Sunday, December 8, 2024

ಭೀಕರ ರಸ್ತೆ ಅಪಘಾತ : ಒಂದೇ ಕುಟುಂಬದ ಮೂವರು ಸೇರಿ 6 ಜನ ದುರ್ಮರಣ

ಬೆಳಗಾವಿ: ಎರಡು ದ್ವಿಚಕ್ರ ವಾಹನ ಮತ್ತು ಕಾರು ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ ಒಂದೇ ಕುಟುಂಬದ ಮೂವರು ಸೇರಿ 6 ಜನ ಮೃತಪಟ್ಟಿರುವ ಘಟನೆ ರಾಯಬಾಗ ತಾಲೂಕಿನ ಮುಗಳಖೋಡ ಕಾಲುವೆ ಬಳಿ ನಡೆದಿದೆ.

ಘಟನೆಯ ವಿವರ

ವೇಗವಾಗಿ ಬಂದ ಕಾರು​, ಮುಂದೆ ಚಲಿಸುತ್ತಿದ್ದ ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು ಬಳಿಕ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದೆ. ಪರಿಣಾಮ ಚಾಲಕ ಸಹಿತ ಕಾರಿನಲ್ಲಿದ್ದ ನಾಲ್ಕು ಜನ ಸ್ಥಳದಲ್ಲೇ ಮೃತಪಟ್ಟರೆ, ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದ ಇಬ್ಬರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಮೂಡಲಗಿ ತಾಲೂಕಿನ ಗುರ್ಲಾಪುರ ನಿವಾಸಿಗಳಾದ ಮಲ್ಲಿಕಾರ್ಜುನ ರಾಮಪ್ಪ ಮರಾಠೆ (16), ಆಕಾಶ್ ರಾಮಪ್ಪ ಮರಾಠೆ (14), ಲಕ್ಷ್ಮಿ ರಾಮಪ್ಪ ಮರಾಠೆ (19) ಮತ್ತು ರಾಯಭಾಗ ತಾಲೂಕಿನ ಏಕನಾಥ ಭೀಮಪ್ಪ ಪಡತರಿ (22) ಹಾಗೂ ಮುಗಳಖೋಡ ನಿವಾಸಿ ನಾಗಪ್ಪ ಲಕ್ಷ್ಮಣ್ ಯಾದನ್ನವರ್ (48) ಹಾಗೂ ಮೂಡಲಗಿ ತಾಲೂಕಿನ ದುರದುಂಡಿ ನಿವಾಸಿ ಹನುಮಂತ ಮಲ್ಲಪ್ಪ ಮಲ್ಯಾಗೋಳ (42) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿ ಮೃತಪಟ್ಟ ನಾಲ್ವರ ಪೈಕಿ ಮೂವರು ಒಂದೇ ಕುಟುಂಬದವರಾಗಿದ್ದಾರೆ. ಸ್ಥಳಕ್ಕೆ ಅಥಣಿ ಡಿವೈಎಸ್ಪಿ ಶ್ರೀಪಾದ ಜಲ್ದೆ ಹಾಗೂ ಸಿಪಿಐ ರವೀಂದ್ರ ನಾಯಕವಾಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾರುಗೇರಿ ಪೊಲೀಸ್​ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES