ಮೈಸೂರು: ಮೈಸೂರು ನಗರಾಭಿವೃದ್ದಿ ಪ್ರಧಿಕಾರ ಮುಡಾದ ಬಗ್ಗೆ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಪ್ರತಿಕ್ರಿಯೆ ನೀಡಿದ್ದು ಹೊಸ ಬಾಂಬ್ ಸಿಡಿಸಿದ್ದಾರೆ.
ಇದನ್ನೂ ಓದಿ: ಡೆಂಘೀ, ಝೀಕಾ ಆಯ್ತು ಇದೀಗ ಇಲಿ ಜ್ವರ ಪತ್ತೆ!
ಈ ಕುರಿತು ಮೈಸೂರಿನಲ್ಲಿ ಮಾದ್ಯಮ ಪ್ರತಿಕ್ರಿಯೆ ನೀಡಿದ ಅವರು, ನಾನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (MUDA) ಅವ್ಯವಹಾರದ ವಿಚಾರ ನನ್ನ ಗಮನಕ್ಕೆ ಬಂದಿತ್ತು. ಆಯುಕ್ತರು ಸಭೆ ಮಾಡದೆಯೇ ಸೈಟ್‌ಗಳನ್ನು ನೀಡಿದ್ದಾರೆ. 50:50 ಅನುಪಾತದಡಿ ನಿವೇಶನ ಕೊಡುವಾಗ ಸಭೆಯಲ್ಲಿ ಚರ್ಚೆಗೆ ತಂದು ಕೊಡಬೇಕು. ಆದ್ರೆ ಈ ನಿಯಮಗಳನ್ನು ಅಂದಿನ ಆಯುಕ್ತರು ಅನುಸರಿಸಿಲ್ಲ. ಹೀಗಾಗಿ ಅಂದಿನ ಆಯುಕ್ತರನ್ನ ಬದಲಾಯಿಸುವಂತೆ ಸರ್ಕಾರಕ್ಕೆ ಹೇಳಿದ್ದೆ. ಆದರೆ ಜಾತಿಯ ಪ್ರಭಾವದಿಂದ ಅವರು ಉಳಿದುಕೊಂಡರು. ಅವತ್ತಿನ ದಿನ ಸರಿಯಾದ ಕ್ರಮ ಆಗಿದ್ದರೇ ಇಂದು ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿರಲಿಲ್ಲ, ಈಗಲಾದರೂ ಈ ಬಗ್ಗೆ ವ್ಯವಸ್ಥಿತವಾಗಿ ತನಿಖೆಯಾಗಲಿ ಎಂದು ಮನವಿ ಮಾಡಿದ್ದಾರೆ.
ಅನಗತ್ಯವಾಗಿ ಮುಡಾ ಹಗರಣ ವಿಚಾರದಲ್ಲಿ ನನ್ನ ಹೆಸರು ತರಬೇಡಿ. ಮುಡಾದಲ್ಲಿ ಒಂದೇ ಒಂದು ನಿವೇಶನ ನನ್ನ ಹೆಸರಿನಲ್ಲಿ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನಾನು ಯಾವುದೇ ನಿವೇಶನ ತೆಗದುಕೊಂಡಿಲ್ಲ. ಯಾರಿಗೂ ನಾನು ಒತ್ತಡ ಹೇರಿ ನಿವೇಶನ ಕೊಡಿಸಿಲ್ಲ. ಈ ವಿಚಾರದಲ್ಲಿ ನನ್ನ ಹೆಸರು ತರಬೇಡಿ ಎಂದು ಹೇಳಿದ್ದಾರೆ.