Wednesday, January 22, 2025

Power tv 6th anniversary : ಭಗವಾನ್ ಶ್ರೀ ಮಧುಸೂದನ ಸಾಯಿ ಅವರಿಗೆ ಕರುನಾಡ ಕಣ್ಮಣಿ ಪ್ರಶಸ್ತಿ

ಪರೋಪಕಾರಾರ್ಥಾಂ ಇದಂ ಶರೀರಂ’…ವೇದಗಳಲ್ಲಿ ಉಲ್ಲೇಖಿಸಿದ ಈ ಮಾತು ಸರ್ವಕಾಲಕ್ಕೂ ಜನಜನಿತ. ಅಂತೆಯೇ ಕಾಲ ಕಾಲಕ್ಕೆ ಅನೇಕ ಶ್ರೇಷ್ಟ ಸಂತರು, ಜ್ಞಾನಿಗಳು ತಮ್ಮ ಜೀವನವನ್ನು ಸಮಾಜಕ್ಕಾಗಿ ಮುಡಿಪಾಗಿಟ್ಟಿದ್ದಾರೆ. ಅಂಥವರ ಪೈಕಿ ಆಧುನಿಕ ಕಾಲದಲ್ಲೂ ಜನ ಸೇವೆಯೇ ಜನಾರ್ದನನ ಸೇವೆ ಎಂದರಿತು ಸಮಾಜದ ಉದ್ಧಾರಕ್ಕಾಗೇ ಜೀವನ ಮುಡಿಪಾಗಿಟ್ಟಿದ್ದಾರೆ ಭಗವಾನ್ ಶ್ರೀ ಮಧುಸೂದನ ಸಾಯಿ.

ಚಿಕ್ಕಬಳ್ಳಾಪುರದ ವಿಶ್ವವಿಖ್ಯಾತ ನಂದಿಗಿರಿಧಾಮದ ಮಡಿಲಲ್ಲಿರುವ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯನವರ ತವರು ಮುದ್ದೇನಹಳ್ಳಿ. ಇಲ್ಲಿನ ಸತ್ಯಸಾಯಿ ಗ್ರಾಮ ವಿಶ್ವದ ಕೇಂದ್ರ ಬಿಂದುವಾಗಿದೆ. ದುಡ್ಡು, ಬ್ಲಡ್ಡು  ಒಂದೆಡೆ ನಿಲ್ಲಬಾರದೆಂಬ ಧ್ಯೇಯ ಹೊಂದಿರುವ ಮಹಾನ್​ ಮಾನವತಾವಾದಿ ಮಧುಸೂದನ್​ ಸಾಯಿ ಅವರು ಶಿಕ್ಷಣ, ಆರೋಗ್ಯ ಮತ್ತು ಆಹಾರವನ್ನು ಉಚಿತವಾಗಿ ನೀಡುತ್ತಿದ್ದಾರೆ.

ಪುಟ್ಟಪರ್ತಿಯ ಭಗವಾನ್ ಸತ್ಯ ಸಾಯಿಬಾಬಾ ಅವರು ಸೇವೆಯಿಂದ ಬಾಳಿಗೆ ಅರ್ಥವನ್ನು ಕಂಡುಕೊಳ್ಳಿರಿ ಎಂದು ಸಾರಿ ಸಾರಿ ಹೇಳಿದ್ದರು. ಅದರಂತೆಯೇ ಜನಸೇವೆಯ ಮೂಲಕ ಮಾದರಿಯಾಗಿದ್ದರು. ಅವರದೇ ಹೆಜ್ಜೆ ಗುರುತಿನಲ್ಲಿ ಸಾಗಿದ್ದಾರೆ ಅವರ ಸಮರ್ಥ ಉತ್ತರಾಧಿಕಾರಿ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು. ಇವರ ಸೇವೆ ಇಡೀ ಜಗತ್ತೇ ಮೆಚ್ಚುವಂಥದ್ದು.

ಇಲ್ಲಿನ ಪ್ರಶಾಂತ ವಾತಾವರಣದಲ್ಲಿ ಅವರು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ವಿದ್ಯಾರ್ಥಿಗಳಿಗೆ ಶಿಕ್ಷಣ, ಊಟ, ವಸತಿ, ವಸ್ತ್ರಸಂಸ್ಕಾರ ಹೀಗೆ ಎಲ್ಲವನ್ನು ಉಚಿತವಾಗಿ ಕೊಡಲಾಗುತ್ತಿದೆ. ಶಿಕ್ಷಣವು ವ್ಯಾಪಾರೀಕರಣಗೊಂಡ ಕಾಲಘಟ್ಟದಲ್ಲಿ ಕೆಜಿ ಕ್ಲಾಸ್​ಗಳಿಂದ ಆರಂಭಗೊಂಡು ಉನ್ನತ ಶಿಕ್ಷಣಗಳವರೆಗೆ ಬಿಡಿಗಾಸು ಪಡೆಯದೇ ಇಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಹೀಗೆ ಸಾವಿರಾರು ಮಕ್ಕಳು ಇಲ್ಲಿ ಉಚಿತವಾಗಿ ಶಿಕ್ಷಣದ ಜೊತೆಗೆ ಅಗತ್ಯವಾಗಿರುವ ಸಂಸ್ಕಾರವನ್ನೂ ಕಲಿಯುತ್ತಿದ್ದಾರೆ. ಇಲ್ಲಿನ ಶ್ರೀ ಸತ್ಯಸಾಯಿ ಸರಳಾ ಸ್ಮಾರಕ ಆಸ್ಪತ್ರೆಯಲ್ಲಿ ಹಣಕಾಸಿನ ವ್ಯವಹಾರ ನಡೆಸುವ ನಗದು ಕೌಂಟರ್​ಗಳೇ ಇಲ್ಲ. ಆಧುನಿಕ ಪವಾಡ ಎಂಬಂತೆ ಇಲ್ಲಿ ಸರ್ವ ಚಿಕಿತ್ಸೆ ಉಚಿತವಾಗಿ ನೀಡಲಾಗುತ್ತಿದೆ.

ಇನ್ನು ಇಲ್ಲಿನ ಸರ್ಕಾರಿ ಶಾಲೆಗಳಲ್ಲಿ ಹಾಲಿನ ಜೊತೆಗೆ ‘ಸಾಯಿಶ್ಯೂರ್’ ಎಂಬ ಪೌಷ್ಠಿಕ ದ್ರಾವಕವನ್ನು ನೀಡಿ ವಿತರಿಸಲಾಗುತ್ತಿದೆ. ಸಾಯಿ ಟ್ರಸ್ಟ್ ಮೂಲಕ ಮಕ್ಕಳ ದೈಹಿಕ ಪೋಷಣೆಗೆ ಅದು ಸಹಕಾರ ನೀಡುತ್ತಿದೆ. ಹೀಗೆ ‘ಲೋಕಕಲ್ಯಾಣಕ್ಕೆ ಆತ್ಮ ಕಲ್ಯಾಣದ’ ಧ್ಯೇಯ ಹೊಂದುವ ಮೂಲಕ ಸಾರ್ಥಕ ಕಾರ್ಯವನ್ನೇ ಮಾಡಲಾಗುತ್ತಿದೆ. ಶ್ರೀ ಮಧುಸೂದನ್​ ಸಾಯಿ ಅವರ ಮಾನವೀಯ ಕಳಕಳಿ, ಸಾಮಾಜಿಕ ಬದ್ಧತೆ ಅರ್ಥಪೂರ್ಣವಾಗಿದೆ. ಶ್ರೀ ಮಧುಸೂದನ್ ಸಾಯಿ ಅವರ ಅಮೋಘ ಸೇವೆಯನ್ನ ಪರಿಗಣಿಸಿ ಅವರಿಗೆ ಕರುನಾಡ ಕಣ್ಮಣಿ ಪ್ರಶಸ್ತಿ ಪ್ರದಾನ ಮಾಡುವ ಮೂಲಕ, ನಾಡಿಗೆ ಅವರು ನೀಡುತ್ತಿರುವ ಸೇವೆಯನ್ನು ಪವರ್​ ಟಿವಿ ಗೌರವಿಸುತ್ತದೆ.

RELATED ARTICLES

Related Articles

TRENDING ARTICLES