Friday, November 15, 2024

Bigg Bossಗೆ Bigg Shock : ದೊಡ್ಮನೆಗೆ ರಾಜ್ಯ ಮಹಿಳಾ ಆಯೋಗ ಎಂಟ್ರಿ?

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್ ಶುರುವಾಗಿ ಒಂದು ವಾರ ಕಳೆದಿದೆ. ಮನೆಯನ್ನು ಸ್ವರ್ಗ ಮತ್ತು ನರಕ ಎಂದು ವಿಭಾಗಿಸಿ ಸ್ಪರ್ಧಿಗಳನ್ನು ಆಟವಾಡಿಸಲಾಗುತ್ತಿದೆ. ಇದೀಗ ಬಿಗ್​ಬಾಸ್​ ಸ್ವರ್ಗ ಮತ್ತು ನರಕದ ಆಟದ ಶೈಲಿಗೆ ಅಪಸ್ವರ ಎದ್ದಿದೆ.

ಆರೋಪ ಏನು?

ನರಕವಾಸಿಗಳಲ್ಲಿರುವ ಹೆಣ್ಮಕ್ಕಳ ಸಾಂವಿಧಾನಿಕ ಹಕ್ಕು ದಮನ ಆಗ್ತಿದೆ. ಅವರ ಖಾಸಗಿತನಕ್ಕೆ ಧಕ್ಕೆ ಆಗುತ್ತಿದೆ ಎಂದು ವಕೀಲೆ ರಕ್ಷಿತಾ ಸಿಂಗ್ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಗ್​ಬಾಸ್ ಮನೆಗೆ ಮಹಿಳಾ ಆಯೋಗ ಎಂಟ್ರಿ ನೀಡಲಿದೆ. ಪೊಲೀಸರ ಸಮೇತ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಬಿಗ್​ಬಾಸ್​ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಅಲ್ಲಿ ಹೆಣ್ಮಕ್ಕಳ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ಮಾಡಲಿದ್ದಾರೆ. ಶೋನಲ್ಲಿ ಮಹಿಳೆಯರ ಖಾಸಗಿತನಕ್ಕೆ ಧಕ್ಕೆ ಆಗಿರೋದು ಕಂಡು ಬಂದಲ್ಲಿ ಆಟದ ಶೈಲಿ ಬದಲಾಗುವ ಸಾಧ್ಯತೆ ಇದೆ.

ದೂರಿನಲ್ಲಿ ಏನಿದೆ?

ಬಿಗ್​ಬಾಸ್ 11 ಕಾರ್ಯಕ್ರಮದಲ್ಲಿ ಮಹಿಳೆಯರು ಮತ್ತು ಪುರುಷ ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಸ್ವರ್ಗ ಮತ್ತು ನರಕವೆಂಬ ಎರಡು ವಿಚಾರದ ಮೇಲೆ ಸ್ಪರ್ಧಿಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಪ್ರಸಾರವಾಗುತ್ತಿರುವ ದೃಶ್ಯಗಳಲ್ಲಿ ಪುರುಷ ಮತ್ತು ಮಹಿಳೆಯರನ್ನು ಒಂದು ಜೈಲಿನ ರೂಪದಲ್ಲಿರುವ ಬಂದಿಖಾನೆಯಂತಹ ಕೊಠಡಿಯಲ್ಲಿ ಇಡಲಾಗಿದೆ. ಆ ಕೊಠಡಿಗೆ ನೂರಾರು ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ವಾಹಿನಿಯಲ್ಲಿ ಪ್ರಸಾರವಾಗಿರುವ ಮಾಹಿತಿ ಪ್ರಕಾರ. ನರಕದಲ್ಲಿರೋರಿಗೆ ಕೇವಲ ಗಂಜಿಯನ್ನು ಮಾತ್ರ ನೀಡಲಾಗುತ್ತಿದೆ. ಸಂವಿಧಾನ ಪ್ರಕಾರ ನಾಗರಿಕರಿಗೆ ಪೌಷ್ಟಿಕ ಆಹಾರವನ್ನು ಕೊಡದಿರುವುದು ಅಪರಾಧವಾಗುತ್ತದೆ. ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಮಲಗುವ ವ್ಯವಸ್ಥೆ ನೀಡಿಲ್ಲ. ಶೌಚಾಲಯ ಉಪಯೋಗಿಸಲು ಬಲವಂತಕ್ಕೆ ಒಳಪಡಿಸುವುದು ಮಹಿಳೆಯರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ. ಬಿಗ್ ಬಾಸ್ 11ರ ಕಾರ್ಯಕ್ರಮದಲ್ಲಿ ಸ್ಪರ್ಧಿಗಳೊಂದಿಗೆ ಕಾನೂನು ಬದ್ಧವಾಗಿ ಒಪ್ಪಂದ ಮಾಡಿಕೊಂಡಿದ್ದು, ಇಂತಹ ನಿರ್ಬಂಧಗಳನ್ನು ಹೇರುವುದು ಸಂವಿಧಾನದ ವಿರುದ್ಧ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

RELATED ARTICLES

Related Articles

TRENDING ARTICLES