ಕುಂದಾಪುರ: ಕಾಲೇಜು ಮುಗಿಸಿ ಇಬ್ಬರು ಸ್ನೇಹಿತರೊಂದಿಗೆ ಫುಟ್ಬಾತ್ ಇಂಟರ್ ಲಾಕ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗೆ ಹಿಂದಿನಿಂದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಕೋಟೇಶ್ವರ ಪ್ರಥಮ ದರ್ಜೆ ಕಾಲೇಜು ಸಮೀಪ ಕೋಟೇಶ್ವರ ಹಾಲಾಡಿ ರಸ್ತೆಯ ಕಕ್ಕೇರಿ ಎಂಬಲ್ಲಿ ಮಂಗಳವಾರ ಸಂಭವಿಸಿದೆ.
ಅಪಘಾತದಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿ ನಾಗೂರು ನಿವಾಸಿ ಪ್ರಸ್ತುತ ಕೋಟೇಶ್ವರದ ಕಾಳಾವರ ವರದರಾಜ ಶೆಟ್ಟಿ ಸರ್ಕಾರೀ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿಎಸ್ಸಿ ವಿದ್ಯಾರ್ಥಿ ಧನುಷ್ ಆಗಿದ್ದು ಇಬ್ಬರು ಸ್ನೇಹಿತರ ಜೊತೆ ನಡೆದುಕೊಂಡು ಬರುತ್ತಿದ್ದ. ಈ ವೇಳೆ ಅತೀ ವೇಗವಾಗಿ ಹಿಂದಿನಿಂದ ಬಂದ ಶ್ರೀ ಮಹಾಗಣಪತಿ ಪ್ರಸನ್ನ ಎಂಬ ಹೆಸರಿನ ಟಿಪ್ಪರ್ ಎದುರಿನಿಂದ ಬರುತ್ತಿದ್ದ ಕಾರನ್ನು ತಪ್ಪಿಸಲು ತೀರಾ ಬಲಬದಿಗೆ ಎಳೆಯಲಾಗಿದೆ. ವಿಧ್ಯಾರ್ಥಿಯ ಮೇಲೆ ಲಾರಿ ಹರಿದಿದ್ದು ಸ್ಥಳದಲ್ಲಿಯೇ ವಿಧ್ಯಾರ್ಥಿ ಸಾವನ್ನಪ್ಪಿದ್ದಾನೆ . ಈ ವೇಳೆ ಇಬ್ಬರು ಸ್ನೇಹಿತರು ಹಾರಿ ಬಚಾವಾಗಿದ್ದಾರೆ.
ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಂದ್ರ ನಾಯಕ್ ಹಾಗೂ ಇತರ ಉಪನ್ಯಾಸಕರು ಸ್ಥಳಕ್ಕೆ ಧಾವಿಸಿದ್ದು, ಮುಂದಿನ ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆ. ಕುಂದಾಪುರ ಸಂಚಾರೀ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೋಲಿಸರು ಮುಂದಿನ ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆ.