Sunday, October 6, 2024

ದ್ರಾಕ್ಷಿ, ಮಾವು ಬೆಳೆ ವಿಮೆಗೆ ನೋಂದಾಯಿಸಿ: ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್

ಬೆಂಗಳೂರು ಗ್ರಾಮಾಂತರ:- ತೋಟಗಾರಿಕಾ ಇಲಾಖೆ ವತಿಯಿಂದ 2024-25ನೇ ಸಾಲಿನ ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ (RWBCIS)ಯಡಿ ವಿವಿಧ ತೋಟಗಾರಿಕೆ ಬೆಳೆಗಳಿಗೆ ವಿಮೆ ಮಾಡಿಸಬಹುದಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಧೀನ ತಾಲ್ಲೂಕುಗಳಾದ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ನೆಲಮಂಗಲ ತಾಲ್ಲೂಕುಗಳನ್ನು ವಿಮೆಯ ವ್ಯಾಪ್ತಿಗೆ ಒಳಪಡಿಸಲಾಗಿದೆ.

ಹವಾಮಾನ ಅಂಶಗಳಾದ ತಾಪಮಾನ, ಗಾಳಿಯ ವೇಗ, ಮಳೆಯ ಪ್ರಮಾಣ, ಆರ್ದ್ರತೆ ಇತ್ಯಾದಿ ಮಾಹಿತಿಗಳನ್ನು ಸರ್ಕಾರದಿಂದ ಅಧಿಸೂಚಿತ ಟೆಲಿ ಮೆಟ್ರಿಕ್ ಮಳೆ ಮಾಪನ ಕೇಂದ್ರ ಮತ್ತು ಸ್ವಯಂಚಾಲಿತ ಹವಾಮಾನ ಕೇಂದ್ರಗಳಲ್ಲಿ ದಾಖಲಾಗುವ ಅಂಶಗಳ ಆಧಾರದ ಮೇಲೆ ಬೆಳೆ ವಿಮೆ ನಷ್ಟವನ್ನು ತೀರ್ಮಾನಿಸಲಾಗುತ್ತದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಮತ್ತು ನೆಲಮಂಗಲ ತಾಲ್ಲೂಕಿನ ಮಾವು ಬೆಳೆಯಲ್ಲಿ ಪ್ರತಿ ಹೆಕ್ಟೇರ್ ಗೆ ವಿಮಾ ಮೊತ್ತ-80,000ರೂ, ರೈತರು ಪಾವತಿಸಬೇಕಾದ ದರ (ಶೇ.5%)-4,000, ದ್ರಾಕ್ಷಿ ಬೆಳೆಯಲ್ಲಿ ಪ್ರತಿ ಹೆಕ್ಟೇರ್ ಗೆ ವಿಮಾ ಮೊತ್ತ-2,80,000ರೂ, ರೈತರು ಪಾವತಿಸಬೇಕಾದ ದರ (ಶೇ.5%ಗಳಲ್ಲಿ)-14,000 ಮಾವು ಮತ್ತು ದ್ರಾಕ್ಷಿ ಬೆಳೆಯುವ ರೈತ ಬಾಂಧವರು ಈ ಯೋಜನೆಯಡಿ ನೋಂದಾಯಿಸಿ ಉಪಯೋಗ ಪಡೆದುಕೊಳ್ಳುವುದು.

ಇದನ್ನೂ ಓದಿ: ಕುಮಾರಸ್ವಾಮಿ ಜನತಾ ದರ್ಶನಕ್ಕೆ ಸರ್ಕಾರಿ ಅಧಿಕಾರಿಗಳು ಗೈರು: ಹೆಚ್​ಡಿಕೆಗೆ ಇರಿಸುಮುರಿಸು

