Monday, May 6, 2024

ಡಿಕೆಶಿ Vs ದೊಡ್ಡಗೌಡ್ರು ಫ್ಯಾಮಿಲಿ ಕಾಳಗ : ಹೆಚ್ಚುವರಿ ಪ್ಯಾರಾ ಮಿಲಿಟರಿ ಪಡೆ ನಿಯೋಜನೆ

ಬೆಂಗಳೂರು : ಮೊದಲ ಹಂತದಲ್ಲಿ ರಾಜ್ಯದ 14 ಲೋಕಸಭಾ ಕ್ಷೇತ್ರಗಳ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಈ 14 ಕ್ಷೇತ್ರಗಳ ಪೈಕಿ ಅತ್ಯಂತ ಹೆಚ್ಚು ಗಮನ ಸೆಳೆದಿರೋದು ಬೆಂಗಳೂರು ಗ್ರಾಮಾಂತರ. ಡಿಕೆಶಿ ಕುಟುಂಬ ಹಾಗೂ ದೊಡ್ಡ ಗೌಡರ ಕುಟುಂಬದ ನೇರ ಕಾಳಗವೇ ಇಲ್ಲಿ ಏರ್ಪಟ್ಟಿದ್ದು, ಆಯೋಗ ಕೂಡ ಹದ್ದಿನ ಕಣ್ಣಿಟ್ಟಿದೆ.

ಬೆಂಗಳೂರು ಗ್ರಾಮಾಂತರ ಸಖತ್ ಹೈವೋಲ್ಟೇಜ್ ರಣಕಣ. ಎಲ್ಲೂ ಕೂಡ ಇಷ್ಟು ದೊಡ್ಡಮಟ್ಟದ ಕಾಳಗ ಇಲ್ಲ ಅಂದ್ರೆ ತಪ್ಪಾಗದು. ಯಾಕಂದ್ರೆ, ಈ ಕ್ಷೇತ್ರ ಕಾಂಗ್ರೆಸ್​ ಭದ್ರಕೋಟೆ. 4ನೇ ಬಾರಿ ಅದೃಷ್ಟ ಪರೀಕ್ಷೆಗಿಳಿದಿರೋ ಡಿಕೆಶಿ ಸೋದರ ಡಿಕೆ ಸುರೇಶ್​​ಗೆ ಈ ಬಾರಿ ಟಫ್ ಫೈಟ್ ಕೊಡಲು ಬಂದಿದ್ದೇ ದೇವೇಗೌಡರ ಅಳಿಯ ಡಾ.ಸಿ.ಎನ್. ಮಂಜುನಾಥ್. ಹೀಗಾಗಿ, ಈ ಕ್ಷೇತ್ರ ಸಾಕಷ್ಟು ಜಿದ್ದಾಜಿದ್ದಿಗೆ ಕಾರಣವಾಗಿದೆ.

ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸೋ ಸಲುವಾಗಿ ಎರಡೂ ಪಕ್ಷಗಳ ಮನವಿ ಮಾಡಿದ್ವು.  ಹೀಗಾಗಿ, ಚುನಾವಣಾ ಆಯೋಗ ಇಲ್ಲಿ ಹೆಚ್ಚುವರಿಯಾಗಿ CRPF ​ಪಡೆಯನ್ನ ನಿಯೋಜಿಸಲು ಮುಂದಾಗಿದೆ. ಅಷ್ಟೇ ಅಲ್ಲದೆ  ಕ್ಷೇತ್ರದ 2,829 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಮಾಡಲು ಮುಂದಾಗಿದೆ. ಒಟ್ಟು 7 ಪ್ಯಾರಾ ಮಿಲಿಟರಿ ಪಡೆ ನಿಯೋಜನೆ ಮಾಡಲು ಮುಂದಾಗಿದೆ.

23 ದ್ವೇಷ ಭಾಷಣದ ಕೇಸ್ ದಾಖಲು

ಸದ್ಯ ರಾಜ್ಯದಲ್ಲಿ ಮೊದಲನೇ ಹಂತದ ಚುನಾವಣೆಯಲ್ಲಿ ಈವರೆಗೆ ಪಕ್ಷಗಳ ವಿರುದ್ಧ ಒಟ್ಟು 23 ದ್ವೇಷ ಭಾಷಣದ ಕೇಸ್ ದಾಖಲಾಗಿವೆ. ಈ ಪೈಕಿ 12 ಬಿಜೆಪಿ ವಿರುದ್ಧ, 9 ಕಾಂಗ್ರೆಸ್ ವಿರುದ್ಧ ಹಾಗೂ 2 ಜೆಡಿಎಸ್ ವಿರುದ್ಧ ಹೇಟ್ ಸ್ಪೀಚ್ ಪ್ರಕರಣ ದಾಖಲಾಗಿವೆ. ಪ್ರಚಾರದಲ್ಲಿ ಮಕ್ಕಳ ಬಳಕೆ ಪ್ರಕರಣದಲ್ಲಿ ತಲಾ 7 ಕೇಸ್ ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ದಾಖಲಾಗಿದೆ.‌ ಧಾರ್ಮಿಕ ಸ್ಥಳಗಳ ಬಳಕೆ ಸಂಬಂಧ 8 ಬಿಜೆಪಿ, 6 ಕಾಂಗ್ರೆಸ್ ಹಾಗೂ JDS ವಿರುದ್ಧ 1 ಪ್ರಕರಣ ದಾಖಲಾಗಿದೆ. ಒಟ್ಟು 189 ಗಂಭೀರ ಸ್ವರೂಪದ ನೀತಿ ಸಂಹಿತೆ ಉಲ್ಲಂಘನೆ ಕೇಸ್​ಗಳು ಕೂಡಾ ದಾಖಲಿಸಲಾಗಿದೆ.

ಒಟ್ಟಿನಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ನಾನಾ? ನೀನಾ? ಎನ್ನುವಷ್ಟರ ಮಟ್ಟಿಗೆ ಬಂದು ನಿಂತಿದೆ. ಯಾವ ಕ್ಷಣದಲ್ಲಿ ಏನ್ಬೇಕಾದ್ರೂ ಆಗಬಹುದು. ಹೀಗಾಗಿ, ಚುನಾವಣಾ ಆಯೋಗದ ಇಲ್ಲಿ ಹದ್ದಿನಗಣ್ಣು ನೆಟ್ಟಿದೆ.

RELATED ARTICLES

Related Articles

TRENDING ARTICLES