Wednesday, January 22, 2025

ಬೆಳ್​ ಬೆಳಗ್ಗೆ ಮೆಟ್ರೋ ಪ್ರಯಾಣಿಕರಿಗೆ ಶಾಕ್: ​ನೇರಳೆ ಮಾರ್ಗದ ಸಂಚಾರ ಸ್ಥಗಿತ   

ಬೆಂಗಳೂರು: ತಾಂತ್ರಿಕ ದೋಷದಿಂದ ನೇರಳೆ ಮಾರ್ಗದ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದ್ದು,ಮೆಟ್ರೋ  ಪ್ರಯಾಣಿಕರಿಗೆ ಬೆಳ್ಳಂ ಬೆಳಗ್ಗೆ ಶಾಕ್ ಆಗಿದೆ.

ಬೈಯಪ್ಪನಹಳ್ಳಿಯಿಂದ ಗರುಡಾಚಾರ್‌ಪಾಳ್ಯ ನಡುವೆ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿದೆ. ಇದರಿಂದ ಮೆಟ್ರೋ ಪ್ರಯಾಣಿಕರಿಗೆ ಭಾರೀ ತೊಂದರೆಯಾಗಿದ್ದು ನಗರದ ಹಲವು ಮೆಟ್ರೋ ನಿಲ್ದಾಣಗಳಲ್ಲಿ ಜನ ದಟ್ಟಣೆ ಉಂಟಾಗಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸುತ್ತೇವೆಂದ ಬಿಎಂಆರ್​ಸಿಎಲ್ ತಿಳಿಸಿದೆ.

ನಮ್ಮ ಮೆಟ್ರೋ ತಾಂತ್ರಿಕ ತೊಂದರೆ ಬಗ್ಗೆ ಎಕ್ಸ್​ ಖಾತೆ ಮೂಲಕ ಟ್ವೀಟ್ ಮಾಡಿರುವ ಬಿಎಂಆರ್​ಸಿಎಲ್, ತಾಂತ್ರಿಕ ದೋಷದಿಂದ ಬೈಯಪ್ಪನಹಳ್ಳಿಯಿಂದ ಗರುಡಾಚಾರ್ಪಾಳ್ಯ ನಡುವೆ ನೇರಳೆ ಮಾರ್ಗದ ರೈಲುಗಳು ನಿಧಾನಗತಿಯಲ್ಲಿ ಚಲಿಸುತ್ತಿವೆ. ಇದರಿಂದ ರೈಲು ವೇಳಾಪಟ್ಟಿಯಲ್ಲಿ ಅಡಚಣೆಯಾಗುತ್ತದೆ. ಆದಷ್ಟು ಬೇಗ ಸಮಸ್ಯೆ ಪರಿಹರಿಸಲು ನಮ್ಮ ತಂಡಗಳು ಕೆಲಸ ಮಾಡುತ್ತಿವೆ. ಅನಾನುಕೂಲತೆಗಾಗಿ ವಿಷಾದಿಸುತ್ತೇವೆ ಎಂದ ಟ್ವೀಟ್ ಮಾಡಿದೆ.

ಪರ್ಯಾಯ ಸಾರಿಗೆಯನ್ನು ಬಳಸುವಂತೆ ನಿಲ್ದಾಣಗಳಲ್ಲಿ ಬಿಎಂಆರ್‌ಸಿಎಲ್‌ ಘೋಷಣೆ

ನೇರಳೆ ಮಾರ್ಗದಲ್ಲಿ ಸುಮಾರು 45 ನಿಮಿಷದಿಂದ ಯಾವುದೇ ಮೆಟ್ರೋ ರೈಲುಗಳು ಸಂಚರಿಸುತ್ತಿಲ್ಲ. ಮೆಟ್ರೋ ನಿಲ್ದಾಣಗಳಲ್ಲಿಯೇ ಪ್ರಯಾಣಿಕರು ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಭಾರೀ ಜನದಟ್ಟಣೆ ಉಂಟಾಗಿದ್ದು, ಎಲ್ಲ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿದೆ. ತಾಂತ್ರಿಕ ಸಮಸ್ಯೆಗೂ ಮುನ್ನ ಹಲವು ನಿಲ್ದಾಣಗಳಲ್ಲಿ ಮೆಟ್ರೋ ಹತ್ತಿದ್ದ ಪ್ರಯಾಣಿಕರನ್ನು ಇಳಿಯುವಂತೆ ಮನವಿ ಮಾಡಲಾಗುತ್ತಿದ್ದು, ಪರ್ಯಾಯ ಸಾರಿಗೆಯನ್ನು ಬಳಸುವಂತೆ ನಿಲ್ದಾಣಗಳಲ್ಲಿ ಬಿಎಂಆರ್‌ಸಿಎಲ್‌ ಘೋಷಣೆ ಮಾಡುತ್ತಿದೆ ಎಂದು ತಿಳಿದು ಬಂದಿದೆ.

ಮೆಟ್ರೋ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿರುವುದರಿಂದ ಮೆಜೆಸ್ಟಿಕ್‌ನ ಕೆಂಪೇಗೌಡ ಮೆಟ್ರೋ ಸ್ಟೇಷನ್‌ ಸೇರಿ ಎಲ್ಲ ನಿಲ್ದಾಣಗಳಲ್ಲಿಯೂ ಭಾರೀ ಜನದಟ್ಟಣೆ ಉಂಟಾಗಿದೆ. ತಡೆಗಾಗಿ ಕ್ಷಮಿಸಿ, ಆದಷ್ಟು ಬೇಗ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಸುತ್ತೇವೆ. ದಯವಿಟ್ಟು ಮುಂದಿನ ಸೂಚನೆಗಾಗಿ ನಿರೀಕ್ಷಿಸಿ ಎಂದು ಮೆಟ್ರೋದ ಸೂಚನಾ ಸ್ಕ್ರೀನ್‌ಗಳಲ್ಲಿ ಸಂದೇಶವನ್ನು ಬಿಎಂಆರ್‌ಸಿಎಲ್‌ ಪ್ರದರ್ಶಿಸುತ್ತಿದೆ.

RELATED ARTICLES

Related Articles

TRENDING ARTICLES