ಫಿಲ್ಮಿ ಡೆಸ್ಕ್ : ವೀರ ಸಿಂಧೂರ ಲಕ್ಷ್ಮಣ. ನಾಲ್ಕೈದು ವರ್ಷಗಳಿಂದ ಸದ್ದು ಮಾಡ್ತಿರೋ ಸಿನಿಮಾ ಟೈಟಲ್. ಇದು ರಾಬರ್ಟ್ ಖ್ಯಾತಿಯ ಉಮಾಪತಿ ಶ್ರೀನಿವಾಸ್ರ ಡ್ರೀಮ್ ಪ್ರಾಜೆಕ್ಟ್ ಕೂಡ ಹೌದು. ಆದ್ರೀಗ ಸದ್ದಿಲ್ಲದೆ ಈ ಸಿನಿಮಾ ಬೇರೆ ಬ್ಯಾನರ್ ಮೂಲಕ ಡಿಬಾಸ್ ದರ್ಶನ್ ಅಕೌಂಟ್ಗೆ ಬಿದ್ದಿದೆ. ಹಾಗಾದರೆ ಟೈಟಲ್ ರಿಜಿಸ್ಟರ್ ಮಾಡಿಸಿ, ಅಡ್ವಾನ್ಸ್ ಮಾಡಿದ ಉಮಾಪತಿ ಶ್ರೀನಿವಾಸ್ಗೆ ಅನ್ಯಾಯ ಆಗಲಿಲ್ಲವೇ..? ದರ್ಶನ್ ಹೀಗೆ ಮಾಡಿದ್ದು ಎಷ್ಟು ಸರಿ ಅನ್ನೋದನ್ನ ನೀವೇ ಒಮ್ಮೆ ಓದಿ.
ರಾಬರ್ಟ್.. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರಿಯರ್ನಲ್ಲಿ ನೂರು ಕೋಟಿ ಗಳಿಸಿದ ಮೊಟ್ಟ ಮೊದಲ ಸಿನಿಮಾ. ಡಿಬಾಸ್ಗೆ ಈ ಹಿಂದಿನ ಐವತ್ತನಾಲ್ಕು ಸಿನಿಮಾಗಳು ಮಾಡದ ಬಾಕ್ಸ್ ಆಫೀಸ್ ದಾಖಲೆಯನ್ನ ರಾಬರ್ಟ್ ಸಿನಿಮಾ ಮಾಡುತ್ತೆ ಅಂದ್ರೆ ಅದಕ್ಕೆ ಕಾರಣ ಒಂದೊಳ್ಳೆ ಚಿತ್ರತಂಡ ಹಾಗೂ ಅದರ ಅನ್ನದಾತ. ಅರ್ಥಾತ್ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ.
ಇದನ್ನೂ ಓದಿ: ಆಂಗ್ಲ ಟೈಟಲ್ಸ್ ಹಿಂದೆ ಬಿದ್ದ ಸೂಪರ್ ಸ್ಟಾರ್ಸ್, ಅಸಲಿ ಕಥೆ ಏನು?
2021ನೇ ಸಾಲಿನಲ್ಲಿ ತೆರೆಕಂಡ ರಾಬರ್ಟ್ ಸಿನಿಮಾ ಉಮಾಪತಿ ಹಾಗೂ ದರ್ಶನ್ ನಡುವಿನ ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸಿತು. ಅದೇ ಸಂದರ್ಭದಲ್ಲಿ ಕಾಟೇರ ಹಾಗೂ ವೀರ ಸಿಂಧೂರ ಲಕ್ಷ್ಮಣ ಚಿತ್ರಗಳ ಟೈಟಲ್ಗಳು ಕೂಡ ಸುದ್ದಿಯಾದವು. ಕಾರಣ ರಾಬರ್ಟ್ ಬಳಿಕ ದರ್ಶನ್ ಜೊತೆಗೇನೇ ಉಮಾಪತಿ ಫಿಲಂಸ್ ನಿರ್ಮಾಣದಲ್ಲಿ ಕಾಟೇರ ಹಾಗೂ ವೀರ ಸಿಂಧೂರ ಲಕ್ಷ್ಮಣ ಚಿತ್ರಗಳು ತಯಾರಾಗೋದು ಖಚಿತವಾದವು. ಅದಕ್ಕೆ ಅಂತ ವರಮಹಾಲಕ್ಷ್ಮೀ ಹಬ್ಬದ ದಿನವೇ ಉಮಾಪತಿ ಅವರು ಡೈರೆಕ್ಟರ್ ತರುಣ್ ಸುಧೀರ್ಗೆ 10 ಲಕ್ಷ ಚೆಕ್ ಹಾಗೂ ನಟ ದರ್ಶನ್ಗೆ 10 ಲಕ್ಷ ಕ್ಯಾಶ್ ನೀಡಿರ್ತಾರೆ.
ಹತ್ತು ಲಕ್ಷ ಚೆಕ್ ಪಡೆದ ಡೈರೆಕ್ಟರ್ ತರುಣ್ ಸುಧೀರ್ ಕೂಡ ರಾಬರ್ಟ್ ಗೆಲುವಿನ ಖುಷಿಯಲ್ಲಿ ಕಾಟೇರ ಸಿನಿಮಾನ ಉತ್ಸುಕದಲ್ಲಿ ಕಟ್ಟೋ ಪ್ರಯತ್ನ ಮಾಡ್ತಾರೆ. ಅಷ್ಟರಲ್ಲಿ ಉಮಾಪತಿ ಅವರು ನಟ ಪುನೀತ್ ರಾಜ್ಕುಮಾರ್ ಹಾಗೂ ಯಶ್ ಜೊತೆ ಸಿನಿಮಾ ಮಾಡಲು ಮುಂದಾಗ್ತಾರೆ. ಅಲ್ಲದೆ, ದರ್ಶನ್- ಉಮಾಪತಿ ನಡುವೆ ಸಾಕಷ್ಟು ಮನಸ್ತಾಪಗಳು ಬಂದು ಸಂಬಂಧಗಳು ಕೂಡ ಹಾಳಾಗುತ್ತೆ. ಮುಂದೆ ನಡೆಯೋದೆಲ್ಲಾ ಉಲ್ಟಾ ಪಲ್ಟಾ.
ಹೌದು.. ಕಾಟೇರ ಸಿನಿಮಾದ ಟೈಟಲ್ ಉಮಾಪತಿ ಫಿಲಂಸ್ ಬ್ಯಾನರ್ನಡಿ ರಿಜಿಸ್ಟರ್ ಆಗಿರುತ್ತೆ. ಆದ್ರೆ ದರ್ಶನ್- ತರುಣ್ ಕಾಂಬೋನಲ್ಲಿ ರಾಕ್ಲೈನ್ ಪ್ರೊಡಕ್ಷ ನ್ನಲ್ಲಿ ಸಿನಿಮಾ ತಯಾರಾಗುತ್ತೆ. ಕೊನೆ ಪಕ್ಷ ಉಮಾಪತಿ ಅವ್ರಿಗೆ ಟೈಟಲ್ ಕಾರ್ಡ್ನಲ್ಲಿ ಒಂದು ಸ್ಪೆಷಲ್ ಥ್ಯಾಂಕ್ಸ್ ಕೂಡ ಹಾಕಲ್ಲ ಕಾಟೇರ ಟೀಂ. ಇತ್ತ ಕಾಟೇರ ಕೂಡ 275ಕ್ಕೂ ಅಧಿಕ ಕೋಟಿ ಕಲೆಕ್ಷನ್ ಮೂಲಕ ಮತ್ತೊಂದು ಸಾರ್ವಕಾಲಿಕ ದಾಖಲೆ ಬರೆಯುತ್ತೆ.
ಇದನ್ನೂ ಓದಿ: Goodachari 2: ‘ಗೂಢಾಚಾರಿ-2’ ಟೀಂ ಸೇರಿದ ಬಾಲಿವುಡ್ ಸ್ಟಾರ್ ಇಮ್ರಾನ್ ಹಶ್ಮಿ
ಕಾಟೇರ ಸಿನಿಮಾ ಹೇಗೂ ಉಮಾಪತಿ ಫಿಲಂಸ್ನಲ್ಲಿ ಆಗಲಿಲ್ಲ. ಅಟ್ಲೀಸ್ಟ್ ವೀರ ಸಿಂಧೂರ ಲಕ್ಷ್ಮಣ ಚಿತ್ರವಾದ್ರೂ ತಯಾರಾಗುತ್ತಾ ಅಂದ್ರೆ, ಅದಕ್ಕೆ ಈಗಾಗಲೇ ನೋ ಅನ್ನೋ ಆನ್ಸರ್ ಸಿಕ್ಕಾಗಿದೆ. ಯಾಕಂದ್ರೆ ಡಿಬಾಸ್ ಬರ್ತ್ ಡೇ ಪ್ರಯುಕ್ತ ಡಿ-59 ಸಿನಿಮಾ ಅನೌನ್ಸ್ ಆಗಿದೆ. ಅದೇ ವೀರ ಸಿಂಧೂರ ಲಕ್ಷ್ಮಣನ ಸಾಹಸಗಾಥೆ. ಆದ್ರೆ ನಿರ್ಮಾಪಕರು ಮಾತ್ರ ಉಮಾಪತಿ ಅಲ್ಲ, ಈ ಹಿಂದೆ ದರ್ಶನ್ಗೆ ಯಜಮಾನ ಸಿನಿಮಾ ಮಾಡಿದ್ದ ಶೈಲಜಾ ನಾಗ್.
ಅರೇ.. ಮನೆ ಕಟ್ಟೋಕೆ ಅಡಿಪಾಯ ಹಾಕಿದವರನ್ನೇ ಬಿಟ್ಟು ಮನೆ ಕಟ್ಟುತ್ತಿದ್ದಾರಾ ದರ್ಶನ್ ಅಂತೀರಾ..? ಯೆಸ್ ಅಫ್ಕೋರ್ಸ್.. ಉಮಾಪತಿ ಜೊತೆಗಿನ ವೈಯಕ್ತಿಕ ಮನಸ್ತಾಪಗಳಿಗೂ ಈ ಸಿನಿಮಾ ಕಮಿಟ್ಮೆಂಟ್ಸ್ಗೂ ಏನು ಸಂಬಂಧ..? ಐದೂವರೆ ಕೋಟಿ ಸಂಭಾವನೆ ಪಡೀತಿದ್ದ ದರ್ಶನ್ ರಾಬರ್ಟ್ಗಾಗಿ 9 ಕೋಟಿ ದುಬಾರಿ ಸಂಭಾವನೆ ಪಡೆದಿದ್ದರು. ಅದಾದ ಬಳಿಕ ಎರಡು ಕೋಟಿ ರೂಪಾಯಿ ಉಮಾಪತಿಗೆ ಸಾಲ ಅಂತ ಐಟಿಆರ್ ಫೈಲ್ ಮಾಡಿದ್ರು ದರ್ಶನ್. ಅದರ ಅರ್ಥ ಮತ್ತೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡಲು 2 ಕೋಟಿ ಅಡ್ವಾನ್ಸ್ ಹಣ ಪಡೆದಿದ್ದರು. ಅದನ್ನ ಎಲೆಕ್ಷನ್ಗೆ ನಿಂತಾಗ ಎಲೆಕ್ಷನ್ ಕಮಿಷನ್ಗೂ ದಾಖಲೆ ನೀಡಿದ್ರು ಉಮಾಪತಿ.
