Thursday, May 9, 2024

ಪಾಕಿಸ್ತಾನಕ್ಕೆ ಶಾಕ್​: ರಾವಿ ನದಿ ನೀರು ಬಂದ್!

ಶ್ರೀನಗರ: ಆರ್ಥಿಕ ಸಮಸ್ಯೆಗಳಿಂದ ಕಂಗೆಟ್ಟಿರುವ ಪಾಕಿಸ್ತಾನಕ್ಕೆ ಮತ್ತೊಂದು ಶಾಕ್ ಎದುರಾಗಿದೆ. 

ಹೌದು, ಸುಮಾರು ಮೂರು ದಶಕಗಳಿಂದ ಪಾಕಿಸ್ತಾನಕ್ಕೆ ಹರಿಸುತ್ತಿದ್ದ ನೀರನ್ನು ಡ್ಯಾಮ್‌ ಕಟ್ಟುವ ಮೂಲಕ ಕೇಂದ್ರ ಸರ್ಕಾರವು ಸ್ಥಗಿತಗೊಳಿಸಿ ಪಾಕಿಸ್ತಾನಕ್ಕೆ ದೊಡ್ಡ ಶಾಕ್​ ನೀಡಿದೆ.

ಈಗಲೇ ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿರುವ ಶಹಪುರ್ ಕಂಡಿ ಬ್ಯಾರೇಜ್‌ನ ಕಾಮಗಾರಿ ಪೂರ್ಣಗೊಂಡ ನಂತರ ಪಾಕಿಸ್ತಾನಕ್ಕೆ ರಾವಿ ನದಿಯಿಂದ ನೀರು ಹರಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ

1995ರಿಂದಲೂ ನನೆಗುದಿಗೆ ಬಿದ್ದಿದ್ದ ಶಾಹ್‌ಪುರ ಕಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ರಾವಿ ನದಿಯಿಂದ ಪಾಕಿಸ್ತಾನಕ್ಕೆ ಹರಿಯುತ್ತಿದ್ದ ನೀರನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಇದರಿಂದ ಪಾಕಿಸ್ತಾನದ ಕೃಷಿಗೆ ಭಾರಿ ಪೆಟ್ಟು ಬೀಳುವ ಜತೆಗೆ ಭಾರತದ ಲಕ್ಷಾಂತರ ರೈತರಿಗೆ ಈ ನದಿಯ ನೀರಿನಿಂದ ಹೆಚ್ಚಿನ ಪ್ರಮಾಣದಲ್ಲಿ ಅನುಕೂಲವಾಗಲಿದೆ.

ಭಾರತಕ್ಕೆ ಉಳಿತಾಯವಾದ ನೀರು

ಈಗಾಗಲೇ ಪಾಕಿಸ್ತಾನಕ್ಕೆ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ. ಇದರಿಂದಾಗಿ ಜಮ್ಮು-ಕಾಶ್ಮೀರ ಹಾಗೂ ಪಂಜಾಬ್‌ನ 32 ಸಾವಿರ ಹೆಕ್ಟೇರ್‌ ಜಮೀನುಗಳಿಗೆ ನೀರು ಹರಿಸಬಹುದಾಗಿದೆ. ಸುಮಾರು 1,150 ಕ್ಯುಸೆಕ್‌ ನೀರು ಉಳಿತಾಯವಾಗುವುದರಿಂದ ಲಕ್ಷಾಂತರ ರೈತರು ಉತ್ತಮ ಬೆಳೆ ಬೆಳೆಯಲು ಸಹಕಾರಿಯಾಗಲಿದೆ. ಅದರಲ್ಲೂ, ಜಮ್ಮು-ಕಾಶ್ಮೀರದ ಕಠುವಾ, ಸಾಂಬಾ ರೈತರು ಅಣೆಕಟ್ಟಿನ ಲಾಭ ಪಡೆಯಲಿದ್ದಾರೆ.

1995ರಿಂದಲೂ ಈ ಯೋಜನೆಗೆ ಅಡೆತಡೆಗಳು ಇದ್ದವು

ರಾವಿ ನದಿಗೆ ಅಡ್ಡಲಾಗಿ ಅಣೆಕಟ್ಟೆ ಕಟ್ಟಬೇಕು ಎಂಬ ಯೋಜನೆಯು ಹಲವು ಕಾರಣಗಳಿಂದಾಗಿ ನನೆಗುದಿಗೆ ಬಿದ್ದಿತ್ತು. 1995ರಲ್ಲಿ ಪಿ.ವಿ. ನರಸಿಂಹರಾವ್‌ ಅವರು ಪ್ರಧಾನಿಯಾಗಿದ್ದಾಗ ಅಣೆಕಟ್ಟೆ ಕಟ್ಟುವ ಯೋಜನೆ ರೂಪಿಸಲಾಗಿತ್ತು. ಆದರೆ, ಹತ್ತಾರು ಅಡೆತಡೆಗಳಿಂದಾಗಿ ಯೋಜನೆಯು ನನೆಗುದಿಗೆ ಬಿದ್ದಿತ್ತು. ಆದರೆ, 2018ರಲ್ಲಿ ಅಣೆಕಟ್ಟೆ ನಿರ್ಮಾಣ ಕಾಮಗಾರಿಯನ್ನು ಆರಂಭಿಸಲಾಗಿತ್ತು. ಈಗ ಆರು ವರ್ಷಗಳಲ್ಲಿಯೇ ಕಾಮಗಾರಿ ಪೂರ್ಣಗೊಂಡಿದೆ. ಈಗ ನದಿಯ ನೀರು ಪಾಕಿಸ್ತಾನಕ್ಕೆ ಹರಿಯದೆ, ಭಾರತದ ರೈತರು ನೀರಿನ ಲಾಭ ಪಡೆಯಲಿದ್ದಾರೆ.

ಜಲವಿದ್ಯುತ್‌ ಉತ್ಪಾದನೆಗೆ ಅನುಕೂಲ 

ಅಣೆಕಟ್ಟೆಯು ರೈತರಿಗೆ ಅನುಕೂಲವಾಗುವ ಜತೆಗೆ ಜಲವಿದ್ಯುತ್‌ ಉತ್ಪಾದನೆ ಯೋಜನೆಯ ಜಾರಿಗೂ ಭಾರಿ ಅನುಕೂಲವಾಗುತ್ತದೆ. ಇದಕ್ಕೂ ಮೊದಲು ರಾವಿ ನದಿಯ ನೀರು ಹಳೆಯ ಲಖನ್‌ಪುರ ಡ್ಯಾಮ್‌ನಿಂದ ಪಾಕಿಸ್ತಾನದ ಕಡೆ ಹರಿಯುತ್ತಿತ್ತು. ಈಗ ಮಾಧೋಪುರ ಕಾಲುವೆ ಮೂಲಕ ಜಮ್ಮು-ಕಾಶ್ಮೀರ ಹಾಗೂ ಪಂಜಾಬ್‌ ಜಮೀನುಗಳಿಗೆ ನೀರು ಹರಿಸಲಾಗುತ್ತದೆ ಎಂದು ತಿಳಿದುಬಂದಿದೆ. 1960ರಲ್ಲಿ ಸಿಂಧೂ ನದಿ ನೀರು ಹಂಚಿಕೆ ಕುರಿತು ಭಾರತ ಹಾಗೂ ಪಾಕಿಸ್ತಾನವು ಒಪ್ಪಂದ ಮಾಡಿಕೊಂಡಿವೆ. ಅದರಂತೆ, ಭಾರತದ ಹಲವು ನದಿಗಳ ನೀರನ್ನು ಪಾಕಿಸ್ತಾನ ಬಳಸುತ್ತಿದೆ.

RELATED ARTICLES

Related Articles

TRENDING ARTICLES