ಬೆಂಗಳೂರು : ನಾವೆಲ್ಲಾ ಕಷ್ಟ ಬಂದಾಗ ಶ್ರೀರಾಮ ಚಂದ್ರನ ನೆನೆಸಿಕೊಳ್ತೀವಿ ಅಂತಹ ಶ್ರೀರಾಮಚಂದ್ರನಿಗೆ ಕಷ್ಟ ತಪ್ಪಲಿಲ್ಲ. ನನಗೆ ಜನ್ಮ ಕೊಟ್ಟಿದ್ದು ಬಳ್ಳಾರಿ. 14 ವರ್ಷಗಳ ಬಳಿಕ ತವರು ಜಿಲ್ಲೆಗೆ ಹೋಗಲು ಸುಪ್ರೀಂಕೋರ್ಟ್ ತೀರ್ಪು ನೀಡಿದೆ ಎಂದು ಗಂಗಾವತಿ ಕ್ಷೇತ್ರದ ಶಾಸಕ ಗಾಲಿ ಜರ್ನಾದನ ರೆಡ್ಡಿ ಅವರು ಹೇಳಿದರು.
ಬಳ್ಳಾರಿಗೆ ಹೋಗಲು ಕೋರ್ಟ್ ತೀರ್ಪು ಕೊಟ್ಟ ಬೆನ್ನೆಲೆ ಮಾಧ್ಯಮದ ಜೊತೆ ಮಾತಾಡಿದ ಅವರು, ನನ್ನ ಕೊನೆ ಉಸಿರೂ ಕೂಡ ಬಳ್ಳಾರಿಯಲ್ಲೇ ಬಿಡಬೇಕು ಅಂತ ಆಸೆ. ನನಗೆ ಅಂತಲ್ಲಾ, ಯಾರೆಲ್ಲೇ ಹುಟ್ಟಿದ್ರೂ ಅವರ ಆಸೆ ಎಂದರು.
ಸದ್ಯ ಮೊದಲು ಗಂಗಾವತಿಯ ಆಂಜನೇಯ ದರ್ಶನ ಪಡೀತೀನಿ. ನನಗೆ ರಾಜಕೀಯ ಪುನರ್ಜನ್ಮ ನೀಡಿದ್ದು ಗಂಗಾವತಿ. ಗುರುವಾರ ಬೆಳಗ್ಗೆ ನವರಾತ್ರಿ ಮೊದಲ ದಿನ ಬಳ್ಳಾರಿಗೆ ಹೋಗ್ತೀನಿ. ದುರ್ಗಾ ಮಾತೆಯ ಆಶೀರ್ವಾದ ಪಡೆದುಕೊಳ್ತೀನಿ. ಬಿಜೆಪಿ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಎಲ್ಲಿ ಹೇಳುತ್ತೋ ಅಲ್ಲಿ ಕೆಲಸ ಮಾಡ್ತೀನಿ. ಬಳ್ಳಾರಿಗೆ ಏನು ಮಾಡಿದ್ದೀನಿ ಜನರಿಗೆ ಗೊತ್ತಿದೆ ಎಂದಿದ್ದಾರೆ.
ಇನ್ನೂ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ನಾನು ಸಚಿವ ಆಗಿದ್ದೆ. ಆಗ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಮತ್ತೆ ಬಳ್ಳಾರಿಗೆ ಹೋಗಿ ಅಭಿವೃದ್ಧಿ ಕಾರ್ಯ ಮಾಡುತ್ತೇನೆ. ನೂರಕ್ಕೆ ನೂರು ಸಂಡೂರು ವಿಧಾನಸಭಾ ಕ್ಷೇತ್ರದ ಚುನಾವಣೆ ಗೆಲ್ತೀವಿ. ಒಬ್ಬ ಮಂತ್ರಿ ನೂರಾರು ಕೋಟಿ ಹಣ ದುರುಪಯೋಗ ಮಾಡಿಕೊಂಡಿದ್ದಾನೆ. ಆ ಹಣದಲ್ಲಿ ಲೋಕಸಭಾ ಚುನಾವಣೆ ಗೆದ್ದಿದ್ದಾರೆ. ನನಗೆ ನಂಬಿಕೆ ಇದೆ. ಪ್ರಭು ಶ್ರೀರಾಮನಿಗೆ ಸಂಕಷ್ಟ ತಪ್ಪಿರಲಿಲ್ಲ ನಾನು ಯಾವ ಲೆಕ್ಕ ಎಂದು ನುಡಿದರು.
ನನ್ನ ರಾಜಕೀಯವಾಗಿ ಮುಗಿಸಬೇಕು ಎಂದು ಪ್ರಯತ್ನ ಪಟ್ಟರು. ನನ್ನ ಊರ ದುರ್ಗಮ್ಮ ನನ್ನ ವಾಪಸ್ ಕರೆಸಿಕೊಳ್ಳುತ್ತಿದ್ದಾಳೆ. ನನ್ನ ಅವಧಿಯಲ್ಲಿ ಬಳ್ಳಾರಿಯಲ್ಲಿ ಅಭಿವೃದ್ಧಿ ಆಗಿದ್ದು ಬಿಟ್ಟರೆ ಮತ್ತೆ ಅಭಿವೃದ್ಧಿ ಕಾರ್ಯ ಆಗಲೇ ಇಲ್ಲ. ಹೀಗಾಗಿ ನಾನು ಅಲ್ಲಿಗೆ ಬರಬೇಕು. ಅಭಿವೃದ್ಧಿ ಆಗಬೇಕು ಎಂದು ಜನ ಕಾಯುತ್ತಿದ್ದಾರೆ ಎಂದು ಜರ್ನಾದನ್ ರೆಡ್ಡಿ ಅವರು ಹೇಳಿದರು.