Sunday, December 22, 2024

ಇದೊಂದು ‘ಅಡ್ಡಕಸುಬಿ’ ಬಜೆಟ್ : ಆರ್. ಅಶೋಕ್

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನೋಡಿದರೆ ಇದೊಂದು ‘ಅಡ್ಡಕಸುಬಿ’ ಬಜೆಟ್‌ನಂತೆ ಕಾಣುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಲೇವಡಿ ಮಾಡಿದ್ದಾರೆ.

ರಾಜ್ಯ ಬಜೆಟ್​ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಬಜೆಟ್ ತಯಾರಿಕೆ ಎನ್ನುವುದು ಗಂಭೀರವಾದ ಪವಿತ್ರ ಸಾಂವಿಧಾನಿಕ ಕರ್ತವ್ಯ. ಆದರೆ, ಬಜೆಟ್​ನಲ್ಲಿ ಅರ್ಥಶಾಸ್ತ್ರವೂ ಇಲ್ಲ, ಅಭಿವೃದ್ಧಿಯೂ ಇಲ್ಲ, ದೂರದೃಷ್ಟಿಯೂ ಇಲ್ಲ ಎಂದು ಕುಟುಕಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಅತ್ಯಂತ ನೀರಸ, ಅಭಿವೃದ್ಧಿ ಶೂನ್ಯ, ದೂರದೃಷ್ಟಿ ಇಲ್ಲದ ಅಡ್ಡಕಸುಬಿ ಬಜೆಟ್. ಬಜೆಟ್ ಬಗೆಗಿನ ನಿರೀಕ್ಷೆಗಳೆಲ್ಲ ಹುಸಿಯಾಗಿದ್ದು, ಇದು‌‌ ‘ಸಾಲರಾಮಯ್ಯನ ಸೋಗಲಾಡಿ’ ಬಜೆಟ್ ಆಗಿದೆ ಎಂದು ಟೀಕಿಸಿದ್ದಾರೆ.

ಮತ್ತೆ ‘ಸಾಲ ಭಾಗ್ಯ’ ಹೊರಿಸಿದ್ದಾರೆ

ಸಿದ್ದರಾಮಯ್ಯನವರು ತಮ್ಮ ಮೊದಲ ಅವಧಿಯಲ್ಲಿ ಮಾಡಿದ ಅತಿದೊಡ್ಡ ಸಾಧನೆ ಎಂದರೆ ಒಂದು ಲಕ್ಷ ಕೋಟಿಗೂ ಹೆಚ್ಚು ಸಾಲ. ಆ ಮೂಲಕ ರಾಜ್ಯದ ಪ್ರತಿಯೊಬ್ಬ ಪ್ರಜೆಯ ತಲೆಯ ಮೇಲೆ 44,000ಕ್ಕೂ ಅಧಿಕ ಸಾಲದ ಹೊರೆ ಹೇರಿದ್ದಾರೆ. ಆ ಭಾಗ್ಯ, ಈ ಭಾಗ್ಯ ಎಂದು ರಾಜ್ಯದ ಜನತೆಯ ಮೇಲೆ ‘ಸಾಲ ಭಾಗ್ಯ’ ಹೊರಿಸಿದ್ದರು ಎಂದು ಹೇಳಿದ್ದಾರೆ.

ಸರ್ವರಿಗೂ ತೆರಿಗೆ, ಸರ್ವರಿಗೂ ಸಾಲ

ಹಳಿ ತಪ್ಪಿಸಿದ್ದ ರಾಜ್ಯದ ಆರ್ಥಿಕ ಶಿಸ್ತನ್ನ, ಬಿಜೆಪಿ ಸರ್ಕಾರ ಕೋವಿಡ್ ಸಂಕಷ್ಟದ ಹೊರತಾಗಿಯೂ ಸರಿದಾರಿಗೆ ತಂದಿತ್ತು. ಆದರೆ, ಈಗ ತಮ್ಮ ಎರಡನೇ ಅವಧಿಯಲ್ಲೂ ಸಿದ್ದರಾಮಯ್ಯ ರಾಜ್ಯವನ್ನು ದೊಡ್ಡ ಸಾಲದ ಸುಳಿಯಲ್ಲಿ ಸಿಲುಕಿಸಿದ್ದಾರೆ. ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎಂಬುದು ಈ ಸರ್ಕಾರದಲ್ಲಿ ‘ಸರ್ವರಿಗೂ ತೆರಿಗೆ, ಸರ್ವರಿಗೂ ಸಾಲ’ ಎಂಬಂತಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES