ಬೆಂಗಳೂರು: ಮಂಡ್ಯ ಜಿಲ್ಲೆಯಲ್ಲಿ ನಡೆದ ಕೋಮು ಗಲಭೆ ಸೃಷ್ಟಿಕರ್ತರು ಯಾರು ಎಂಬುದನ್ನ ಕಂಡು ಹಿಡಿಯಲು ಬಿಜೆಪಿ ಸತ್ಯ ಶೋಧನಾ ಸಮಿತಿ ರಚನೆ ಮಾಡಿರುವುದಕ್ಕೆ ಸಚಿವ ಸತೀಶ್ ಜಾರಕಿಹೊಳಿ ಲೇವಡಿ ಮಾಡಿದ್ದಾರೆ. ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅವರೇ ರಿಪೋರ್ಟ್ ಕೊಡಲಿ ಬಿಡಿ. ಪೊಲೀಸರ ಕೆಲಸ ಕಡಿಮೆ ಆಗುತ್ತೆ. ಕಂಡು ಹಿಡಿಯಲಿ ನೋಡೋಣ ಎಂದು ಸವಾಲು ಹಾಕಿದರು.
ನಾವು ಕೋಮು ಗಲಭೆ ಮಾಡಲು ಎಂದೂ ಹೇಳಲ್ಲ. ನಮ್ಮ ಸರ್ಕಾರ ಅವಧಿಯಲ್ಲಿ ಮಾತ್ರವಲ್ಲ. ಬಿಜೆಪಿ ಅಧಿಕಾರದ ಅವಧಿಯಲ್ಲೂ ಇಂಥಹ ಗಲಭೆಗಳು ಆಗಿವೆ. ಧಾರ್ಮಿಕ ಘಟನೆಗಳಲ್ಲಿ ಹೀಗೆ ಆಗುತ್ತದೆ. ತಪ್ಪಿತಸ್ಥರ ಮೇಲೆ ಕ್ರಮ ಆಗುತ್ತದೆ. ಘಟನೆವೊಂದು ಘಟನೆ ಅಷ್ಟೇ, ಸಣ್ಣದು ದೊಡ್ಡದು ಅಂತಾ ಇಲ್ಲವೆಂದು ತಿಳಿಸಿದ್ದಾರೆ.
ಈ ಹಿಂದೆ ಹುಬ್ಬಳ್ಳಿ, ಮಂಗಳೂರಿನಲ್ಲೂ ಈ ರೀತಿಯ ಘಟನೆ ಆಗಿದೆ. ಎಲ್ಲೂ ಈ ರೀತಿ ಘಟನೆ ಆಗದಂತೆ ನೋಡಿಕೊಳ್ಳಬೇಕು. ಇದು ತನಿಖೆಯಿಂದ ಹೊರ ಬರಬೇಕು. ಈ ಘಟನೆ ಸಂಬಂಧ ಯಾರೂ ರಾಜೀನಾಮೆ ನೀಡುವ ಪರಿಸ್ಥಿತಿ ಉದ್ಭವ ಆಗಿಲ್ಲ. ಈ ಘಟನೆಯನ್ನು ಪೊಲೀಸ್ ಇಲಾಖೆ ಸರಿಯಾಗಿ ನಿರ್ವಹಿಸಿದೆ ಎಂದು ತಿಳಿಸಿದರು.