ಕಾಟೇರ ಸಕ್ಸಸ್ ಬಳಿಕ 9-10 ಕೋಟಿ ಇದ್ದ ಸಂಭಾವನೆಯನ್ನ 23 ಕೋಟಿಗೆ ಏರಿಸಿಕೊಂಡಿರೋ ದರ್ಶನ್, ಈ ಹಿಂದೆ ಅಡ್ವಾನ್ಸ್ ಪಡೆದ ನಿರ್ಮಾಪಕರನ್ನ ಮರೆತಿರೋದು ನಿಜಕ್ಕೂ ಕೆಟ್ಟ ಬೆಳವಣಿಗೆ. ಹಿರಿಯನಟ ಸುಧೀರ್ ನಟಿಸ್ತಿದ್ದ ನಾಟಕ ಹಾಗೂ ಕನ್ನಡಿಗರ ಪಾಲಿನ ರಾಬಿನ್ಹುಡ್ ಆಗಿದ್ದ ವೀರ ಸಿಂಧೂರ ಲಕ್ಷ್ಮಣ ಕುರಿತ ಐತಿಹಾಸಿಕ ಸಿನಿಮಾ ಮಾಡೋದು ಉಮಾಪತಿ ಅವ್ರ ದೊಡ್ಡ ಡ್ರೀಮ್ ಆಗಿತ್ತು. ಆದ್ರೀಗ ಉಮಾಪತಿ ಅಡ್ವಾನ್ಸ್ ಹಣದಲ್ಲಿ ಕಥೆ ಮಾಡಿರೋ ಡೈರೆಕ್ಟರ್ ಕೂಡ ಉಮಾಪತಿ ಅವ್ರನ್ನ ಬಿಟ್ಟು ಬೇರೆ ನಿರ್ಮಾಪಕರ ಜೊತೆ ಸಿನಿಮಾ ಮಾಡೋಕೆ ಹೊರಟಿರೋದು ಅಚ್ಚರಿ ಮೂಡಿಸಿದೆ.
ಆದ್ರೀಗ ವೀರ ಸಿಂಧೂರ ಲಕ್ಷ್ಮಣ, ಸಿಂಧೂರ ಲಕ್ಷ್ಮಣ, ಕ್ರಾಂತಿವೀರ ಸಿಂಧೂರ ಲಕ್ಷ್ಮಣ, ಶೂರ ಸಿಂಧೂರ ಲಕ್ಷ್ಮಣ ಹೀಗೆ ನಾಲ್ಕು ಬೇರೆ ಬೇರೆ ಟೈಟಲ್ಗಳು ಉಮಾಪತಿ ಬ್ಯಾನರ್ನಡಿ ಫಿಲ್ಮ್ ಚೇಂಬರ್ನಲ್ಲಿ ರಿಜಿಸ್ಟರ್ ಆಗಿವೆ. ಆ ಟೈಟಲ್ಗಳನ್ನ ಬಿಟ್ಟು ಬೇರೆ ಯಾವ ಟೈಟಲ್ನಲ್ಲಿ ಸಿನಿಮಾ ಮಾಡ್ತಾರೆ ಅನ್ನೋದು ಕುತೂಹಲ ಕೆರಳಿಸಿದೆ. ಬಂದ ದಾರಿಯನ್ನ ಮರೆತು ಹೊಸ ದಾರಿ ಹುಡುಕಿಕೊಂಡಿರೋ ದರ್ಶನ್ರ ಈ ನಡೆ ನಿಜಕ್ಕೂ ಒಪ್ಪುವಂತದ್ದಲ್ಲ. ಇನ್ನೂ ಕಾಟೇರ ಟೈಟಲ್ ವಿಚಾರದಲ್ಲಿ ಸೈಲೆಂಟ್ ಆಗಿದ್ದ ಉಮಾಪತಿ ವೀರ ಸಿಂಧೂರ ಲಕ್ಷ್ಮಣ ಟೈಟಲ್ ವಿಚಾರಕ್ಕೆ ಬಂದ್ರೆ ಮೌನ ಮುರಿಯೋದ್ರಲ್ಲಿ ಅನುಮಾನವೇ ಇಲ್ಲ. ಆದ್ರೆ ಇದು ಬೇರೆ ಬೇರೆ ಆಯಾಮಗಳನ್ನ ಪಡೆದುಕೊಳ್ಳೋ ಬದಲಿಗೆ ದರ್ಶನ್ ಅವ್ರು ಉಮಾಪತಿ ಜೊತೆಗೇನೇ ಸಿಂಧೂರ ಲಕ್ಷ್ಮಣ ಸಿನಿಮಾ ಮಾಡಿದ್ರೆ ಎಲ್ಲವೂ ಸುಖಾಂತ್ಯವಾಗಲಿವೆ. ಇಲ್ಲವಾದಲ್ಲಿ ಮತ್ತೊಂದು ದೊಡ್ಡ ವಿವಾದಕ್ಕೆ ಈ ಬೆಳವಣಿಗೆ ನಾಂದಿ ಹಾಡಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