Sunday, December 22, 2024

ಆಂಗ್ಲ ಟೈಟಲ್ಸ್ ಹಿಂದೆ ಬಿದ್ದ ಸೂಪರ್ ಸ್ಟಾರ್ಸ್​, ಅಸಲಿ ಕಥೆ ಏನು?

ಫಿಲ್ಮಿ ಡೆಸ್ಕ್​: ಪ್ಯಾನ್ ಇಂಡಿಯಾ ಅಬ್ಬರ, ಆರ್ಭಟಗಳ ನಡುವೆ ಅಚ್ಚ ಕನ್ನಡದ ಸ್ವಚ್ಚ ಶೀರ್ಷಿಕೆಯ ಸಿನಿಮಾಗಳು ಕಣ್ಮರೆಯಾಗುತ್ತಿವೆ. ಅದರಲ್ಲೂ ಬಿಗ್ ಸ್ಟಾರ್ಸ್​ಗಳೆಲ್ಲಾ ಇಂಗ್ಲಿಷ್ ಟೈಟಲ್ಸ್ ಮೊರೆ ಹೋಗುತ್ತಿದ್ದಾರೆ. ಯಶ್, ಕಿಚ್ಚ, ದಚ್ಚು, ಧ್ರುವ, ಉಪ್ಪಿ ಹೀಗೆ ಎಲ್ಲಾರ ಅಪ್​ಕಮಿಂಗ್ ಸಿನಿಮಾಗಳೆಲ್ಲಾ ಇಂಗ್ಲಿಷ್ ಟೈಟಲ್ಸ್​ನಿಂದ ತುಂಬಿ ತುಳುಕುತ್ತಿವೆ. ಇವುಗಳ ಹಿಂದಿನ ಅಸಲಿ ಕಥೆ ಏನು ಎನ್ನುವ ಇಂಟ್ರೆಸ್ಟಿಂಗ್​ ಮಾಹಿತಿ ಇಲ್ಲಿದೆ.

ಟಾಕ್ಸಿಕ್, ಮ್ಯಾಕ್ಸ್, ಡೆವಿಲ್, ಮಾರ್ಟಿನ್, ಕೆಡಿ ಹಾಗೂ ಯುಐ. ಸದ್ಯ ನಮ್ಮ ಕನ್ನಡ ಚಿತ್ರರಂಗದಿಂದ ಹೊರಬರುತ್ತಿರೋ ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳು. ಇವು ಬಿಗ್ ಸ್ಟಾರ್​ಗಳ ಬಿಗ್ ಸಿನಿಮಾಗಳಾಗಿದ್ದು, ದೊಡ್ಡ ಬ್ಯಾನರ್​​ಗಳಿಂದ ತಯಾರಾಗ್ತಿರೋ ಬಿಗ್ ಬಜೆಟ್ ಚಿತ್ರಗಳಾಗಿವೆ. ಅತೀವ ನಿರೀಕ್ಷೆ ಮೂಡಿಸಿರೋ ಈ ಸಿನಿಮಾಗಳ ಟೈಟಲ್​​ಗಳಲ್ಲಿ ಕನ್ನಡವೇ ಕಾಣದಾಗಿರೋದು ದುರಂತ.

ಇದನ್ನೂ ಓದಿ: ಲೋಕಸಭಾ ಚುನಾವಣೆ: ಮೈಸೂರು ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಡಾಲಿ ಧನಂಜಯ ಕಣಕ್ಕೆ!

ಹೌದು, ಸಿನಿಮಾ ಸಿಕ್ಕಾಪಟ್ಟೆ ಪವರ್​ಫುಲ್ ಮಾಧ್ಯಮ. ಅವುಗಳ ಮೂಲಕ ಕನ್ನಡದ ಕಂಪನ್ನ ವಿಶ್ವಕ್ಕೆ ಸಾರಬೇಕೇ ಹೊರತು ಕನ್ನಡವನ್ನೇ ತುಳಿಯುವಂತಾಗಬಾರದು. ಅದರಲ್ಲೂ ಪ್ಯಾನ್ ಇಂಡಿಯಾ ಕಾನ್ಸೆಪ್ಟ್​ ಬಂದ ಮೇಲಂತೂ ಚಿತ್ರ ವಿಚಿತ್ರ ಟೈಟಲ್​​ಗಳನ್ನ ಇಡೋಕೆ ಶುರುವಿಟ್ಟಿವೆ ಚಿತ್ರತಂಡಗಳು. ಎಲ್ಲಾ ಭಾಷಿಗರಿಗೆ ಕನೆಕ್ಟ್ ಆಗೋ ಟೈಟಲ್ ಬೇಕು ಅನ್ನೋದು ಇದರ ಉದ್ದೇಶ ಆಗಿದ್ದು, ಇಂಗ್ಲಿಷ್ ಟೈಟಲ್​​ಗಳ ಮೊರೆ ಹೋಗ್ತಿದ್ದಾರೆ.

