ರಾಮನಗರ: ಮಾಗಡಿಯಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡುವಾಗ ಸಿಎಂ ಸಿದ್ದರಾಮಯ್ಯ ಎಡವಟ್ಟು ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ 56 ಸಾವಿರ ಕೋಟಿ ಹಣ ಕೊಡುತ್ತಿದ್ದೇವೆ. ಒಂದು ಕುಟುಂಬಕ್ಕೆ 4 ರಿಂದ 5 ಸಾವಿರ ಕೋಟಿ ಹಣ ಸಿಗ್ತಿದೆ ಎಂದು ಬಾಯಿತಪ್ಪಿ ಹೇಳಿದ್ದಾರೆ. ಈ ವೇಳೆ ಎಚ್ಚರಿಸಿದ ಶಾಸಕ ಬಾಲಕೃಷ್ಣ 4 ರಿಂದ 5 ಸಾವಿರ ಸಿಗುತ್ತಿದೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಬಗ್ಗೆ ವಿರೋಧ ಪಕ್ಷಗಳು ಸಾಕಷ್ಟು ಟೀಕೆ ಮಾಡಿದ್ದವು. ಗ್ಯಾರಂಟಿ ಯೋಜನೆ ಬಂದ ಮೇಲೆ ಅಭಿವೃದ್ಧಿ ಕೆಲಸಗಳಿಗೆ ದುಡ್ಡಿಲ್ಲ ಎಂದು ಹೇಳಿದ್ದರು. ದುಡ್ಡಿಲ್ಲದೇ ಇದ್ದಿದ್ದರೆ ಈಗ 124 ಕೋಟಿ ರೂಗಳ ಅಭಿವೃದ್ಧಿ ಕೆಲಸ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.
ನಮ್ಮ ಪಕ್ಷದ ಕಾರ್ಯಕರ್ತರು ಸ್ವಲ್ಪ ಮಾತನಾಡುವುದು ಕಡಿಮೆ. ಆದರೆ ಬಿಜೆಪಿಯವರು ಎಲ್ಲಾ ಕಡೆ ಸುಳ್ಳು ಹೇಳಿಕೊಂಡು ಬರುತ್ತಿದ್ದಾರೆ. ನಿಮಗೆ ಸತ್ಯ ಹೇಳೋಕೆ ಯಾಕೆ ಭಯ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.