Friday, July 12, 2024

ರೈತರ ‘ಜೀವ ಹಿಂಡುತ್ತಿದೆ’ ಈ ಹಂತಕ ಸರ್ಕಾರ: ಬಿಜೆಪಿ ಕಿಡಿ

ರಾಜ್ಯ ಕಾಂಗ್ರೆಸ್​​​ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ.. ರಾಜ್ಯದಲ್ಲಿ 15 ತಿಂಗಳಲ್ಲಿ ನಡೆದಿರುವ ರೈತರ ಆತ್ಮಹತ್ಯೆ ಪ್ರಕರಣಗಳ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ, ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಯಿಂದ ನೊಂದು ರೈತ ಸಮುದಾಯ ಆತ್ಮಹತ್ಯೆಯ ಹಾದಿ ಹಿಡಿದಿದೆ ಎಂದು ವಾಗ್ದಾಳಿ ನಡೆಸಿದೆ.

ಇದನ್ನು ಓದಿ: ಮಾಜಿ ಸಚಿವ ಬಿ.ಸಿ.ಪಾಟೀಲ್ ಅಳಿಯ ವಿಷಸೇವಿಸಿ ಆತ್ಮಹತ್ಯೆ

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ನಾಡಿಗೆ ಅನ್ನ ನೀಡುವ ರೈತ ಸಮುದಾಯ, ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಯಿಂದ ನೊಂದು, ಬೆಂದು, ಬಸವಳಿದು ಆತ್ಮಹತ್ಯೆಯ ಹಾದಿ ಹಿಡಿದಿದೆ. ರಾಜ್ಯದ ಪಾಲಿನ ಕಿಸಾನ್ ಸಮ್ಮಾನ್ ಸಹಾಯಧನ ರದ್ದು, ₹1,087 ಕೋಟಿ ಹಾಲಿನ ಪ್ರೋತ್ಸಾಹಧನ ಬಾಕಿ, ಹನಿ ನೀರಾವರಿ ಯೋಜನೆಯ ಸಹಾಯಧನ ಕಡಿತ, ಬೆಲೆ ಏರಿಕೆ ಮತ್ತು ಅಸಮರ್ಪಕ ಬರ ಪರಿಹಾರ ವಿತರಣೆ ಕಾರಣಗಳಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸರ್ಕಾರ ರೈತರಿಗೆ ಆತ್ಮಹತ್ಯೆಯ ದೌರ್ಭಾಗ್ಯ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರೈತ ವಿರೋಧಿ ನಡೆಯಿಂದ ಕೇವಲ 15 ತಿಂಗಳಲ್ಲೇ ರಾಜ್ಯದ ಸರಿ ಸುಮಾರು 1,182 ಅನ್ನದಾತರು ಉಸಿರು ಚೆಲ್ಲಿದ್ದಾರೆ. ನೊಂದ ರೈತ ಕುಟುಂಬದ ಶಾಪ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟದೇ ಇರಲಾರದು ಎಂದು ಬಿಜೆಪಿ ಕಿಡಿಕಾರಿದೆ.

ರೈತರ ಆತ್ಮಹತ್ಯೆ ಕುರಿತು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್​​​​, ಕರ್ನಾಟಕ ಇತಿಹಾಸದಲ್ಲಿಯೇ ಅತಿ ಭಂಡ ಸರ್ಕಾರವೆಂದರೆ ರೈತ ವಿರೋಧಿ, ರೈತ ಹಂತಕ ಸಿದ್ದರಾಮಯ್ಯ ಅವರ ಸರ್ಕಾರವಾಗಿದೆ. ಕಾಂಗ್ರೆಸ್ ಸರ್ಕಾರದ ಒಂದು ವರ್ಷದ ಅವಧಿಯಲ್ಲಿ ರಾಜ್ಯದ 1,182 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಕಾಂಗ್ರೆಸ್‌ನ ರೈತ ವಿರೋಧಿ ನೀತಿಯ ಜ್ವಲಂತ ನಿದರ್ಶನವಾಗಿದೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES