ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಬೆನ್ನಲ್ಲೇ ರಾಜ್ಯಾದ್ಯಂತ ರಾಜ್ಯಪಾಲರ ವಿರುದ್ದ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಬೃಹತ್ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.
ಬಾಗಲಕೋಟೆಯಲ್ಲಿ ಕೂಡಲಸಂಗಮ ರಸ್ತೆ ತಡೆದು ಪ್ರತಿಭಟನೆ:
ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಹಿನ್ನಲೆ ರಾಜ್ಯಪಾಲರ ಮೇಲಿನ ಆಕ್ರೋಶ ಭುಗಿಲೆದಿದೆ. ಬಾಗಲಕೋಟೆ ತಾಲೂಕಿನ ಬೇವೂರು ಗ್ರಾಮಸ್ಥರು ಕೂಡಲಸಂಗಮ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ವೇಳೆ ರಾಜ್ಯಪಾಲರ ಭಾವಚಿತ್ರಕ್ಕೆ ಬೆಂಕಿ ಹಚ್ಚಿದ ಕೈ ಕಾರ್ಯಕರ್ತರು, ಬಿಜೆಪಿ, ಜೆಡಿಎಸ್, ರಾಜ್ಯಪಾಲರ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು.
ಇದನ್ನೂ ಓದಿ: ಸಿಎಂ ಪರ ಘಟಾನುಘಟಿ ವಕೀಲರಿಂದ ವಾದ ಮಂಡನೆ
ಕುರಿಗಳ ಹಿಂಡಿನೊಂದಿಗೆ ‘ಕೈ’ ಕಾರ್ಯಕರ್ತರ ಪ್ರೊಟೆಸ್ಟ್:
ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ಕೈ ಕಾರ್ಯಕರ್ತರ ಪ್ರತಿಭಟನೆ ನಡೆಸಿದ್ದಾರೆ. ರಾಜ್ಯಪಾಲರ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರು ಕಿಡಿಕಾರಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನಗೆ ಅನುಮತಿ ನೀಡಿದ್ದಕ್ಕೆ ಖಂಡನೆ ವ್ಯಕ್ತಪಡಿಸಿದ್ದಾರೆ. ಕುರಿಗಳ ಹಿಂಡಿನೊಂದಿಗೆ ಬಂದ ಪ್ರತಿಭಟನಾಕಾರರು, ತಮಟೆ ಬಾರಿಸುತ್ತ ಪಟ್ಟಣದ ಪ್ರಮೂಖ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.
ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ:
ಮುಡಾ ಹಗರಣ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರಾದ ಥಾವರ ಚಂದ್ ಗೆಹ್ಲೋಟ್ ಅನುಮತಿ ನೀಡಿರುವುದನ್ನು ಖಂಡಿಸಿ ಮೈಸೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರದ ಕೃಷ್ಣರಾಜ ಬುಲೆವಾರ್ಡ್ ರಸ್ತೆಯಲ್ಲಿರುವ ನ್ಯಾಯಾಲಯದ ಮುಂಭಾಗ ಜಮಾಯಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರುಗಳು ರಾಜ್ಯಪಾಲರ ವಿರುದ್ಧ ಘೋಷಣೆಗಳ ಕೂಗಿ ಪ್ರತಿಭಟಿಸಿದರು. ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ, ಕಾನೂನು ಗಾಳಿಗೆ ತೂರಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ. ಇದು ಕಾನೂನು ಬಾಹಿರ ನಡೆಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.