ವಿಜಯಪುರ: ಜಿಲ್ಲೆಯಲ್ಲಿರುವ ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಕುವೆಂಪು ಅವರ ಕವಿತೆಯ ಸಾಲುಗಳನ್ನು ಬದಲಾಯಿಸಿರುವ ಬಗ್ಗೆ ನಿಮ್ಮ ಪವರ್ ಟಿವಿ ಸುದ್ದಿ ಪ್ರಸಾರಮಾಡುತ್ತಿದ್ದಂತೆ ಸಾಹಿತಿಗಳು, ರಾಜಕಾರಣಿಗಳು ಹಾಗೂ ಸಾರ್ವಜನಿಕ ವಲಯದಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಸುದ್ದಿ ಪ್ರಸಾರವಾದ ಒಂದೇ ಗಂಟೆಯಲ್ಲಿ ಕುವೆಂಪು ಅವರ ಸಾಲುಗಳನ್ನು ಎತಾವತ್ತಾಗಿ ಈ ಹಿಂದಿನಂತೆ ಮುಂದುವರೆಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಘಾಳಪೂಜಿ ಗ್ರಾಮದ ಮೊರಾರ್ಜಿ ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ‘ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ’ ಎಂಬ ಬರಹದ ಬದಲು, ‘ಜ್ಞಾನ ದೇಗುಲವಿದು, ಧೈರ್ಯವಾಗಿ ಪ್ರಶ್ನಿಸಿ’ ಎಂದು ಬರಹವನ್ನು ಬದಲಾವಣೆ ಮಾಡಲಾಗಿದೆ. ಇದಕ್ಕೆ ಪ್ರತಿಪಕ್ಷ ನಾಯಕ ಆರ್. ಅಶೋಕ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 3 ದಿನ ಭಾರಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಹೈ ಅಲರ್ಟ್
ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಅವರು ಬರಹ ಬದಲಾವಣೆ ಮಾಡಲು ಟೆಲಿಗ್ರಾಂ ಗ್ರೂಪ್ನಲ್ಲಿ ಸೂಚನೆ ನೀಡಿದ್ದರು. ಆದರೆ ಕುವೆಂಪು ಅವರ ಬರಹ ಬದಲಾವಣೆಗೆ ಸರ್ಕಾರದ ಸುತ್ತೋಲೆ ಹಾಗೂ ಆದೇಶ ಇಲ್ಲ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಟೆಲಿಗ್ರಾಂ ಗ್ರೂಪ್ನಲ್ಲಿ ಬಂದಿರೋ ಸೂಚನೆ ಮೇರೆಗೆ ವಸತಿ ಶಾಲೆಯ ಪ್ರಾಂಶುಪಾಲರಿಗೆ ಸೂಚನೆ ನೀಡಲಾಗಿದೆ. ನಮಗೆ ಕುವೆಂಪು ಅವರ ಕುರಿತು ಅವರ ಸಾಹಿತ್ಯದ ಕುರಿತು ಅಪಾರ ಗೌರವವಿದೆ. ಕುವೆಂಪು ಅವರಿಗೆ ಅಗೌರವ ತರುವ ಉದ್ದೇಶ ನಮ್ಮದಲ್ಲ ಎಂದು ಪುಂಡಲೀಕ ಮಾನವರ ಹೇಳಿದ್ದಾರೆ.