Sunday, December 8, 2024

ಒಂದು ಕ್ರಿಕೆಟ್ ಕಿಟ್​​ಗಾಗಿ ಹಾಲು ಮಾರುತ್ತಿದ್ದ ಹುಡುಗ ರೋಹಿತ್​ ಶರ್ಮಾ ರೋಚಕ ಜರ್ನಿ

ಟಿ20 ವಿಶ್ವಕಪ್ ಚಾಂಪಿಯನ್ ನಾಯಕ ರೋಹಿತ್ ಶರ್ಮಾ ಇಷ್ಟೊಂದು ಹೃದಯವಂತನಾಗಿದ್ದು ಹೇಗೆ..?
10 ವರ್ಷಗಳ ಹಿಂದೆ… 2013ರ ನಂತರ ರೋಹಿತ್ ಆಟದಲ್ಲಾದ ಬದಲಾವಣೆ ಆತನಿಗೆ ಇವತ್ತು ವೈಟ್ ಬಾಲ್ ಲೆಜೆಂಡ್ ಎಂಬ ಹಿರಿಮೆಯನ್ನು ತಂದು ಕೊಟ್ಟಿದೆ. ಇದಕ್ಕೆ ರೋಹಿತ್ ಜೀವನಪೂರ್ತಿ ಕ್ಯಾಪ್ಟನ್ ಕೂಲ್ ಎಂ.ಎಸ್ ಧೋನಿಗೆ ಕೃತಜ್ಞನಾಗಿರಬೇಕು. ಅವತ್ತು ಧೋನಿ ದೊಡ್ಡ ದೊಡ್ಡವರನ್ನೇ ಎದುರ ಹಾಕಿಕೊಂಡು ರೋಹಿತ್’ನನ್ನೇನಾದರೂ ಓಪನರ್ ಆಗಿ ಆಡಿಸದೇ ಇದ್ದಿದ್ದರೆ ಇವತ್ತು ರೋಹಿತ್ ಎಲ್ಲಿರುತ್ತಿದ್ದನೋ ಗೊತ್ತಿಲ್ಲ..! ಇವತ್ತಿಗೆ ರೋಹಿತ್ ಶರ್ಮಾ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿದ ದಿಗ್ಗಜ ನಾಯಕರ ಸಾಲಿನಲ್ಲಿ ನಿಂತಿದ್ದಾನೆ. ಗೆಲುವಿನ ಸಂಭ್ರಮದಲ್ಲಿ ಮೈಮರೆಯುವವರ ಮಧ್ಯೆ, ತಂಡಕ್ಕಾಗಿ ಹಗಲೂ ರಾತ್ರಿ ರಕ್ತ ಬಸಿದವರ ಪರವಾಗಿ ನಿಂತ ಜಂಟಲ್’ಮ್ಯಾನ್ ರೋಹಿತ್ ಶರ್ಮಾ.
ಇವತ್ತು ವಿಶ್ವ ಚಾಂಪಿಯನ್ ಭಾರತ ತಂಡದ ಸಹಾಯಕ ಸಿಬ್ಬಂದಿಗೆ ತಲಾ ಎರಡೆರಡು ಕೋಟಿ ರೂಪಾಯಿ ನಗದು ಬಹುಮಾನ ಸಿಕ್ಕಿದೆ ಎಂದರೆ ಅದಕ್ಕೆ ಕಾರಣ ಒಬ್ಬನೇ ಒಬ್ಬ ರೋಹಿತ್ ಶರ್ಮಾ. ವಿಶ್ವಕಪ್ ಗೆದ್ದ ಮರುದಿನ ಬಾರ್ಬೆಡೋಸ್’ನ ಹಿಲ್ಟನ್ ಹೋಟೆಲ್’ನಲ್ಲಿ ಕೂತು ರೋಹಿತ್ ಏನಾದರೂ ಪಟ್ಟು ಹಿಡಿಯದೇ ಇದ್ದಿದ್ದರೆ ತೆರೆಯ ಹಿಂದೆ ದುಡಿದವರಿಗೆ 50 ಲಕ್ಷ ಕೊಟ್ಟು ಬಿಸಿಸಿಐ ಕೈತೊಳೆದುಕೊಳ್ಳುತ್ತಿತ್ತು. ಹಾಗಾಗಲು ಹೃದಯವಂತ ರೋಹಿತ್ ಬಿಡಲಿಲ್ಲ. ತೆರೆಯ ಹಿಂದಿನ ಹೀರೋಗಳ ಪರವಾಗಿ ಗಟ್ಟಿಯಾಗಿ ನಿಂತು ಬಿಟ್ಟ.

ಹಾಗಾದರೆ ರೋಹಿತ್ ಶರ್ಮಾ ಇಷ್ಟೊಂದು ಹೃದಯವಂತನಾಗಿದ್ದು ಹೇಗೆ..? ತನ್ನವರಿಗಾಗಿ ಬಿಸಿಸಿಐ ಬಾಸ್’ಗಳಿಗೇ ಸಡ್ಡು ಹೊಡೆಯುವಷ್ಟು ಧೈರ್ಯ ರೋಹಿತ್’ಗೆ ಬಂದದ್ದಾದರೂ ಎಲ್ಲಿಂದ..? ಇದರ ಹಿಂದಿರುವುದು ಮುಂಬೈನ ಈ ಮಹನೀಯ ನಡೆದು ಬಂದ ದಾರಿ.

ಒಂದು ಕ್ರಿಕೆಟ್ ಕಿಟ್ ಖರೀದಿಸಲು ಹಾಲು ಮಾರುತ್ತಿದ್ದ ಹುಡುಗ ರೋಹಿತ್ ಶರ್ಮಾ.. ಅವನೇನೂ ಚಿನ್ನದ ಚಮಚವನ್ನು ಬಾಯಲ್ಲಿಟ್ಟುಕೊಂಡು ಹುಟ್ಟಿದವನಲ್ಲ. “ಆ ದಿನದ ದುಡಿಮೆ ಆ ದಿನಕ್ಕಷ್ಟೇ” ಎಂಬಂತಿದ್ದ ಮನೆಯ ಮಗ. ತಂದೆಯೇನು ಆ ಕಾಲಕ್ಕೆ ಮಗನಿಗೆ ಒಂದು ಕ್ರಿಕೆಟ್ ಕಿಟ್ ಕೊಡಿಸುವಷ್ಟೂ ಅನುಕೂಲಸ್ಥನಾಗಿರಲಿಲ್ಲ. ಅಸಲಿಗೆ ಮಗ ಕ್ರಿಕೆಟ್ ಆಡುವುದೇ ತಂದೆಗೆ ಇಷ್ಟವಿರಲಿಲ್ಲ. ಆದರೆ ಕ್ರಿಕೆಟ್ ಆಡಲೇಬೇಕೆಂದು ಮನೆ ಬಿಟ್ಟು ಮಾವನ ಮನೆಗೆ ಬಂದಿದ್ದ ರೋಹಿತ್ ಒಂದು ಕ್ರಿಕೆಟ್ ಕಿಟ್ ಖರೀದಿಸಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅದಕ್ಕಾಗಿ ಮುಂಬೈನ ಬೊರಿವಿಲಿಯ ಬೀದಿಗಳಲ್ಲಿ ಎರಡು ವರ್ಷ ಪ್ಯಾಕೆಟ್ ಹಾಲುಗಳನ್ನು ಮಾರಿದ್ದ. ಪ್ರತೀ ಬೆವರ ಹನಿಯ ಲೆಕ್ಕದಲ್ಲಿ ಮೊದಲ ಕ್ರಿಕೆಟ್ ಕಿಟ್ ಖರೀದಿಸಿದ್ದ. ಅದು ಅವನದ್ದೇ ದುಡ್ಡು, ಅವನು ಕಷ್ಟ ಪಟ್ಟು ಸಂಪಾದಿಸಿದ ದುಡ್ಡು.

