಯಾವುದೇ ಪ್ರಶಸ್ತಿ, ಪುರಸ್ಕಾರಗಳನ್ನೂ ಮೀರಿದ ವ್ಯಕ್ತಿತ್ವ ಇವರದ್ದು. ಆದರೆ ಶ್ರೀಯುತ ಡಿ.ವೀರೇಂದ್ರ ಹೆಗ್ಗಡೆಯವರಿಗೆ ಕರುನಾಡ ಕಣ್ಮಣಿ ಗೌರವ ಪ್ರಶಸ್ತಿ ನೀಡುವ ಮೂಲಕ ಪವರ್​ ಟಿವಿ ಅವರ ಸೇವೆಯನ್ಮು ಸ್ಮರಿಸಲು ಬಯಸುತ್ತದೆ.

RELATED ARTICLES

Related Articles

TRENDING ARTICLES