Wednesday, January 22, 2025

ನಾನೂ ಶೂದ್ರ-ನೀವೂ ಶೂದ್ರರು-ರವಿಕುಮಾರ್ ಕೂಡ ಶೂದ್ರರು: ಯಾಕ್ರೀ ಇದೆಲ್ಲಾ: ಸಿಎಂ

ಬೆಂಗಳೂರು : ನಾನೂ ಶೂದ್ರ-ನೀವೂ ಶೂದ್ರರು-ರವಿಕುಮಾರ್ ಕೂಡ ಶೂದ್ರರು. ಹೀಗಿದ್ದೂ ಯಾಕ್ರೀ ಇದೆಲ್ಲಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಯ ಶ್ರೀನಿವಾಸ್ ಪೂಜಾರಿ ಮತ್ತು ರವಿಕುಮಾರ್ ಅವರನ್ನು ಪ್ರಶ್ನಿಸಿದರು.

ವಿಧಾನ ಪರಿಷತ್ ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಉತ್ತರಿಸುವ ಸಂದರ್ಭದಲ್ಲಿ ಈ ರೀತಿ ಪ್ರಶ್ನಿಸಿದರು.

ಸಂವಿಧಾನ ಜಾರಿಯ ಮುನ್ನಾ ದಿನ ಅಂಬೇಡ್ಕರ್ ಅವರು ಪಾರ್ಲಿಮೆಂಟಿನಲ್ಲಿ ಮಾಡಿದ ಭಾಷಣದ ಪ್ರಮುಖ ಅಂಶಗಳನ್ನು ಉಲ್ಲೇಖಿಸಿ ಮುಖ್ಯಮಂತ್ರಿಗಳು ವಿವರವಾಗಿ ಮಾತನಾಡುತ್ತಿದ್ದರು. ಈ ವೇಳೆ ತಮ್ಮ ಮಾತಿಗೆ ಮಧ್ಯ ಪ್ರವೇಶಿಸಿದ ಪೂಜಾರ್ ಮತ್ತು ರವಿಕುಮಾರ್ ಅವರಿಗೆ ನಾವೂ ಶೂದ್ರರು, ನೀವೂ ಶೂದ್ರರು ಎನ್ನುವುದನ್ನು ನೆನಪಿಸಿದರು.

ಇದನ್ನೂ ಓದಿ: ಕಾವೇರಿ ಜಲ ವಿವಾದ: ಕರ್ನಾಟಕದ ಪರ ವಾದ ಮಂಡಿಸಿದ್ದ ಸುಪ್ರೀಂ ಕೋರ್ಟ್​ ವಕೀಲ ನಾರಿಮನ್ ನಿಧನ

ಪ್ರಭಲ ವಿರೋಧ ಪಕ್ಷ ಪ್ರಜಾಪ್ರಭುತ್ವಕ್ಕೆ ಪೂರಕ. ಆಪರೇಷನ್ ಕಮಲ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಇದೇ ಸಂದರ್ಭದಲ್ಲಿ ಪ್ರಸ್ತಾಪಿಸಿದರು.

ಕುವೆಂಪು ಅವರ ಸರ್ವೋದಯವಾಗಲಿ ಸರ್ವರಲಿ ಎನ್ನುವ ಮಾತನ್ನು ಉಲ್ಲೇಖಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜೆಡಿಎಸ್ ಸದಸ್ಯ ಬೋಜೇಗೌಡರು ಕುವೆಂಪು ಅವರ ಮಾತನ್ನು ಮುಂದುವರೆಸಿದರು. ಈ ವೇಳೆ ಮುಖ್ಯಮಂತ್ರಿಗಳು, ” ಕುವೆಂಪು ಆಶಯ ಇಟ್ಟುಕೊಂಡು ಇನ್ನೂ ಬಿಜೆಪಿ-ಜೆಡಿಎಸ್ ಜತೆಗಿದ್ದೀರಿ ಏಕೆ ಎಂದು ಪ್ರಶ್ನಿಸಿದರು. ಜತೆಗೆ ಈಗ ನಿಮ್ಮದು JD “S” ಅಲ್ಲ ಈಗ JD “C” ಆಗಿದೆ ಅಂದರು. ಇದಕ್ಕೆ ಕಾಂಗ್ರೆಸ್ ಸದಸ್ಯರು C ಫಾರ್ ಕಮ್ಯುನಲ್ ಎಂದು ಟೇಬಲ್ ಬಡಿದರು.

ಈ ಮಧ್ಯೆ ಬಿಜೆಪಿಯ ರವಿಕುಮಾರ್ ಅವರು ಪರಿಷತ್ ವಿರೋಧ ಪಕ್ಷದ ನಾಯಕ ಪೂಜಾರಿ ಅವರಿಗೆ ಕಿವಿಯಲ್ಲಿ ಏನೋ ಹೇಳುತ್ತಿದ್ದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು, ರವಿಕುಮಾರ್ ಅವರೇ RSS ಹೇಳಿಕೊಟ್ಟಿದ್ದನ್ನೆಲ್ಲಾ ನೀವು ಆಮೇಲೆ ಹೇಳಿಕೊಡಿ. ನನ್ನ ಮಾತು ಮುಗಿಸಲು ಬಿಡಿ ಎಂದರು.

ನಮ್ಮ ಸಂವಿಧಾನವು ನಮ್ಮದು ಒಕ್ಕೂಟ ವ್ಯವಸ್ಥೆ ಎಂದು ರೂಪಿಸಿದೆ. ಇದನ್ನು ಇಡೀ ದೇಶ ಒಪ್ಪಿಕೊಂಡಿದೆ. ಆದರೆ ಈ ಒಕ್ಕೂಟ ವ್ಯವಸ್ಥೆಯನ್ನು ಹಾಳು ಮಾಡಬಾರದು. ನರೇಂದ್ರ ಮೋದಿಯವರು ‘ಕೋ ಆಪರೇಟಿವ್ ಫೆಡರಿಲಿಸಂ’ ಎಂದು ಹೇಳುತ್ತಾರೆ. ಆದರೆ ಅವರ ಮತ್ತು ಕೇಂದ್ರ ಸರ್ಕಾರದ ನಡವಳಿಕೆಯಲ್ಲಿ ಇದು ಕಾಣುತ್ತಿಲ್ಲ ಎನ್ನುತ್ತಾ ಕೇಂದ್ರದಿಂದ ರಾಜ್ಯಕ್ಕೆ ಕಳೆದ 10 ವರ್ಷಗಳಿಂದ ನಿರಂತರವಾಗಿ ಆಗುತ್ತಿರುವ ಅನ್ಯಾಯದ ಅಂಕಿ ಅಂಶಗಳನ್ನು ಬಿಚ್ಚಿಟ್ಟರು.

ರಾಜ್ಯದಿಂದ ತೆರಿಗೆ ಕೇಂದ್ರಕ್ಕೆ ಹೋಗುತ್ತದೆ. ರಾಜ್ಯದಿಂದ 4.30 ಲಕ್ಷ ಕೋಟಿ ತೆರಿಗೆ ಹೋಗುತ್ತಿದೆ. ತೆರಿಗೆ ಹಂಚಿಕೆಯಲ್ಲಿ 2023-24ಕ್ಕೆ 37252 ಕೋಟಿ ರೂ. ಬರುತ್ತಿದೆ. ಕೇಂದ್ರ ಪುರಸ್ಕೃತ ಯೋಜನೆಗಳಿಂದ 13005 ಕೋಟಿ , ಒಟ್ಟು 50257 ಕೋಟಿ ಮಾತ್ರ ರೂ. ಬರುತ್ತಿದೆ. ಕೇಂದ್ರದ ಬಜೆಟ್ ಗಾತ್ರ ಹೆಚ್ಚಾದ ಹಾಗೆ ರಾಜ್ಯದ ಪಾಲು ಕೂಡ ನಿಯಮಬದ್ದವಾಗಿ ಹೆಚ್ಚಾಗಬೇಕು. ಆದರೆ, ಕೇಂದ್ರದ ಬಜೆಟ್ ಗಾತ್ರ ಹೆಚ್ಚಾಗುತ್ತಾ ಹೋದಂತೆ, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಪಾಲು, ಕನ್ನಡಿಗರ ಹಕ್ಕಿನ ತೆರಿಗೆ ಮತ್ತು ಅನುದಾನದ ಪಾಲು ಕಡಿಮೆ ಆಗುತ್ತಿದೆ. ಕನ್ನಡಿಗರ ಹಿತರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ರಾಜ್ಯ ಬಲಿಷ್ಠವಾದರೆ, ಕೇಂದ್ರ ಬಲಿಷ್ಠವಾಗುತ್ತದೆ ಎಂದರು.

RELATED ARTICLES

Related Articles

TRENDING ARTICLES