ಮೈಸೂರು : ಎರಡೂವರೆ ತಿಂಗಳ ಹಿಂದೆಯೇ ನಾನು ಸಿಎಂಗೆ ಸೈಟ್ ಹಿಂತಿರುಗಿಸಲು ಹೇಳಿದ್ದೆ. ಸಿಎಂ ಅವರ ಇಷ್ಟು ವರ್ಷದ ರಾಜಕೀಯ ಜೀವನವನ್ನು ಕೇವಲ 14 ಸೈಟ್ಗಳು ನುಂಗಬಾರದು. ಒಡವೆ ಕದ್ದ ಕಳ್ಳ ಒಡವೆ ವಾಪಾಸ್ ನೀಡಿದ್ರೆ ಕೇಸ್ ಮುಗಿಯುತ್ತಾ? ಇಲ್ಲ ಅಲ್ವಾ? ಎಂದು ಮುಡಾ ಹಗರಣದ ಬಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಮಾತಾಡಿದ್ದಾರೆ.
ಸಿಎಂ ಪತ್ನಿ ಪಾರ್ವತಿ ಅವರು 14 ಸೈಟ್ ಹಿಂತಿರಗಿಸುವ ಬಗ್ಗೆ ಮುಡಾ ಆಯುಕ್ತರಿಗೆ ಪತ್ರ ಬರೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿಂದು ಮಾಧ್ಯಮದ ಜೊತೆ ಮಾತಾಡಿದ ಅವರು, ಎರಡೂವರೆ ತಿಂಗಳ ಹಿಂದೆ ವಾಪಸ್ ಕೊಟ್ಟಿದ್ದರೆ ಇವತ್ತು ಪ್ರಾಸಿಕ್ಯೂಷನ್, ಕೇಸ್ ಏನೂ ಆಗುತ್ತಿರಲಿಲ್ಲ. ಕುರ್ಚಿಯೂ ಅಲುಗಾಡುತ್ತಿರಲಿಲ್ಲ. ಹೊಗಳು ಭಟ್ಟರು ಬಹುಪರಾಕ್ ಹಾಕುವವರನ್ನು ಇಟ್ಟು ಕೊಂಡಿರುವ ಪರಿಣಾಮ ಸಿಎಂ ಗೆ ಈ ಸ್ಥಿತಿ ಬಂದಿದೆ. ಅಧಿಕಾರದಲ್ಲಿದ್ದಾಗ ಕುಟುಂಬ ಹತ್ತಿರ ಇಟ್ಟುಕೊಂಡರೆ , ಮಕ್ಕಳನ್ನು ಬೆಳೆಸಲು ಮುಂದಾದರೆ ಅದೇ ಕುಟುಂಬ ನಿಮ್ಮ ಹೆಸರಿಗೆ ಕಳಂಕ ತರುತ್ತಾರೆ ಎಂಬುದಕ್ಕೆ ಇದು ಒಂದು ಉದಾಹರಣೆ ಎಂದಿದ್ದಾರೆ.
ಸಿಎಂ ತಮ್ಮ ಸೈಟ್ಗೆ 62 ಕೋಟಿ ರೂ. ಕೇಳಿದ ದಿನವೇ ಸಿಎಂ ಮೇಲಿನ ಗೌರವ, ವಿಶ್ವಾಸ ನೆಲ ಕಚ್ಚಿತು. ಈಗ ಅವರ ಪತ್ನಿ ಸೈಟ್ ವಾಪಾಸ್ ಕೊಟ್ಟರು ಅಷ್ಟೇ ಕೊಡದಿದ್ದರು ಅಷ್ಟೇ. ತನಿಖೆ ಆಗಲೇಬೇಕು. ವರುಣಾ ಚುನಾವಣೆ ಸಂದರ್ಭದಲ್ಲಿಯೇ ನನಗೆ ಈ ಸೈಟ್ ದಾಖಲಾತಿಯ ಬಗ್ಗೆ ಮಾಹಿತಿ ದೊರಕಿತ್ತು. ಆದರೆ, ಸಿಎಂ ಪತ್ನಿಯ ಹೆಸರಿದ್ದ ಕಾರಣ ವೈಯಕ್ತಿಕ ದಾಳಿ ಬೇಡ ಎಂದು ಸುಮ್ಮನಿದ್ದೆ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಅವರು, ರಾಜಕಾರಣಿಗಳೇ ನಿಮ್ಮ ಹೆಂಡತಿ ಮಕ್ಕಳನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಿ. ಈ ಹಿಂದೆ ಸಿಎಂಗಳಾಗಿ ಜೈಲಿಗೆ ಹೋಗಿರೋದು ಅವರ ಹೆಂಡತಿ ಮಕ್ಕಳ ಕಾರಣಕ್ಕಾಗಿ ಎಂಬುದು ಎಲ್ಲಾ ರಾಜಕಾರಣಿಗಳಿಗೆ ನೆನಪಿರಲಿ ಎಂದರು.
ಈಗ ಸಿಎಂ ಪತ್ನಿಯ ಭಾವನಾತ್ಮಕ ಕಾರ್ಡ್ ವರ್ಕ್ ಆಗುವುದಿಲ್ಲ. ಪಾರ್ವತಮ್ಮನವರಿಗೆ ತಮ್ಮ ಪತಿಯ ತಪ್ಪಸಿನ ರಾಜಕಾರಣಕ್ಕಿಂತ ಸೈಟ್ ಮುಖ್ಯವಾಗಿತ್ತು ಅದಕ್ಕೆ ಇಷ್ಟು ದಿನ ಹಠ ಹಿಡಿದು ಕೂತಿದ್ದರು ಈಗ ಅದೇ ಬಹು ದೊಡ್ಡ ತಪ್ಪಾಗಿದೆ. ಸೈಟ್ ವಾಪಾಸ್ ಕೊಡುವುದಾಗಿದ್ದರೆ ಹೈಕೋರ್ಟ್ನಲ್ಲಿ ಯಾಕೆ ಇಷ್ಟು ದಿನ ಫೈಟ್ ಮಾಡಿದ್ರಿ? ಎಂದು ಪ್ರಶ್ನಿಸಿದ್ದಾರೆ.