ಬೆಳೆ ಸಾಲ ಪಡೆಯದ ರೈತರು ಯೋಜನೆಯಡಿ ಭಾಗವಹಿಸಲು ನಿಗಧಿತ ಅರ್ಜಿಯೊಂದಿಗೆ ಪ್ರಸಕ್ತ ಸಾಲಿನ ಪಹಣಿ / ಕಂದಾಯ ರಶೀದಿ / ಖಾತೆ ಪುಸ್ತಕ / ಬ್ಯಾಂಕ್ ಖಾತೆ ಪುಸ್ತಕ, ಆಧಾರ್ ನಕಲು ಪ್ರತಿ ಮತ್ತು ಸ್ವಯಂಘೋಷಿತ ಬೆಳೆ ವಿವರಗಳನ್ನು ಹತ್ತಿರದ ರಾಷ್ಟ್ರೀಯ ಅಧಿಕೃತ ಬ್ಯಾಂಕು / ಸಾಮಾನ್ಯ ಸೇವಾ ಕೇಂದ್ರ/ ಗ್ರಾಮ ಒನ್ ಕೇಂದ್ರಗಳಲ್ಲಿ ನೋಂದಾಯಿಸುವುದು. ವಿಮೆ ಮಾಡಿಸುವ ರೈತರು ಫ್ರೂಟ್ಸ್ ತಂತ್ರಾಂಶದ ನೋಂದಣಿ ಸಂಖ್ಯೆಯನ್ನು ಹೊಂದಿರಬೇಕಿದ್ದು, ನೋಂದಣಿ ಸಂಖ್ಯೆಗೆ ಪಹಣಿ ವಿವರಗಳನ್ನು ಜೋಡಿಸಬೇಕಿರುತ್ತದೆ. ನೋಂದಣಿ ಸಂಖ್ಯೆ ಇಲ್ಲದ ರೈತರು ನೋಂದಣಿ ಸಂಖ್ಯೆಯನ್ನು ಮಾಡಿಕೊಂಡು ವಿಮೆಯಲ್ಲಿ ಪಾಲ್ಗೊಳ್ಳಬೇಕಿರುತ್ತದೆ.

ಬೆಳೆ ಸಾಲ ಪಡೆದ ರೈತರನ್ನು ಸಂಬಂಧಿಸಿದ ಬ್ಯಾಂಕಿನವರು ವಿಮೆ ವ್ಯಾಪ್ತಿಗೆ ನೋಂದಾಯಿಸಲಿದ್ದು, ಯೋಜನೆಯಲ್ಲಿ ನೋಂದಾಯಿಸಿಕೊಳ್ಳಲು ಇಚ್ಚಿಸದ ರೈತರು ಸಂಬಂಧಿಸಿದ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರಿಗೆ ನೋಂದಣಿಯ ಅಂತಿಮ ದಿನಾಂಕಕ್ಕಿಂತ 7 ದಿನಗಳು ಮುಂಚಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಿದ್ದಲ್ಲಿ ಅಂತಹ ರೈತರನ್ನು ಯೋಜನೆಯಿಂದ ಕೈಬಿಡಲು ಅವಕಾಶವಿರುತ್ತದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ KSHEMA(ಕ್ಷೇಮ) ಅಧಿಸೂಚಿತ ವಿಮಾ ಸಂಸ್ಥೆಯಾಗಿದೆ. ವಿಮೆ ನೋಂದಣಿಗೆ ಕೊನೆಯ ದಿನಾಂಕ ಜುಲೈ 31 ಆಗಿರುತ್ತದೆ.

ಹೆಚ್ಚಿನ ಮಾಹಿತಿಗೆ ದೇವನಹಳ್ಳಿ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ)- 9480461234, ದೊಡ್ಡಬಳ್ಳಾಪುರ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ)- 9880210892, ಹೊಸಕೋಟೆ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ)- 8217210320, ನೆಲಮಂಗಲ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ)- 9880461607, ರೈತ ಸಂಪರ್ಕ ಕೇಂದ್ರದ ಅಧಿಕಾರಿ, ಹತ್ತಿರದ ಬ್ಯಾಂಕ್ ಶಾಖೆ ಹಾಗೂ ವಿಮಾ ಕಂಪನಿಯ ದೂ.ಸಂ-8884141262 ಸಹಾಯವಾಣಿ ಸಂಖ್ಯೆ- 080 26564537 ಈ ಸಂಖ್ಯೆಗಳಿಗೆ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES