ನವದೆಹಲಿ : ಪ್ರತಿಭಟನೆ ವೇಳೆ ರಸ್ತೆ ತಡೆದು ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯಗೆ ರಾಜ್ಯ ಹೈಕೋರ್ಟ್ ದಂಡ ವಿಧಿಸಿದ್ದನ್ನು ಪ್ರಶ್ನಿಸಿ ಸುಪ್ರಿಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ನಡೆಯಿತು. ಮುಂದಿನ ಆದೇಶದ ವರೆಗೆ ಸಿದ್ದರಾಮಯ್ಯ ವಿರುದ್ದದ ಕ್ರಿಮಿನಲ್ ವಿಚಾರಣೆಗೆ ತಡೆ ನೀಡಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಇದರೊಂದಿಗೆ ಸಿದ್ದರಾಮಯ್ಯ ಹಾಗೂ ಇತರ ಕಾಂಗ್ರೆಸ್ ನಾಯಕರು ತುಸು ನಿರಾಳರಾಗುವಂತಾಗಿದೆ. ಆದರೆ, ಆರು ವಾರಗಳ ಒಳಗಾಗಿ ಪ್ರತಿಕ್ರಿಯೆ ನೀಡುವಂತೆ ಸರ್ವೋಚ್ಚ ನ್ಯಾಯಾಲಯ ಸೂಚನೆ ನೀಡಿದೆ.
ಸಿಎಂ ಸಿದ್ದರಾಮಯ್ಯ ವಿರುದ್ಧದ ಎಫ್ಐಆರ್ ರದ್ದು ಮಾಡಬೇಕೆಂದು ಕೋರಿ ಸುಪ್ರೀಂ ಕೋರ್ಟ್ನಲ್ಲಿ ಕೆಲವು ದಿನಗಳ ಹಿಂದೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್ 10 ಸಾವಿರ ರೂ. ದಂಡ ವಿಧಿಸಿರುವುದನ್ನು ಕೂಡ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು.
ಇದನ್ನೂ ಓದಿ: Powertv Impact : ವಸತಿ ಶಾಲೆಗಳಲ್ಲಿ ಕುವೆಂಪು ಸಾಲುಗಳ ಬದಲಾವಣೆಗೆ: ವರದಿಗೆ ಎಚ್ಚೆತ್ತ ಸರ್ಕಾರ
ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಹಾಗೂ ಕಾಂಗ್ರೆಸ್ ನಾಯಕರ ಪರ ಅಭಿಷೇಕ್ ಮನುಸಿಂಘ್ವಿ ವಾದ ಮಂಡನೆ ಮಾಡಿದರು. ಕಾಂಗ್ರೆಸ್ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಇದೊಂದು ಶಾಂತಿಯುತ ಪ್ರತಿಭಟನೆಯಾಗಿತ್ತು. ಪ್ರತಿಭಟನೆಯಿಂದ ಯಾವುದೇ ರೀತಿಯ ಸಮಸ್ಯೆಯಾಗಿರಲಿಲ್ಲ. ಇದು ರಾಜಕೀಯ ಪ್ರತಿಭಟನೆ ಎಂದು ಕಪಿಲ್ ಸಿಬಲ್ ವಾದ ಮಂಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ರಾಜಕೀಯ ಪಕ್ಷಗಳ ಪ್ರತಿಭಟನೆ ಎಂದ ಕೂಡಲೆ ಕೇಸ್ ವಜಾ ಮಾಡಬೇಕೇ ಏಂದು ಪ್ರಶ್ನಿಸಿತು. ಜತೆಗೆ, ನೀವು ಪ್ರತಿಭಟನೆಗೆ ಅನುಮತಿ ಪಡೆದಿದಿದ್ದಿರೇ ಎಂದು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಸಿಬಲ್, ಪ್ರತಿಭಟಿಸುವುದು ಮೂಲಭೂತ ಹಕ್ಕು. ಪ್ರತಿಭಟಿಸುವುದು ಅಪರಾಧವಲ್ಲ ಎಂದು ವಾದ ಮಂಡಿಸಿದರು.