Saturday, September 28, 2024

ಅಂಜಲಿ ಕೊಲೆ : ಇನ್ನೂ ಎಷ್ಟು ಹೆಣ್ಣು ಮಕ್ಕಳ ಬಲಿಯಾಗಬೇಕು : ವಿಜಯೇಂದ್ರ ಕಿಡಿ

ಬೆಂಗಳೂರು : ಸಿಎಂ ಸಿದ್ದರಾಮಯ್ಯನವರೇ, ಇನ್ನೂ ಎಷ್ಟು ಹೆಣ್ಣು ಮಕ್ಕಳ ಬಲಿಯಾಗಬೇಕೆಂದು ನಿಮ್ಮ ಸರ್ಕಾರ ಕಾಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗೇರ ಕೊಲೆ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಅವರು, ಪೊಲೀಸ್ ವ್ಯವಸ್ಥೆ ನಿಷ್ಕ್ರೀಯಗೊಳಿಸಿರುವ ನಿಮ್ಮ ಸರ್ಕಾರದ ನೆರಳಲ್ಲಿ ಅಮಾಯಕ ಹೆಣ್ಣು ಮಕ್ಕಳು ರಕ್ಷಣೆಗಾಗಿ ಪರಿತಪಿಸಿ ಪ್ರಾಣ ಭೀತಿಯಿಂದ ತತ್ತರಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆಯ ಬೆನ್ನಲ್ಲೇ ಕೊಡಗಿನಲ್ಲಿ ಅಪ್ರಾಪ್ತೆ ಮೀನಾಳ ರುಂಡ ಕಡಿದು ರಾಕ್ಷಸನೊಬ್ಬ ಅಟ್ಟಹಾಸ ಮೆರೆದಿದ್ದಾನೆ. ಆಕೆಯ ರಕ್ತ ಆರುವ ಮುನ್ನವೇ ಅಂಜಲಿ ಎಂಬ ಯುವತಿಯನ್ನು ಚಾಕುವಿನಿಂದ ಇರಿದು ಕೊಂದಿರುವ ದಾರುಣ ಘಟನೆ ಮತ್ತದೇ ಹುಬ್ಬಳಿಯಲ್ಲಿ ಘಟಿಸಿರುವುದು ಅತ್ಯಂತ ಅಮಾನುಷವಾದುದು ಎಂದು ಅಸಮಾಧಾನ ಹೊರಹಾಕಿದ್ದಾರೆ.

ಕರ್ನಾಟಕಕ್ಕೆ ಸ್ತ್ರೀ ಹಂತಕ ರಾಜ್ಯ ಕುಖ್ಯಾತಿ

ರಾಜ್ಯ ಸರ್ಕಾರದ ಕಾನೂನು ಸುವ್ಯವಸ್ಥೆ ಹಳಿತಪ್ಪಿದೆ. ಪರಿಣಾಮ, ‘ಕರ್ನಾಟಕ ಸ್ತ್ರೀ ಹಂತಕ ರಾಜ್ಯ’ ಎಂಬ ಕುಖ್ಯಾತಿ ಪಡೆದುಕೊಳ್ಳುತ್ತಿದೆ. ನೇಹಾ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರ ತೋರಿದ ನಿರ್ಲಕ್ಷ್ಯದಿಂದಾಗಿ ಅಪರಾಧ ಕೃತ್ಯಗಳು ಸರಣಿ ರೂಪದಲ್ಲಿ ಘಟಿಸುತ್ತಿವೆ ಎಂದು ಆರೋಪಿಸಿದ್ದಾರೆ.

ಸಿಎಂ, ಗೃಹ ಸಚಿವರು ರಾಜೀನಾಮೆ ನೀಡಲಿ

ಈ ಕೂಡಲೇ ಅಂಜಲಿ ಹಂತಕನ ಸೆರೆಹಿಡಿದು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಜೊತೆಗೆ, ಕಾನೂನು ಸುವ್ಯವಸ್ಥೆ ಸುಭದ್ರಗೊಳಿಸಬೇಕು. ಇಲ್ಲವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಮ್ಮ ವೈಫಲ್ಯತೆಯನ್ನು ಒಪ್ಪಿಕೊಂಡು ರಾಜೀನಾಮೆ ನೀಡಲಿ ಎಂದು ಬಿ.ವೈ. ವಿಜಯೇಂದ್ರ ಆಕ್ರೋಶ ಹೊರಹಾಕಿದ್ದಾರೆ.

RELATED ARTICLES

Related Articles

TRENDING ARTICLES