Thursday, January 23, 2025

Olympic Games Paris 2024 : ನೀರಜ್​ ಚೋಪ್ರಾಗೆ ಬೆಳ್ಳಿ, ಗೆಳೆಯನಿಗೆ ಚಿನ್ನದ ಪದಕ

ನೀರಜ್ ಚೋಪ್ರಾ ಅವರಿಗೆ ಪ್ಯಾರಿಸ್​​ ಒಲಿಂಪಿಕ್ಸ್​ನಲ್ಲಿ ಈ ಬಾರಿ ಚಿನ್ನದ ಪದಕ ಇಲ್ಲ. ಅದನ್ನು ಆತನ ಗೆಳೆಯ ಅರ್ಶದ್ ನದೀಮ್ ತನ್ನ ಕೊರಳಿಗೇರಿಸಿಕೊಂಡಿದ್ದಾರೆ, ಅದೂ ಒಲಿಂಪಿಕ್ ದಾಖಲೆ ಮುರಿದು. ಏಷ್ಯನ್ ಗೇಮ್ಸ್, ಕಾಮನ್‍ವೆಲ್ತ್ ಗೇಮ್ಸ್, ವಿಶ್ವ ಚಾಂಪಿಯನ್​ಶಿಪ್​ ಎಲ್ಲೆಡೆ ನೀರಜ್ ಚೋಪ್ರಾನ ಬಳಿಕ ಎರಡನೇಯ ಸ್ಥಾನ ಗೆಲ್ಲುತ್ತಾ ಬಂದಿದ್ದ ಅರ್ಶದ್ ಈ ಬಾರಿ ಎಲ್ಲರನ್ನೂ ಮೀರಿ ಚಿನ್ನದ ಪದಕ ಗೆದ್ದಿದ್ದಾರೆ.

ಎಲ್ಲಾ ಕ್ಷೇತ್ರಗಳಲ್ಲೂ ಸೊರಗಿರುವ ಪಾಕೀಸ್ಥಾನದಲ್ಲಿ ಅರ್ಶದ್ ಬಹುಷ ಸಂತಸದ ಧಾರೆಯನ್ನೇ ಹರಿಸಿದ್ದಾರೆ. ಅಷ್ಟೊಂದು ಆಧುನಿಕ ಸೌಲಭ್ಯಗಳು, ಕ್ರೀಡೆಗೆ ಬೇಕಾದ ವಾತಾವರಣ ಮುಂತಾದವು ಇಲ್ಲದೆಯೂ ಅರ್ಶದ್ ಚಿನ್ನದ ಪದಕ ಗೆದ್ದಿದ್ದಾರೆ ಅಂದ್ರೆ ಆತ ನಿಜವಾಗಿಯೂ ಸ್ಪೆಷಲ್ ಟ್ಯಾಲೆಂಟ್. ಇವತ್ತು ಆತ ಒಲಿಂಪಿಕ್ಸ್ ದಾಖಲೆಯನ್ನು ಮಾತ್ರ ಬ್ರೇಕ್ ಮಾಡಿಲ್ಲ, ನೀರಜ್ ಚಿನ್ನ ಗೆದ್ದು ಬರಲಿ ಎನ್ನುವ ಕೋಟ್ಯಾಂತರ ಭಾರತೀಯರ ಆಸೆಯನ್ನೂ ಬ್ರೇಕ್ ಮಾಡಿದ್ದಾರೆ. ವಿಶ್ವದ ಅತೀ ದೊಡ್ಡ ಕ್ರೀಡಾ ಸಮರದಲ್ಲಿ ಅರ್ಶದ್ ಗೆದ್ದು ಬೀಗಿದ್ದಾರೆ.

 

ಈ ನಡುವೆ ನಮ್ಮ ನೀರಜ್ ಚೋಪ್ರಾನ ಸಾಧನೆ ಯಾವುದೇ ರೀತಿಯಲ್ಲೂ ಕಡಿಮೆಯೇನಲ್ಲ. ಕಳೆದಬಾರಿ ಚಿನ್ನದ ಪದಕ, ಈ ಬಾರಿ ಬೆಳ್ಳಿ. ಸತತ ಎರಡು ಒಲಿಂಪಿಕ್ಸ್​ನಲ್ಲಿ ಪದಕ. ಭಾರತದ ಮಟ್ಟಿಗೆ ಆತನ ಸಾಧನೆ ಅಸಾಧರಣವಾದದ್ದು. ಆತ ಬರೀ ಒಲಿಂಪಿಕ್ ಚಾಂಪಿಯನ್ ಮಾತ್ರವಲ್ಲ. ಅದರೊಟ್ಟಿಗೆ ಜೂ.ವಿಶ್ವಕಪ್ ಚಾಂಪಿಯನ್​, ಏಷ್ಯನ್ ಗೇಮ್ಸ್ ಚಿನ್ನ, ಕಾಮನ್‍ವೆಲ್ತ್ ಗೇಮ್ಸ್ ಚಿನ್ನ, ವಿಶ್ವ ಚಾಂಪಿನ್‍ಶಿಪ್‍ನಲ್ಲಿ ಚಿನ್ನ. ಇಪ್ಪತ್ತಾರು ವರುಷದ ನೀರಜ್‍ ಸಾಧನೆಗಳು ಭಾರತೀಯ ಕ್ರೀಡಾರಂಗದ ಚರಿತ್ರೆಯಲ್ಲಿ ಸದಾಕಾಲ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತವು. ಆತನೆತ್ತರದ ಕ್ರೀಡಾಳು ಇದುವರೆಗೂ ಭಾರತೀಯ ಟ್ರ್ಯಾಕ್ ಆಂಡ್ ಫೀಲ್ಡ್ ವಿಭಾಗದಲ್ಲಿ ಬಂದಿಲ್ಲ. ಮಿಲ್ಖಾ ಸಿಂಗ್, ಪಿಟಿ ಉಷಾ, ಅಂಜು ಜಾರ್ಜ್ ಯಾರೂ ಸಾಧಿಸಲಾಗದ್ದನ್ನು ಸಾಧಿಸಿ, ಎಲ್ಲರನ್ನೂ ಮೀರಿಸಿದರೂ, ಇವತ್ತಿಗೂ ಆತನಲ್ಲಿರುವ ಪದಕದ ಹಸಿವು ಇಂಗಿಲ್ಲ. ತನ್ನ ಭುಜದ ಮೇಲೆ ಕೋಟ್ಯಾಂತರ ಭಾರತೀಯರ ಆಸೆ, ಆಕಾಂಕ್ಷೆಗಳನ್ನೇರಿಸಿ ವಿಶ್ವದೆಲ್ಲೆಡೆ ಆತ ಯಶಸ್ವಿಯಾಗಿದ್ದಾರೆ.

ಈ ಸಲದ ಒಲಿಂಪಿಕ್ಸ್ ಭಾರತದ ಮಟ್ಟಿಗೆ ತೀರಾ ನಿರಾಸೆಗೊಳಿಸಿರುವಂತದ್ದು. ಬ್ಯಾಡ್ಮಿಂಟನ್, ಕುಸ್ತಿ, ಬಿಲ್ಲುಗಾರಿಕೆ, ವೇಯ್ಟ್​​ ಲಿಫ್ಟಿಂಗ್ ಮುಂತಾದವುಗಳಲ್ಲಿ ಭಾರತ ಪದಕ ಪಡೆಯಬಹುದಿತ್ತು. ಆದರೆ, ನಮ್ಮ ಕ್ರೀಡಾಳುಗಳು, ನಮ್ಮ ವಿಶ್ವ ಚಾಂಪಿಯನ್‍ಗಳು ಒಲಿಂಪಿಕ್ ಮಟ್ಟದಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ತೋರಿಸಲಾಗದೇ ಹಿಂದಿರುಗಿದ್ದಾರೆ.

ಆದರೆ, ನೀರಜ್ ಚೋಪ್ರಾ ಮಾತ್ರ ಮತ್ತೊಮ್ಮೆ ಭಾರತೀಯರು ಆತನ ಮೇಲಿಟ್ಟಿರುವ ನಂಬಿಕೆಗಳನ್ನು ಹುಸಿ ಮಾಡಿಲ್ಲ. ಚಿನ್ನ ಸಿಗಲಿಲ್ಲವಾದರೂ ಬೆಳ್ಳಿಯನ್ನು ಕೊರಳಿಗೇರಿಸಿಕೊಂಡು ಭಾರತಕ್ಕೆ ಬರಲಿದ್ದಾರೆ. ಈತನಿಂದ ಮುಂದಿನ ಕೆಲ ವರುಷಗಳಲ್ಲಿ ಭಾರತೀಯ ಕ್ರೀಡಾರಂಗಕ್ಕೆ ಸುಗ್ಗಿಯ ದಿನಗಳು ಬರಲಿರುವುದಂತೂ ಗ್ಯಾರಂಟಿ. ಆತ ಇದುವರೆಗೆ ಗೆಲ್ಲದ ಚಾಂಪಿಯನ್‍ಶಿಪ್‍ಗಳಿಲ್ಲ, ಪದಕಗಳಿಲ್ಲ. ಆದರೆ, ಮತ್ತೊಮ್ಮೆ, ಮಗದೊಮ್ಮೆ ಆತನ ಭಾರತದ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಲಿದ್ದಾನೆನ್ನುವುದು ಮಾತ್ರ ಗ್ಯಾರಂಟಿ.

RELATED ARTICLES

Related Articles

TRENDING ARTICLES