ಸೂಪರ್ ಸ್ಟಾರ್​​ಗಳು ನಮ್ಮ ಕನ್ನಡ ನಾಡು, ನುಡಿ, ಜಲ, ಸಂಸ್ಕೃತಿಯ ರಾಯಭಾರಿಗಳಾಗಬೇಕು. ಈ ಹಿಂದೆ ಅಂದ್ರೆ ಡಾ. ರಾಜ್​ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್​ನಾಗ್ ಕಾಲದಲ್ಲಿ ಸ್ವಚ್ಚ ಕನ್ನಡದ ಶೀರ್ಷಿಕೆಗಳ ಚಿತ್ರಗಳು ಬರ್ತಿದ್ದವು. ಮಿಗಿಲಾಗಿ ಕಾದಂಬರಿಗಳನ್ನ ಆಧರಿಸಿದ ಸಿನಿಮಾಗಳನ್ನೂ ಮಾಡುತ್ತಿದ್ದರು. ಆದ್ರೀಗ ಕ್ರೌರ್ಯವೇ ಚಿತ್ರದ ಜೀವಾಳ ಅನ್ನುವಂತಾಗಿದೆ. ಹೊಡಿ, ಬಡಿ, ಕಡಿ ಸಿನಿಮಾಗಳದ್ದೇ ದರ್ಬಾರ್.

ಕೆಜಿಎಫ್ ಬಳಿಕ ಮತ್ತೊಂದು ಮಹತ್ವದ ಹೆಜ್ಜೆ ಇಡೋಕೆ ಶುರುವಿಟ್ಟಿರೋ ಯಶ್, ತಮ್ಮ ಚಿತ್ರಕ್ಕೆ ಟಾಕ್ಸಿಕ್ ಅನ್ನೋ ಟಿಪಿಕಲ್ ಆಂಗ್ಲ ಟೈಟಲ್ ಇಟ್ಟಿದ್ದಾರೆ. ಹಾಲಿವುಡ್ ಶೈಲಿಯ ಈ ಸಿನಿಮಾ ಗ್ಲೋಬಲ್ ಲೆವೆಲ್​ಗೆ ರೀಚ್ ಆಗಬೇಕು, ಒಳ್ಳೆಯ ಬ್ಯುಸಿನೆಸ್ ಆಗಬೇಕು ಅನ್ನೋದಷ್ಟೇ ಇದರ ಮೂಲ ಉದ್ದೇಶ. ಇನ್ನು ನಿನ್ನೆಯಷ್ಟೇ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡಿರೋ ಡಿಬಾಸ್ ದರ್ಶನ್, ತಮ್ಮ ಮುಂದಿನ ಚಿತ್ರ ಡೆವಿಲ್ ಟೀಸರ್ ಲಾಂಚ್ ಮಾಡಿದ್ದಾರೆ. ಅದರ ಟೈಟಲ್ ಕೂಡ ಇಂಗ್ಲಿಷ್​​ಮಯ.

ತಮಿಳು ಪ್ರೊಡಕ್ಷನ್ ಹೌಸ್​​ನಡಿ ತಯಾರಾಗ್ತಿರೋ ಕಿಚ್ಚ ಸುದೀಪ್​ರ ಮ್ಯಾಕ್ಸ್ ಚಿತ್ರದ ಟೈಟಲ್ ಕೂಡ ಇದರಿಂದ ಹೊರತಾಗಿಲ್ಲ. ಬಹುಭಾಷಾ ಸಿನಿಮಾ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಟೈಟಲ್ ಇಟ್ಟಿದ್ದರಾದ್ರೂ, ಇವ್ಯಾವೂ ನಮ್ಮ ಕನ್ನಡ ಸಿನಿಮಾ ಅನ್ನೋ ಫೀಲ್ ಕೊಡ್ತಿಲ್ಲ. ಅಲ್ಲದೆ ಧ್ರುವ ಸರ್ಜಾರ ಮಾರ್ಟಿನ್ ಹಾಗೂ ಕೆಡಿ ಸಿನಿಮಾ ಟೈಟಲ್ಸ್ ಕೂಡ ಡಿಫರೆಂಟ್ ಆಗಿವೆ. ಎಲ್ಲೂ ಕನ್ನಡ ಕಾಣ್ತಿಲ್ಲ.

ಇಷ್ಟೆಲ್ಲಾ ಯಾಕೆ, ಬಹಳ ದಿನಗಳ ನಂತರ ನಿರ್ದೇಶನಕ್ಕೆ ಮರಳಿರೋ ಉಪೇಂದ್ರ ತಮ್ಮ ಚಿತ್ರಕ್ಕೆ ಯು&ಐ ಅನ್ನೋ ಶೀರ್ಷಿಕೆ ಇಟ್ಟಿದ್ದಾರೆ. ಅರೇ.. ನಮ್ಮ ಕನ್ನಡದ ಅಸ್ಮಿತೆಯನ್ನ ಉಳಿಸಬೇಕಾದ ಸೂಪರ್ ಸ್ಟಾರ್​ಗಳೇ ಹೀಗೆ ಇಂಗ್ಲಿಷ್ ಟೈಟಲ್ಸ್ ಹಿಂದೆ ಬಿದ್ದಿರೋದು ನೋಡಿದರೇ ನಿಜಕ್ಕೂ ನೋವುಂಟಾಗ್ತಿದೆ. ಈ ಬಗ್ಗೆ ಫಿಲ್ಮ್ ಚೇಂಬರ್, ಟೈಟಲ್ ಕಮಿಟಿ, ಕನ್ನಡ ಪರ ಸಂಘಟನೆಗಳು, ಕನ್ನಡಪರ ಹೋರಾಟಗಾರರು ಮೌನ ತಾಳಿರೋದು ಬಹುದೊಡ್ಡ ಅಚ್ಚರಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES