Saturday, August 23, 2025
Google search engine
HomeUncategorizedಶ್ರೀರಂಗಪಟ್ಟಣದ ಪ್ರಕಾಶ್ ರೈ ಫಾರಂ ಹೌಸ್:5 ಎಕರೆ ರಹಸ್ಯ ಗೊತ್ತಾ..?!

ಶ್ರೀರಂಗಪಟ್ಟಣದ ಪ್ರಕಾಶ್ ರೈ ಫಾರಂ ಹೌಸ್:5 ಎಕರೆ ರಹಸ್ಯ ಗೊತ್ತಾ..?!

ಫಿಲ್ಮಿ ಡೆಸ್ಕ್​ : ಕನ್ನಡದ ಅದಮ್ಯ ಚೇತನ ಪ್ರಕಾಶ್ ರೈ ಪ್ಯಾನ್ ಇಂಡಿಯಾ ಸ್ಟಾರ್ ಆದ್ರೂ ಸಹ ರಂಗಭೂಮಿಯನ್ನ ಮರೆತಿಲ್ಲ. ಕಲಾಪೋಷಕನಾಗಿ ಇಂದಿಗೂ ಕಾರ್ಯೋನ್ಮುಖರಾಗಿದ್ದಾರೆ. ಐದು ಎಕರೆ ಜಮೀನು ಖರೀದಿಸಿ, ಅಲ್ಲಿ ರಂಗಪ್ರತಿಭೆಗಳಿಗೊಂದು ಗೂಡು ಕಟ್ಟಿದ್ದಾರೆ. ಫೋಟೋ ಟೀಂ ಕನಸಿಗೆ ರೆಕ್ಕೆ ಕಟ್ಟಿರೋ ರೈ, ಜಮೀನಿನಲ್ಲಿ ಏನೆಲ್ಲಾ ಮಾಡ್ತಿದ್ದಾರೆ ಅನ್ನೋದ್ರ ಸಂಪೂರ್ಣ ಮಾಹಿತಿ ಇಲ್ಲಿದೆ.

ಶ್ರೀರಂಗಪಟ್ಟಣದಲ್ಲಿರೋ ಪ್ರಕಾಶ್ ರೈರ ಐದು ಎಕರೆಯ ಸುಂದರವಾದ ಫಾರಂ ಹೌಸ್​ನ  ಮಧ್ಯದಲ್ಲಿ ಮೂರ್ನಾಲ್ಕು ಕಟ್ಟಡಗಳು ಬಿಟ್ಟರೆ ಉಳಿದಂತೆ ಎಲ್ಲವೂ ಹಚ್ಚ ಹಸಿರು. ಹಕ್ಕಿಗಳ ಕಲರವ. ಸ್ವಚ್ಚವಾದ ತಂಗಾಳಿಯ ತಂಪು. ಅಲ್ಲಿ ಇಪ್ಪತ್ತೈದರಿಂದ ಮೂವತ್ತು ಮಂದಿ ರಂಗಭೂಮಿ ಕಲಾವಿದರು. ಅವರೇ ಕೃಷಿ ಮಾಡ್ತಾ, ಯೋಗ, ಧ್ಯಾನ ಮಾಡ್ತಾ, ನಾಟಕಗಳನ್ನ ಮಾಡುತ್ತಾ ತಮ್ಮ ಮುಂದಿನ ಭವಿಷ್ಯ ರೂಪಿಸಿಕೊಳ್ತಿದ್ದಾರೆ. ಅದೆಲ್ಲದರ ಖರ್ಚು ವೆಚ್ಚಗಳು, ಅವರ ಸ್ಫೂರ್ತಿ, ಹಿಂದಿನ ಅಸಲಿ ಶಕ್ತಿ ಒನ್ ಅಂಡ್ ಓನ್ಲಿ ಪ್ರಕಾಶ್ ರೈ.

ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ದೇಶಾದ್ಯಂತ ಬಹುಭಾಷಾ ಕಲಾವಿದನಾಗಿ ಬಹುಬೇಡಿಕೆಯ ಖಳನಾಯಕ ಹಾಗೂ ಪೋಷಕ ಕಲಾವಿದನಾಗಿ ಮಿಂಚು ಹರಿಸುತ್ತಿರೋ ರೈ, ಮೂಲತಃ ರಂಗಕರ್ಮಿ. ಅವ್ರಿಗೆ ಚೆನ್ನೈನಲ್ಲೊಂದು ತೋಟ, ಮನೆ ಅದೇ ರೀತಿ ಹೈದ್ರಾಬಾದ್​​ನಲ್ಲೊಂದು ತೋಟ ಹಾಗೂ ಮನೆಯಿದ್ದರೂ ಸಹ ತವರೂರಾದ ಕರುನಾಡು, ಅದ್ರಲ್ಲೂ ಶ್ರೀರಂಗಪಟ್ಟಣದಲ್ಲಿ ಐದು ಎಕರೆ ತೋಟ ಮಾಡಿದ್ದಾರೆ. ಅದಕ್ಕೆ ನಿರ್ದಿಗಂತ ಅಂತ ನಾಮಕರಣ ಕೂಡ ಮಾಡಿದ್ದಾರೆ.

ಇದನ್ನೂ ಓದಿ: ಕುಮಟಾ ಆಳ ಸಮುದ್ರದಲ್ಲಿ ಚೀನಾ ಬೋಟ್ ಪತ್ತೆ: ಗೂಢಚರ್ಯೆ ಅನುಮಾನ!

ದೊಡ್ಡ ದೊಡ್ಡ ಸೂಪರ್ ಸ್ಟಾರ್ಸ್​ ಜೊತೆ ಬಿಗ್ ಕಮರ್ಷಿಯಲ್ ಸಿನಿಮಾಗಳನ್ನ ಮಾಡಿಕೊಂಡು ಆರಾಮಾಗಿರೋ ಪ್ರಕಾಶ್ ರೈ, ಕಲಾ ಪೋಷಕನಾಗಿ ಇಷ್ಟದ ಕಾರ್ಯಗಳನ್ನೂ ಮಾಡ್ತಾರೆ. ಅದ್ರ ಒಂದು ಭಾಗವೇ ಈ ನಿರ್ದಿಗಂತ. ರಂಗನತಿಟ್ಟು ಅನ್ನೋ ರಂಗಭೂಮಿ ಕಲಾವಿದರ ವೇದಿಕೆ. ಕೆರೆಯ ನೀರನ್ನ ಕೆರೆಗೇ ಚೆಲ್ಲಿ ಅನ್ನೋ ಮಾತಿನಂತೆ, ತಾನೊಬ್ಬ ರಂಗಭೂಮಿ ಕಲಾವಿದ. ಸದ್ಯ ರಂಗಭೂಮಿಯ ಮೂಲಕ ಬದುಕು ರೂಪಿಸಿಕೊಳ್ಳ ಬಯಸೋ ಒಂದಷ್ಟು ಮಂದಿಗೆ ಆಸರೆ ಆಗಬೇಕು ಅನ್ನೋ ಅವ್ರ ಆಶಯ ನಿಜಕ್ಕೂ ಅದ್ಭುತ, ಅನನ್ಯ. ಹಾರಲಿಕ್ಕೆ ಬೇಕಿರೋ ರೆಕ್ಕೆಗಳನ್ನ ಕೊಡೋ ಅವ್ರ ಹೃದಯ ವೈಷಾಲ್ಯತೆಯನ್ನ ಮೆಚ್ಚಲೇಬೇಕು.

 

ಹೌದು.. ಇದು ಪ್ರಕಾಶ್ ರೈರ ರಂಗನತಿಟ್ಟಿನಲ್ಲಿ ರಿಲೀಸ್ ಆದ ಫೋಟೋ ಅನ್ನೋ ಚಿತ್ರದ ಟ್ರೈಲರ್ ಝಲಕ್. ಉತ್ಸವ್ ಅನ್ನೋ ಉತ್ತರ ಕರ್ನಾಟಕ ಪ್ರತಿಭೆ ಮಾಡಿರೋ ಮಾನವೀಯತೆ ಕುರಿತ ಈ ಸಿನಿಮಾದ ಟ್ರೈಲರ್​ನ ಡಾಲಿ ಧನಂಜಯ ಹಾಗೂ ಲೂಸಿಯಾ ಪವನ್ ಕುಮಾರ್ ಲಾಂಚ್ ಮಾಡಿದ್ರು. ಅಷ್ಟೇ ಅಲ್ಲ, ಚಿತ್ರತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಡಾಲಿ, ಇರುವವರು ಇಲ್ಲದವರ ಬಗ್ಗೆ ಯೋಚನೆ ಮಾಡ್ತಿರಬೇಕು ಎಂದರು.

20 ವರ್ಷದ ಸಣ್ಣ ಯುವಕ ಮಾಡಿರೋ ಫೋಟೋ ಚಿತ್ರ, ಲಾಕ್​ಡೌನ್ ವೇಳೆಯಲ್ಲಿ ಜನ ಅನುಭವಿಸಿದ ಒಂದಷ್ಟು ಯಾತನೆಗಳ ಮೇಲೆ ನಿಂತಿದೆ. ನಮ್ಮಂಥವ್ರು ಕೂಡ ಮಾಡಲಾಗದ ಕೆಲಸವನ್ನ ಈ ಹುಡ್ಗ ಮಾಡಿದ್ದಾನೆ. ಹಾಗಾಗಿ ಇದ್ರ ರಿಲೀಸ್​ಗೆ ಸಾಥ್ ಕೊಡ್ತಿದ್ದೀನಿ ಅಂತ ಸಿನಿಮಾನ ಪ್ರೆಸೆಂಟ್ ಮಾಡ್ತಿರೋ ರೈ ಹೇಳಿದ್ರು. ಸಿನಿಮಾ ಇದೇ ಮಾರ್ಚ್​ 15ರಂದು ಕೆಆರ್​​ಜಿ ಸ್ಟುಡಿಯೋಸ್ ಮೂಲಕ ರಾಜ್ಯಾದ್ಯಂತ ರಿಲೀಸ್ ಆಗ್ತಿದೆ. ಅಲ್ಲದೆ, ಧನುಷ್, ವೆಟ್ರಿಮಾರನ್​ ಮೂಲಕ ಇದನ್ನ ದೊಡ್ಡ ಮಟ್ಟಕ್ಕೆ ಜನಕ್ಕೆ ತಲುಪಿಸ್ತೀನಿ ಅಂದ್ರು ಪ್ರಕಾಶ್ ರೈ.

ಒಟ್ಟಾರೆ ರೈರಲ್ಲಿರೋ ಕಲಾಭಿಮಾನ, ಭಾಷಾಭಿಮಾನ, ಹೊಸ ಪ್ರತಿಭೆಗಳನ್ನ ಬೆಳೆಸೋಕೆ ಮುಂದಾಗೋ ಗುಣದ ಬಗ್ಗೆ ಎಷ್ಟು ಹೇಳಿದ್ರೂ ಕಮ್ಮಿನೇ. ಇವ್ರ ಆಶಯಗಳು ಮತ್ತಷ್ಟು ಮಂದಿಗೆ ಸ್ಫೂರ್ತಿ ಆಗಲಿ ಅನ್ನೋದು ನಮ್ಮ ಆಶಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments