Thursday, December 5, 2024

Power tv 6th anniversary : ಶ್ರೀಮತಿ ತೇಜಸ್ವಿನಿ ಅನಂತಕುಮಾರ್​ರವರಿಗೆ ಕರುನಾಡ ಕಣ್ಮಣಿ ಪ್ರಶಸ್ತಿ

‘ಅನ್ನ ದೇವರ ಮುಂದೆ ಇನ್ನು ದೇವರು ಉಂಟೆ.. ಜಗಕೆಲ್ಲ ಅನ್ನವೇ ಪ್ರಾಣ ಸರ್ವಜ್ಞ’.. ಮಹಾಜ್ಞಾನಿಯ ಈ ಮಾತಿನ ಮರ್ಮ ಬಲ್ಲವರು ಯಾರಿಲ್ಲ ಹೇಳಿ.. ಅಂತೆಯೇ ಶಾಲೆಗೆ ಬರುವ ಯಾವುದೇ ಮಗು ಹಸಿವಿನಿಂದ ಇರಬಾರದು ಅಂತಾ ರಾಜ್ಯ ಸರ್ಕಾರ ಬಿಸಿಯೂಟ ಯೋಜನೆ ಆರಂಭಿಸಿತ್ತು. ಈ ಯೋಜನೆಯ ಮೂಲಕ ಪ್ರತಿನಿತ್ಯ 2 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಗುಣಮಟ್ಟದ ಊಟ ಪೂರೈಸುತ್ತಿರುವ ಸಂಸ್ಥೆಯೇ ಅದಮ್ಯ ಚೇತನ..

ಇದು ಮಾಜಿ ಕೇಂದ್ರ ಸಚಿವ, ಬಿಜೆಪಿಯ ಹಿರಿಯ ನಾಯಕರಾಗಿದ್ದ ಅನಂತ ಕುಮಾರ್​ ಅವರ ಕನಸಿನ ಕೂಸು.. ಅನ್ನದಾನಕ್ಕಿಂತ ಶ್ರೇಷ್ಠ ದಾನ ಮತ್ತೊಂದಿಲ್ಲ ಎಂಬುದನ್ನ ಅರಿತು ಬಿಸಿಯೂಟ ಯೋಜನೆಗೆ ಸಂಸ್ಥೆಯ ಮೂಲಕ ಕೈಜೋಡಿಸಿದ್ರು.  ಅವರು ರಾಜಕೀಯದ ಮೂಲಕ ಜನಸೇವೆ ಮಾಡ್ತಿದ್ರೆ, ಸಂಸ್ಥೆಯ ಮಹತ್ತರ ಜವಾಬ್ದಾರಿ ಹೊತ್ತು ಮುನ್ನಡೆಸಿದವರೇ ಅವರ ಧರ್ಮಪತ್ನಿ ಶ್ರೀಮತಿ ತೇಜಸ್ವಿನಿ ಅನಂತಕುಮಾರ್​.

1998ರಲ್ಲಿ ಬಡ ಮಹಿಳೆಯರಿಗೆ ಹೊಲಿಗೆ ತರಬೇತಿ ಮೂಲಕ ಅದಮ್ಯ ಚೇತನ ಸಂಸ್ಥೆ ಆರಂಭಗೊಂಡಿತ್ತು. ಇಂದು ಹತ್ತಾರು ಸಮಾಜ ಸೇವಾ ಕ್ಷೇತ್ರಗಳಲ್ಲಿ ಜನಜನಿತವಾಗಿದೆ. ೨೦೦೩ರಲ್ಲಿ ಅನ್ನಪೂರ್ಣ ಯೋಜನೆಯಡಿ ಬೆಂಗಳೂರಲ್ಲಿ ಬಿಸಿಯೂಟ ವಿತರಣೆ ಆರಂಭವಾಗಿತ್ತು. ಬಳಿಕ ಹುಬ್ಬಳ್ಳಿ, ಕಲಬುರಗಿ ಮತ್ತು ಇತ್ತೀಚಿನ ವರ್ಷಗಳಲ್ಲಿ ರಾಜಸ್ಥಾನದ ಜೋಧಪುರದಲ್ಲೂ ಬಿಸಿಯೂಟದ ವಿತರಣೆ ಆರಂಭಿಸಲಾಗಿದೆ. ಜೊತೆಗೆ ಪ್ರಸಕ್ತ ವರ್ಷ ಶಾಲಾ ಮಕ್ಕಳಿಗೆ ಬಿಸಿಬಿಸಿ ಹಾಲು ಸಹ ವಿತರಣೆ ಮಾಡಲಾಗುತ್ತಿದೆ.

ಪರಿಸರ ಸಂರಕ್ಷಣೆಯ ಬಗ್ಗೆಯೂ ಅದಮ್ಯ ಚೇತನ ಅಪಾರ ಕಾಳಜಿ ಹೊಂದಿದೆ. ಲಕ್ಷಾಂತರ ಮಕ್ಕಳಿಗೆ ನಿತ್ಯ ಅಡುಗೆ ತಯಾರಿಸಲು ಸಂಪೂರ್ಣ ನವೀಕರಿಸಬಹುದಾದ ಇಂಧನ ಬಳಸಲಾಗುತ್ತಿದೆ. ಕಸದಲ್ಲಿ ರಸ ಎಂಬಂತೆ ಕಸವನ್ನೇ ಸಂಗ್ರಹಿಸಿ ಇಂಧನವಾಗಿ ಪರಿವರ್ತನೆ ಮಾಡಲಾಗುತ್ತಿದೆ. ಆ ಮೂಲಕ 2008ರಿಂದಲೇ ನಿತ್ಯ 60ಕ್ಕೂ ಹೆಚ್ಚು ಸಿಲಿಂಡರ್​ ಬಳಕೆಗೆ ಕಡಿವಾಣ ಹಾಕಿರುವುದು ವಿಶೇಷ. ಅಲ್ಲದೇ ಪರಿಸರ ಸಂರಕ್ಷಣೆಗೆ ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್​ ಕಪ್​, ಪ್ಲೇಟ್​ ಬಳಕೆ ತಡೆಯಲು ಅದಮ್ಯ ಚೇತನ ಪ್ರಯತ್ನಿಸುತ್ತಿದೆ. ಅದಕ್ಕಾಗಿ 10 ಸಾವಿರ ಸ್ಟೀಲ್​ ತಟ್ಟೆ, ಸ್ಪೂನ್​ ಮತ್ತು ಟೀ ಕಪ್​ಗಳನ್ನು ಸಂಗ್ರಹಿಸಿಡಲಾಗಿದೆ. ಬೆಂಗಳೂರಿನಲ್ಲಿ ಯಾವುದೇ ಕಾರ್ಯಕ್ರಮಕ್ಕೆ ಅವುಗಳನ್ನು ಉಚಿತವಾಗಿ ಕೊಡಲಾಗುತ್ತಿದೆ. ಅಲ್ಲದೇ ಹೆಚ್ಚು ಹೆಚ್ಚು ಗಿಡ ಮರ ಬೆಳೆಸಲು ಹತ್ತಾರು ಕಾರ್ಯಕ್ರಮಗಳನ್ನು ಪ್ರತಿ ವರ್ಷ ಮಾಡಲಾಗುತ್ತಿದೆ.

ಕೊರೋನಾ ಸಂಕಷ್ಟದ ದಿನಗಳಲ್ಲಿ ಅದಮ್ಯ ಚೇತನ ಸಂಸ್ಥೆ ಬೆಂಗಳೂರಲ್ಲಿ ಅನೇಕರ ಬದುಕಿಗೆ ಚೇತನ ತುಂಬಿದ್ದು ಸುಳ್ಳಲ್ಲ. ಪ್ರತಿನಿತ್ಯ ೨೦,೦೦೦ಕ್ಕೂ ಹೆಚ್ಚು ಆಹಾರ ಪೊಟ್ಟಣಗಳನ್ನ ಜನತೆಗೆ ಹಂಚಿ, ಹಸಿವು ನೀಗಿಸಲಾಗಿತ್ತು. ಇನ್ನು ಬಡ ಮಕ್ಕಳಿಗೆ ಪ್ರತಿ ವರ್ಷ ವಿದ್ಯಾರ್ಥಿ ವೇತನ, ಕಲಿಕಾ ಸಾಮಗ್ರಿ ವಿತರಣೆ, ಆರೋಗ್ಯ ಶಿಬಿರ, ಸಹ ಆಯೋಜಿಸಲಾಗುತ್ತಿದೆ. ಹೀಗೆ ಅನ್ನ, ಅಕ್ಷರ, ಆರೋಗ್ಯ, ಮತ್ತು ಪರಿಸರ ಕ್ಷೇತ್ರಗಳಲ್ಲಿ ಅದಮ್ಯ ಚೇತನ ಸಂಸ್ಥೆ ಐಟಿಸಿಟಿಯಲ್ಲಿ ಮಾಡುತ್ತಿರುವ ಕೆಲಸಗಳು ಅತ್ಯಂತ ಪ್ರಶಂಸನೀಯ. ಸಂಸ್ಥೆಯ ಈ ಎಲ್ಲಾ ಕೆಲಸ ಕಾರ್ಯಗಳ ರೂವಾರಿ, ನಿಸ್ವಾರ್ಥ ಸೇವಕಿ ಶ್ರೀಮತಿ ತೇಜಸ್ವಿನಿ ಅನಂತಕುಮಾರ್​ ಅವರಿಗೆ ಕರುನಾಡ ಕಣ್ಮಣಿ ಪ್ರಶಸ್ತಿ ನೀಡಿ ಗೌರವಿಸಲು ಪವರ್​ ಟಿವಿ ಅತ್ಯಂತ ಹರ್ಷ ಪಡುತ್ತದೆ.

RELATED ARTICLES

Related Articles

TRENDING ARTICLES