ರೋಹಿತ್ ಶರ್ಮಾನಿಗೆ ಬೆವರ ಹನಿಯ ಬೆಲೆ ಗೊತ್ತಿದ್ದರಿಂದಲೇ ಆತ ತನ್ನ ತಂಡದ ಸಹಾಯಕ ಸಿಬ್ಬಂದಿಯ ಪರವಾಗಿ ಧ್ವನಿ ಎತ್ತುವಷ್ಟು ಹೃದಯವಂತನಾಗಿದ್ದು. ಅಜೆಂಡಾ ಕ್ಲಿಯರ್ ಇದ್ದಾಗ ಯಾರಿಗೂ ಭಯ ಪಡುವ ಅವಶ್ಯಕತೆಯೇ ಇರುವುದಿಲ್ಲ ಎಂಬ ಮನಸ್ಥಿತಿಯೇ ಆತನನ್ನು ಬಿಸಿಸಿಐ ಬಾಸ್’ಗಳ ಮುಂದೆ ಧೈರ್ಯವಾಗಿ ನಿಲ್ಲುವಂತೆ ಮಾಡಿದ್ದು.

ಭಾರತದ ಸರ್ವಶ್ರೇಷ್ಠ ನಾಯಕ ಎಂ.ಎಸ್ ಧೋನಿ ಮತ್ತು ರೋಹಿತ್ ಶರ್ಮಾ ಮಧ್ಯೆ ಸಾಕಷ್ಟು ಹೋಲಿಕೆಗಳಿವೆ. ಧೋನಿಯಂತೆ ರೋಹಿತ್ ಕೂಡ ತನ್ನ ಬೇರುಗಳನ್ನು, ಏನೂ ಅಲ್ಲದಿದ್ದಾಗ ಜೊತೆಗಿದ್ದ ಸ್ನೇಹಿತರನ್ನು ಇಂದಿಗೂ ಮರೆತಿಲ್ಲ. ಈಗಲೂ ತನ್ನ ಜೊತೆ ಬೊರಿವಿಲಿಯ ಬೀದಿಗಳಲ್ಲಿ ಆಡುತ್ತಿದ್ದ ಹುಡುಗರನ್ನು ಸಮಯ ಸಿಕ್ಕಾಗಲೆಲ್ಲಾ ಭೇಟಿಯಾಗುತ್ತಾನೆ. ಅವರಲ್ಲಿ ಇಬ್ಬರು ಇವತ್ತಿಗೂ ರೋಹಿತ್’ನ ಆಪ್ತ ಸ್ನೇಹಿತರು, ದಾಸ ಮತ್ತು ಮುನ್ನ..
ರೋಹಿತ್ ಶರ್ಮಾನ ಫೋನ್ ಈಗಲೂ Dasa Calling, Munna Calling ಎಂದು ರಿಂಗಣಿಸುತ್ತದೆ. ಅದೆಷ್ಟೇ busy ಇದ್ದರೂ ಫೋನ್ ರಿಂಗಣಿಸಿದ ಮರುಕ್ಷಣವೇ ಫೋನೆತ್ತಿ ರೋಹಿತ್ ಮಾತನಾಡುತ್ತಾನೆ. “ಅರೇ, ಕ್ಯಾರೇ.. ಬೆ…. ತ್.. ಎಂದು ತನ್ನದೇ typical styleನಲ್ಲಿ ಮಾತನಾಡುತ್ತಾನೆ… ಹೃದಯದಿಂದ ಮಾತನಾಡುತ್ತಾನೆ. That is ರೋಹಿತ್ ಶರ್ಮಾ… ಹೃದಯವಂತ ರೋಹಿತ್ ಶರ್ಮಾ.

(ಸುದ್ದಿಯ ಮೂಲ: ಸುದರ್ಶನ್​​ ಗೌಡ ಫೇಸ್​​ಬುಕ್​ ಪೇಜ್​)

RELATED ARTICLES

Related Articles

TRENDING ARTICLES